ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಸಮ್ಮೇಳನಾಧ್ಯಕ್ಷರ ನುಡಿ


ನಾಡೋಜ ಡಾ. ಸಾರಾ ಅಬೂಬಕರ್

ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷತೆ ವಹಿಸಲು ನನ್ನನ್ನು ಆಯ್ಕೆ ಮಾಡಿಕೊಂಡ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂದರಾ ಭೂಪತಿ ಹಾಗೂ ಸಂಘದ ಎಲ್ಲಾ ಸದಸ್ಯೆಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನರ್ಪಿಸುತ್ತೇನೆ. ನಾನೆಂದೂ ಒಂದೇ ಒಂದು ಪ್ರಶಸ್ತಿ ಅಥವಾ ಇನ್ನಿತರ ಸ್ಥಾನಮಾನವನ್ನು ಪಡೆಯಲು ಈವರೆಗೆ ಯಾರೊಡನೆಯೂ ಪ್ರಭಾವ ಬೀರಿರಲಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿದ್ದರೆ ಪ್ರಶಸ್ತಿಗಳು ದೊರೆಯುತ್ತವೆಂಬ ಕಲ್ಪನೆಯೂ ನನಗಿರಲಿಲ್ಲ. ನನ್ನ ಸಮಾಜದ ಮಹಿಳೆಯರು ಧರ್ಮದ ಹೆಸರಿನಲ್ಲಿ ಹಲವು ವಿಧದ ಶೋಷಣೆ ಮತ್ತು ದೌರ್ಜನ್ಯಗಳಿಗೊಳಗಾಗುತ್ತಿರುವುದನ್ನು ಸಮಾಜದ ಮುಂದಿಟ್ಟು ಸಮಾಜದ ಗಮನ ಸೆಳೆಯಬೇಕು; ಇಂತಹ ನಿಯಮಗಳಲ್ಲಿ ಏನಾದರೂ ನ್ಯಾಯವಿದೆಯೇ ಎಂಬ ಪ್ರಶ್ನೆಯನ್ನು ಸಾಹಿತ್ಯ ಕೃತಿಗಳ ಮೂಲಕ ಸಮಾಜದ ಮುಂದಿಡಬೇಕು ಎಂಬ ಆಶಯದಿಂದ ಲೇಖನಿ ಕೈಗೆತ್ತಿಕೊಂಡೆ. ಪ್ರಾರಂಭದಲ್ಲಿ ನನಗೆ ಪತ್ರಿಕೆಗಳು ಪ್ರೋತ್ಸಾಹ ನೀಡದಿದ್ದರೂ ಒಮ್ಮೆ ಗುರುತಿಸಲ್ಪಟ್ಟ ಬಳಿಕ ನಾನು ಹಿಂತಿರುಗಿ ನೋಡಿಯೇ ಇಲ್ಲವೆನ್ನಬಹುದು. ಅಂತಹ ಸಹೃದಯತೆಯಿಂದ ನನ್ನನ್ನು ಸಾಹಿತ್ಯ ಕ್ಷೇತ್ರಕ್ಕೆ ಸ್ವಾಗತಿಸಿ ಸ್ವೀಕರಿಸಿದ ಕನ್ನಡಿಗರ ಈ ಹೃದಯ ವೈಶಾಲ್ಯತೆಗೆ ನಾನು ಮಾರುಹೋಗುತ್ತಲೇ ಇದ್ದೇನೆ. ಒಂದರ ಬಳಿಕ ಒಂದರಂತೆ ಪ್ರಶಸ್ತಿ, ಸನ್ಮಾನಗಳನ್ನು ನೀಡುತ್ತಲೇ ಇದ್ಧೀರಿ. ನಾನು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದೇನೆ ಎಂದು ಪತ್ರಿಕೆಯೊಂದು ಬರೆದೂ ಆಯಿತು. ಪ್ರಶಸ್ತಿಗಳನ್ನು ನಾನು ಬಾಚಿಕೊಂಡಿಲ್ಲ; ಕನ್ನಡಿಗರು ನನ್ನ ಮೇಲೆ ಪ್ರಶಸ್ತಿಗಳ ಮಳೆ ಸುರಿಸಿದ್ದಾರೆ ಎನ್ನುವುದು ಹೆಚ್ಚು ಸೂಕ್ತವಾಗಿದೆ ಎಂದಷ್ಟೇ ಹೇಳುತ್ತಿದ್ದೇನೆ. ಇಂದು ನನಗೆ ಇಂತಹ ಗೌರವ ನೀಡುತ್ತಿರುವ ತಮಗೆಲ್ಲರಿಗೂ ಮತ್ತೊಮ್ಮೆ ವಂದಿಸುವೆ.

ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿ ಅಖಂಡ ಕರ್ನಾಟಕ ಸ್ಥಾಪಿಸಿ, ಕನ್ನಡಿಗರೆಲ್ಲರನ್ನೂ ಒಂದುಗೂಡಿಸಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಜಗದ್ವಿಖ್ಯಾತಗೊಳಿಸಬೇಕೆಂಬುದು ಕನ್ನಡಿಗರ ಕನಸಾಗಿತ್ತು. ಆಗಲೇ ಭಾಷಾವಾರು ಪ್ರಾಂತ್ಯಗಳಿಗಾಗಿ ಆಂದೋಲನವೂ ಪ್ರಾರಂಭವಾಗಿತ್ತು. ಪೊಟ್ಟಿ ಶ್ರೀರಾಮುಲು ಎಂಬ ತೆಲುಗು ಮುಖಂಡರೊಬ್ಬರು ಐವತ್ತೆಂಟು ದಿನಗಳ ವರೆಗೆ ಉಪವಾಸ ಸತ್ಯಾಗ್ರಹ ಮಾಡಿ ಪ್ರಾಣ ಕಳೆದುಕೊಂಡ ಬಳಿಕವಷ್ಟೇ ಸರಕಾರ ಸಾರ್ವಜನಿಕರ ಈ ಬೇಡಿಕೆಯನ್ನು ಮನ್ನಿಸಿತು. 1956ರ ನವೆಂಬರ್ ತಿಂಗಳ ದಿನಾಂಕ ಒಂದರಂದು ಕನ್ನಡ ನಾಡಿನ ಉದಯವಾಯಿತು. ಮತ್ತೂ ಕೆಲವು ವರ್ಷಗಳ ಬಳಿಕ ಮೈಸೂರು ರಾಜ್ಯವೆಂಬ ಹೆಸರು ಮಾಯವಾಗಿ ಕರ್ನಾಟಕವೆಂಬ ಹೆಸರು ಸ್ಥಿರವಾಯಿತು. ಸುವರ್ಣ ಕರ್ನಾಟಕವನ್ನೂ ಆಚರಿಸಿದೆವು. ಇನ್ನು ಕೆಲವು ವರ್ಷಗಳಲ್ಲಿ ವಜ್ರ ಕರ್ನಾಟಕವನ್ನೂ ಆಚರಿಸಲಿದ್ದೇವೆ.

ಆ ರೀತಿ ಕನ್ನಡ ನಾಡಿನ ಉದಯವಾದೊಡನೆ ಕರ್ನಾಟಕದ ಒಂದು ಪಾದ ಕರ್ನಾಟಕದಿಂದ ಜಾರಿ ಕೇರಳದಲ್ಲಿ ಸೇರಿಕೊಂಡಿತು. ಬೆಳಗಾವಿ ಕರ್ನಾಟಕದಲ್ಲಿ ಉಳಿದ ಕಾರಣಕ್ಕಾಗಿ ಕನ್ನಡಿಗರು ಕಾಸರಗೋಡು ಎಂಬ ಕನ್ನಡ ನಾಡನ್ನು ಮರೆತೇ ಬಿಟ್ಟರು. ಈ ಮರೆವು ಎಷ್ಟು ಆಳವಾಗಿದೆಯೆಂದರೆ ಇಂದು ಕೆಲವು ಕನ್ನಡಿಗರು ನನ್ನೊಡನೆ, “ನೀವು ಕನ್ನಡ ಎಲ್ಲಿ ಕಲಿತಿರಿ?” ಎಂದು ಕೇಳುವುದಿದೆ. ಬೆಳಗಾವಿ ಎಂಬ ಕರ್ನಾಟಕದ ಒಂದು ಕೈ ಕರ್ನಾಟಕದಲ್ಲಿ ಉಳಿದುದಕ್ಕಾಗಿ ಕಾಸರಗೋಡು ಎಂಬ ಪಾದವನ್ನು ಮರೆತೇ ಬಿಟ್ಟಿದ್ದಾರೆ. ಅದನ್ನು ಕನ್ನಡಿಗರಿಗೆ ಜ್ಞಾಪಿಸುವುದಕ್ಕಾಗಿ ಕಾಸರಗೋಡಿನ ನನ್ನಂತಹ ಕೆಲವರು ನಿಮ್ಮೊಡನಿದ್ದೇವೆ. ನೂರು ವರ್ಷ ಪೂರ್ತಿಯಾದ ಕವಿ ಕಯ್ಯಾರ ಕಿಂಞ್ಞಣ್ಣ ರೈಗಳು ಎದ್ದು ನಡೆದಾಡಲು ಸಾಧ್ಯವಿರುವವರೆಗೂ ಕಾಸರಗೋಡು ಕನ್ನಡ ನಾಡೆಂದು ಹೋರಾಡಿದರು. ಇಂದು ಅವರ ಧ್ವನಿ ಕ್ಷೀಣವಾಗಿದೆ.

ಕಾಸರಗೋಡಿನಲ್ಲಿ ಮಾತ್ರ ಒಂದು ವಿಶೇಷತೆ ಇದೆ. ಕಾಸರಗೋಡಿನಲ್ಲಿ ಬೆಳಗಾವಿಯಲ್ಲಾಗುವಂತೆ ಎಂದೂ ಭಾಷೆಗಾಗಿ ಸಂಘರ್ಷ ನಡೆದಿಲ್ಲ. ಮಲಯಾಳಿಗಳ ಆ ಸಹೃದಯತೆಯನ್ನು ನಾವು ಮೆಚ್ಚಲೇ ಬೇಕು. ನಿರಂಜನರ ಪುಸ್ತಕವೊಂದು ಮಲಯಾಳದಲ್ಲಿ ಅನುವಾದಗೊಂಡು ಅದರ ಬಿಡುಗಡೆಯಾದಾಗ ಅಲ್ಲಿ ಮಲಯಾಳಿಗಳೆಲ್ಲರೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಕನ್ನಡಿಗರು ಬೆರಳೆಣಿಕೆಯಲ್ಲಿ ಮಾತ್ರ ಇದ್ದರು. ಆ ಕೃತಿಯ ಐವತ್ತು ಪ್ರತಿಗಳೂ ಅಲ್ಲೇ ಮಾರಾಟವಾದುವು. ಮಲಯಾಳಿಗಳ ಇಂತಹ ಹೃದಯ ವೈಶಾಲ್ಯತೆಯಿಂದಾಗಿ ಕಾಸರಗೋಡು ಎಲ್ಲಿದ್ದರೇನು? ಇಂಡಿಯಾದೊಳಗೇ ಇದೆ ತಾನೇ ಎಂಬ ದೊಡ್ಡತನವನ್ನು ನಾವೂ ತೋರಿಸಿಕೊಳ್ಳುತ್ತೇವೆ! ಹೀಗೆ ಮಲಯಾಳಿಗಳು ಕನ್ನಡ ಕಾರ್ಯಕ್ರಮದಲ್ಲಿ ಬಹಳ ಸಹಜವಾಗಿ ಪಾಲ್ಗೊಳ್ಳುತ್ತಾರೆ. ಆದರೆ ಮಲಯಾಳ ಕಾರ್ಯಕ್ರಮದಲ್ಲಿ ಕನ್ನಡಿಗರ ಪಾಲ್ಗೊಳ್ಳುವಿಕೆ ಹೀಗೇ ಇದೆ ಎನ್ನಲಾಗದು. ಆದರೆ ಕನ್ನಡ ಮತ್ತು ಮಲಯಾಳದ ನಡುವಿನ ಸೌಹಾರ್ದತೆಗೆ ಯಾವ ಭಂಗವೂ ಬಂದಿಲ್ಲ.

ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಾಹಿತ್ಯದ ಕುರಿತು ಕೆಲವು ಮಾತುಗಳನ್ನಾಡಲೇ ಬೇಕಾಗುತ್ತದೆ. ‘ಮಹಿಳಾ ಸಾಹಿತ್ಯದಲ್ಲಿ ಏನಿದೆ?’ ಎಂಬ ಮಾತುಗಳನ್ನು ನಾವು ಅರಗಿಸಿ ಕೊಂಡಿದ್ದೇವೆ. ಇನ್ನೋರ್ವ ಖ್ಯಾತ ಲೇಖಕರು, ‘ಸಾಹಿತ್ಯ ವಿರುವುದು ಮನರಂಜನೆಗೆ ಮಾತ್ರ. ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ.’ ಎಂದಿದ್ದರು. ಹಾಗೆಯೇ ಅವರು ತಮ್ಮ ಕಾದಂಬರಿಯಿಂದ ಪುರುಷರಿಗೆ ಸಾಕಷ್ಟು ಮನರಂಜನೆಯನ್ನೂ ನೀಡಿರಬಹುದು! ಆದರೆ ನನ್ನ ಅನುಭವ ಬೇರೆಯೇ ಇದೆ. ನಾನು ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿ ಬರೆದ ಉದ್ಧೇಶವೇ ಸಾಮಾಜಿಕ ಬದಲಾವಣೆಗಾಗಿ ಆಗಿತ್ತು. ಯಾವುದೋ ಕಾರಣದಿಂದ ವಿಚ್ಛೇದನಗೊಂಡ ಪತಿಪತ್ನಿಯರು ಪುನಃ ಒಂದುಗೂಡಲು ಸಾಧ್ಯವಿಲ್ಲದಂತಹ ಒಂದು ನಿಯಮವನ್ನು ನಮ್ಮ ಸಮಾಜ ಮಹಿಳೆಯರ ಮೇಲೆ ಹೇರಿತ್ತು. ಇದು ಹೆಣ್ಣಿಗೆ ಎಷ್ಟೊಂದು ಅವಮಾನಕರವಾಗಿದ್ದರೂ ಯಾವ ಹೆಣ್ಣು ಈ ಕುರಿತು ಪ್ರಶ್ನಿಸುತ್ತಿರಲಿಲ್ಲ. ಅವರು ಆ ಗಂಡನನ್ನು ನಿರಾಕರಿಸುತ್ತಿದ್ದರು. ಈ ಪದ್ಧತಿಯ ಮೇಲೆ ಬೆಳಕು ಚೆಲ್ಲಿ ಇದನ್ನು ವಿರೋಧಿಸುವ ಒಂದು ವಾತಾವರಣ ನಿರ್ಮಾಣವಾಗಬೇಕೆಂಬುದು ನನ್ನ ಆಶಯ ವಾಗಿತ್ತು. ನಾನು ಈ ಕೃತಿ ರಚಿಸಿದ ಬಳಿಕ ಈ ಕುರಿತು ನಮ್ಮ ಮಹಿಳೆಯರಲ್ಲಿ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿದರೂ ಆ ಪದ್ಧತಿಯನ್ನು ಅಳಿಸಿ ಹಾಕಲು ಇಂದಿಗೂ ಸಾಧ್ಯವಾಗಿಲ್ಲ. ಎಂದೇ ಹೇಳಬಹುದು. ಆದರೆ ನಾನು ಈ ಕಾದಂಬರಿ ಬರೆದ ಹತ್ತು ವರ್ಷಗಳ ಬಳಿಕ ಉತ್ತರ ಪ್ರದೇಶದ ಒಂದು ಧಾರ್ಮಿಕ ಸಂಘಟನೆ ಸುಲಭದ ವಿವಾಹ ವಿಚ್ಛೇದನಕ್ಕೆ ತಿದ್ದುಪಡಿ ತಂದು ತಲಾಖ್ ನೀಡುವುದನ್ನು ಮೂರು ತಿಂಗಳು ಪ್ರತ್ಯೇಕವಾಗಿ ಹೇಳಬೇಕು ಹಾಗೂ ಆ ಮೂರು ತಿಂಗಳಲ್ಲಿ ಆ ಪತಿಪತ್ನಿಯರು ಒಂದೇ ಮನೆಯಲ್ಲಿ ಬದುಕಬೇಕು ಎಂಬಂತಹ ಬದಲಾವಣೆ ಮಾಡಿ ಕೊಂಡಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದು ತಿಳಿಯದು. ಪುರುಷ ಪ್ರಧಾನ ವ್ಯವಸ್ಥೆ ಅಷ್ಟು ಸುಲಭದಲ್ಲಿ ಬದಲಾವಣೆಗೆ ಒಗ್ಗಿಕೊಳ್ಳುತ್ತವೆ ಎನ್ನುವಂತಿಲ್ಲ.

ನಾನು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಆಗಷ್ಟೇ ಲೇಖಕಿಯರ ಸಂಘ ಬೆಳೆಯತೊಡಗಿತ್ತು. ನಾನೂ ಈ ಸಂಘಟನೆಯ ಆಜೀವ ಸದಸ್ಯೆಯಾಗಿದ್ದೇನೆ. ಮೊತ್ತಮೊದಲ ಸಮ್ಮೇಳನ 1985ರಲ್ಲಿ ಮಂಡ್ಯದಲ್ಲಿ ನಡೆದಿದ್ದು ಸನ್ಮಾನಕ್ಕಾಗಿ ನನಗೂ ಆಮಂತ್ರಣವಿತ್ತು. ಆದರೆ ಕಾರಣಾಂತರದಿಂದ ಆಗ ನನ್ನಿಂದ ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆ ಮೇಲೆ ಮೂರೋ ನಾಲ್ಕೋ ಸಮ್ಮೇಳನಗಳು ನಡೆದುವು; ಅವುಗಳಲ್ಲಿ ನಾನು ಪಾಲ್ಗೊಳ್ಳುತ್ತಲೂ ಇದ್ದೆ. ಖ್ಯಾತ ಲೇಖಕ, ಲೇಖಕಿಯರ ಉಪಸ್ಥಿತಿ, ಅವರ ಭಾಷಣಗಳು ಎಲ್ಲವೂ ಚೆನ್ನಾಗಿರುತ್ತಿದ್ದುವು. ಪುಸ್ತಕ ಮಾರಾಟದ ಮಳಿಗೆಗಳೂ ನಮ್ಮನ್ನಾಕರ್ಷಿಸುತ್ತಿದ್ದುವು.

ಆದರೆ ಇಂದು ಯಾಕೊ ಸಾಹಿತ್ಯ ಕ್ಷೇತ್ರದಲ್ಲಿ ಆ ವಾತಾವರಣ ಇಲ್ಲವೇನೋ ಎಂಬ ಅನಿಸಿಕೆ ನನ್ನದು. ಬಂಡಾಯ ಸಾಹಿತ್ಯ ಸಂಘಟನೆಯೂ ಇಂದು ಶಕ್ತಿ ಕಳೆದು ಕೊಂಡಿದೆ. ಮಹಿಳಾ ಸಾಹಿತ್ಯಕ್ಷೇತ್ರದಲ್ಲಿ ಅಂದಿನಿಂದಲೇ ಕಾಣುತ್ತಿದ್ದ ಅವೇ ಮುಖಗಳೇ ಕಾಣಿಸುತ್ತಿದ್ದು ಹೊಸ ಯುವ ಮುಖಗಳು ಕಾಣಿಸುತ್ತಿರುವುದು ಕಮ್ಮಿಯಾಗುತ್ತಿದೆ. ಇಂದು ವಿದ್ಯಾವಂತ ಯುವ ಮಹಿಳೆಯರ ಆಕರ್ಷಣೆಗಳು ಬೇರೆ ಬೇರೆ ಕ್ಷೇತ್ರಗಳತ್ತ ತಿರುಗುತ್ತಿರುವುದೂ ಇದಕ್ಕೆ ಒಂದು ಕಾರಣವಾಗಿರಬಹುದು. ಕನ್ನಡ ಭಾಷೆಯನ್ನು ಬೆಳೆಸಬೇಕು, ಕನ್ನಡ ಸಾಹಿತ್ಯ ಕ್ಷೇತ್ರ ಮತ್ತಷ್ಟು ವಿಶಾಲವಾಗಬೇಕು ಎಂದು ಸರಕಾರ ಎಷ್ಟೋ ಹಣ ಮೀಸಲಿಟ್ಟರೂ ಅದು ಈ ಕ್ಷೇತ್ರಕ್ಕೆ ಸಮನಾಗಿ ಹರಿಯುತ್ತಲೂ ಇಲ್ಲ. ಯುವ ಜನರನ್ನು ಸಾಹಿತ್ಯದೆಡೆಗೆ ಆಕರ್ಷಿಸುವಂತಹ ಕಾರ್ಯಕ್ರಮಗಳೂ ಕಮ್ಮಿಯಾಗುತ್ತಿವೆ ಎಂದು ನನಗನ್ನಿಸುತ್ತಿದೆ. ಇಂದಿನ ಆಧುನಿಕ ತಂತ್ರಜ್ಞಾನದಿಂದಾಗಿ ಯುವಕರು ಅವುಗಳೆಡೆಗೆ ಆಕರ್ಷಿತರಾಗುತ್ತಿದ್ದು ಮೊಬೈಲ್, ಇಂಟರ್‍ನೆಟ್, ಫೇಸ್‍ಬುಕ್ ಮುಂತಾದುವುಗಳಲ್ಲಿ ಯುವಜನರಿಗೆ ಸಾಕಷ್ಟು ಮನರಂಜನೆ ದೊರೆಯುತ್ತಿದ್ದು ಅವರು ಸಾಹಿತ್ಯ ಕೃತಿಗಳ ಓದಿನಿಂದ ದೂರ ಸರಿಯುತ್ತಿದ್ದಾರೆ. ಒಂದು ಭಾಷೆಯಲ್ಲಿ ವಿಪುಲವಾದ ಗುಣಮಟ್ಟದ ಸಾಹಿತ್ಯ ಕೃತಿಗಳ ರಚನೆಯಾಗಬೇಕು; ಅವುಗಳನ್ನು ಕೊಂಡು ಓದುವ ಓದುಗರೂ ಇರಬೇಕು. ಹಾಗಿದ್ದರೆ ಮಾತ್ರ ಆ ಭಾಷೆ ಬೆಳೆಯುತ್ತದೆ. ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಸಾಹಿತ್ಯ ಕೃತಿಗಳ ಪಾತ್ರ ಬಹಳ ಮುಖ್ಯವಾಗಿದೆ. ಮಕ್ಕಳ ಪುಸ್ತಕಗಳೂ ಧಾರಾಳವಾಗಿ ಹೊರಬಂದು ಮಕ್ಕಳನ್ನು ಓದಿನೆಡೆಗೆ ಆಕರ್ಷಿಸಬೇಕು. ಅಮೇರಿಕಾದಲ್ಲಿ ಜೆ.ಕೆ. ರೌಲಿಂಗ್ ಎಂಬ ಅಧ್ಯಾಪಕಿಯೋರ್ವರು ಬರೆದ ಹ್ಯಾರೀ ಪೋಟರ್ ಎಂಬ ಮಕ್ಕಳ ಕಾದಂಬರಿ ಐದಾರು ಭಾಗಗಳಲ್ಲಿ ಹೊರಬಂದುವು. ಈ ಕೃತಿಗಳು ಮಕ್ಕಳನ್ನು ಹೇಗೆ ಆಕರ್ಷಿಸಿದುವೆಂದರೆ ನಾನಲ್ಲಿದ್ದಾಗ ಅದರ ಒಂದು ಭಾಗ ಬಿಡುಗಡೆಗೊಂಡು, ಬಿಡುಗಡೆಯಾದ ಒಂದು ಗಂಟೆಯಲ್ಲಿ ಒಂದು ಲಕ್ಷದ ನಲ್ವತ್ತು ಸಾವಿರ ಪ್ರತಿಗಳು ಮಾರಾಟವಾದುವು. ಇದು ಸುಮಾರು ಹತ್ತು ವರ್ಷಗಳ ಹಿಂದಿನ ವಿಷಯ. ಈಗಲೂ ಮಕ್ಕಳ ಓದಿನ ಕುರಿತು ಇಂತಹದೇ ವಾತಾವರಣ ಅಲ್ಲಿ ಇದೆಯೇ ಎಂದು ನನಗೆ ತಿಳಿಯದು.

ಓದು ಬರಹದ ಕುರಿತು ನಾವು ಇಷ್ಟೆಲ್ಲ ಚರ್ಚಿಸುತ್ತಿರುವಂತೆ ಇನ್ನೊಂದೆಡೆಯಲ್ಲಿ ನಾವು ಬೇರೆಯೇ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇಂದು ನಮ್ಮ ಲೇಖನಿಗಳ ಮೇಲೆ ಕೆಲವರು ಹಿಡಿತ ಸಾಧಿಸಲಾರಂಭಿಸಿದ್ದಾರೆ. “ನಿನ್ನಿಷ್ಟದಂತೆ, ನಿನಗೆ ಬೇಕಾದಂತೆ ನೀನು ಬರೆಯಬಾರದು. ನಮ್ಮ ಮರ್ಜಿಗನುಸಾರವಾಗಿ ನಾವು ಹೇಳಿದಂತೆ ನೀವುಗಳು ಬರೆಯಬೇಕು; ಮಾತಾಡಬೇಕು. ಇಲ್ಲದಿದ್ದರೇ...?” ಎಂಬಂತಹ ಭಯ ಹುಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ.

ಇತ್ತೀಚೆಗೆ ನೀವೆಲ್ಲರೂ ಪತ್ರಿಕೆಗಳಲ್ಲಿ ಓದಿರಬಹುದು; ದೃಶ್ಯ ಮಾಧ್ಯಮಗಳಲ್ಲೂ ಕಂಡಿರಬಹುದು. “ಡುಂಢಿ’’ ಎಂಬ ಕೃತಿಯೊಂದನ್ನು ಯೋಗೀಶ್ ಮಾಸ್ತರ್ ಎಂಬವರು ಬರೆದರು. ಹಿರಿಯ ಸಾಹಿತಿಗಳಿಂದ ಕೃತಿ ಬಿಡುಗಡೆಯೂ ಆಯಿತು. ಕೃತಿ ಹೊರಬಂದ ಮರುದಿನವೇ ಲೇಖಕರನ್ನು ಟೀಕಿಸಲಾರಂಭವಾಯಿತು. ‘ನಮ್ಮ ಸಂಸ್ಕøತಿ, ನಮ್ಮ ಪರಂಪರೆ, ನಮ್ಮ ದೇವರಿಗೆ ಅಪಚಾರ ಮಾಡಿದಂತಹ ಕೃತಿ. ಇದನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು.’ ಎಂಬ ಕೂಗು ಪ್ರಾರಂಭವಾಯಿತು. ಕೃತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹೊಸ ವಿಷಯವಲ್ಲ. ಪಿ.ವಿ. ನಾರಾಯಣ ಅವರ ಧರ್ಮಕಾರಣ, ಎಚ್.ಎಸ್.ಶಿವಪ್ರಕಾಶ್ ಅವರ ಒಂದು ಕೃತಿ, ಜಯಪ್ರಕಾಶ್ ಮಾವಿನಕುಳಿಯವರ ಒಂದು ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ‘ರಾಮನ ಬಳಿಗೆ ಒಂಭತ್ತು ಗಂಟೆ’ ಎಂಬ ಕೃತಿಯನ್ನು ನೆಹರೂ ಸರಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ದೆಹಲಿಯಲ್ಲಿ ಸಫ್ಪರ್ ಹಾಶ್ಮಿ ಎಂಬ ನಾಟಕಕಾರರನ್ನು, ಕೇರಳದಲ್ಲಿ ಚೇಕನೂರು ಮೌಲವಿ ಎಂಬ ಲೇಖಕರನ್ನು ಕೊಲೆ ಮಾಡಲಾಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲ ಸೌದಿ ಅರೇಬಿಯಾದಲ್ಲೂ ಹಲವು ಕೃತಿಗಳ ಮಾರಾಟಕ್ಕೆ ನಿಷೇಧವಿದೆ. ಆದರೆ ಎಲ್ಲೂ ಬರೆದುದಕ್ಕಾಗಿ ಲೇಖಕನನ್ನು ಬಂಧಿಸಿ ಜೈಲಿಗಟ್ಟಿದ ಉದಾಹರಣೆ ಇಲ್ಲ. ಆದರೆ ನಮ್ಮ ಕರ್ನಾಟಕ ಯೋಗೀಶ್ ಮಾಸ್ತರ್ ಅವರನ್ನು ಬಂಧಿಸಿ ಜೈಲಿಗಟ್ಟಿ ಚರಿತ್ರೆ ನಿರ್ಮಿಸಿತು. ಅಂತಹ ಒಂದು ಘಟನೆ ನಮ್ಮ ಕಣ್ಮುಂದೆ ನಡೆದು ವ್ಯವಸ್ಥೆಯ ಈ ಕೃತ್ಯದಿಂದ ನಾವು ತಲೆ ತಗ್ಗಿಸುವಂತೆ ಮಾಡಿದೆ.

ಪುರುಷರ ಮೇಲೆ ಮಾತ್ರವಲ್ಲ ಮಹಿಳಾ ಸಾಹಿತಿಗಳ ಮೇಲೆ ಆಕ್ರಮಣ ಮಾಡಲೂ ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಹಿಂಜರಿಯಲಿಲ್ಲ. ಬಾಂಗ್ಲಾದೇಶದ ತಸ್ಲೀಮಾ ನಸ್ರೀನ್ ಎಂಬ ಲೇಖಕಿ ‘ಲಜ್ಜಾ’ ಎಂಬ ಕೃತಿ ರಚಿಸಿದ ಕಾರಣಕ್ಕಾಗಿ ಹೈದರಾಬಾದಿನ ಕಾರ್ಯಕ್ರಮಕ್ಕೆ ಬಂದಿದ್ದ ಆಕೆಯ ಮೇಲೆ ಪುರುಷರು ಆಕ್ರಮಣ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ನಮ್ಮ ಕೇಂದ್ರ ಸರಕಾರದ ನಡವಳಿಕೆ ನಾವು ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ. ಆಕೆಗೆ ಯಾವುದೇ ರೀತಿಯ ರಕ್ಷಣೆ ನೀಡಲು ಸಾಧ್ಯವಾಗದ ಸರಕಾರ ಆಕೆಯನ್ನು ಈ ದೇಶದಿಂದಲೇ ಹೊರನಡೆಯುವಂತೆ ಮಾಡಿತು.

ಈ ಘಟನೆಯನ್ನು ಬ್ರಿಟಿಷರ ನಡವಳಿಕೆಗೆ ಹೋಲಿಸ ಬೇಕಾಗಿದೆ. ಸೆಲ್ಮಾನ್ ರಶ್ದಿಯೆಂಬ ನಮ್ಮ ದೇಶದ ಲೇಖಕನ ಮೇಲೆ ಇದೇ ರೀತಿ ಆಕ್ರಮಣವಾದಾಗ ಆತನನ್ನು ಕೂಡಲೇ ಇಂಗ್ಲೆಂಡಿಗೆ ಕರೆಸಿಕೊಂಡ ಬ್ರಿಟಿಷರು ಇಂದಿನವರೆಗೂ ಪ್ರತಿ ತಿಂಗಳೂ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಆತನಿಗೆ ರಕ್ಷಣೆ ನೀಡುತ್ತಿದ್ದಾರೆ ಇದು ಹತ್ತಿಪ್ಪತ್ತು ವರ್ಷಗಳ ಹಿಂದಿನ ಘಟನೆ. ಆದರೆ ಇಂದಿಗೂ ನಮ್ಮ ಜನ ಬದಲಾಗಿದ್ದಾರೆಯೇ? ಬರೆದವರನ್ನು ಕೊಲೆ ಮಾಡಲೂ ಹೇಸಲಾರರೆಂಬುದಕ್ಕೆ ಪಾಕಿಸ್ತಾನದಲ್ಲಿ ಮಲಾಲಾ ಎಂಬ ಹೆಣ್ಣು ಮಗಳ ತಲೆಗೆ ಗುಂಡಿಟ್ಟು ಆಕೆಯನ್ನು ಕೊಲೆ ಮಾಡಲು ಪ್ರಯತ್ನಿಸಿದರು. ಆಕೆಯನ್ನು ಕೂಡಾ ಬ್ರಿಟಿಷರು ಇಂಗ್ಲೆಂಡಿಗೆ ಕರೆಸಿಕೊಂಡು ಆಕೆಗೆ ರಕ್ಷಣೆ ಮಾತ್ರವಲ್ಲ ಆಕೆಯ ಶಿಕ್ಷಣಕ್ಕೂ ಅನುವು ಮಾಡಿಕೊಟ್ಟಿದ್ದಾರೆ.

ಇಂತಹ ಘಟನೆಗಳಿಗೆಲ್ಲ ಜನರ ಮತಾಂಧತೆ ಮತ್ತು ಅಸಹನೆಯೇ ಕಾರಣವಾಗಿದೆ. ‘ನನಗೆ ಒಪ್ಪಿಗೆಯಾಗದ ವಿಷಯವನ್ನು ನೀನು ಬರೆಯಬಾರದು.’ ಎಂಬ ಈ ಮನೋಭಾವವೇ ಜನರ ಈ ನಡವಳಿಕೆಗೆ ಕಾರಣವಾಗಿದೆ. ನಮ್ಮ ಸುತ್ತುಮುತ್ತಲೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯ, ಶೋಷಣೆ, ದೌರ್ಜನ್ಯವನ್ನು ಪ್ರಶ್ನಿಸಲು ಯಾರಿಗೂ ಅಧಿಕಾರವಿಲ್ಲ ಎಂಬುದು ಇಂತಹ ಆಕ್ರಮಣದ ಅರ್ಥವೇ ಅಥವಾ ನಾವು ನಮ್ಮ ದೇಶದಲ್ಲಿ ನಮ್ಮ ನಾಗರಿಕರನ್ನಲ್ಲದೆ ವಿದೇಶಿಯರನ್ನೂ ಕೂಡಾ ಏನಾದರೂ ಮಾಡಿಕೊಳ್ಳುತ್ತೇವೆ. ಅದನ್ನು ಕೇಳಲು ನೀವ್ಯಾರು? ಎಂಬುದು ಈ ಘಟನೆಗಳ ಅರ್ಥವೇ? ಇಂತಹ ಎಲ್ಲ ರೀತಿಯ ಅನ್ಯಾಯವನ್ನೂ, ಶೋಷಣೆಯನ್ನೂ, ದೌರ್ಜನ್ಯವನ್ನೂ ಸಾಹಿತಿಗಳು ಬರಹದ ಮೂಲಕ ಪ್ರಶ್ನಿಸಲೇ ಬೇಕು. ಸಾಹಿತಿಗಳಿಂದ, ಪತ್ರಕರ್ತರಿಂದ ಮಾತ್ರ ಅದು ಸಾಧ್ಯ. ಆಗ ಮಾತ್ರ ಅಂತಹ ಘಟನೆಗಳ ಮೇಲೆ ಸಮನಾಗಿ ಬೆಳಕು ಬೀಳುತ್ತವೆ. ಹೀಗೆ ಬೆಳಕು ಬಿದ್ದರೆ ಮಾತ್ರ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು. ಬೆಳಕೇ ಬೀಳದಿದ್ದರೆ ಸಮಸ್ಯೆಗಳು ಕೊಳೆಯುತ್ತಿರುತ್ತವೆ. ಆದುದರಿಂದ ಲೇಖಕರನ್ನು ಯಾರೂ ಎಂದಿಗೂ ತಡೆಯ ಬಾರದು. ಬರೆದದ್ದೆಲ್ಲವೂ ಎಲ್ಲರಿಗೂ ಇಷ್ಟವಾಗ ಬೇಕೆಂದೇನೂ ಇಲ್ಲ. ಅದನ್ನು ನಾವು ಒಪ್ಪಿಕೊಳ್ಳಬೇಕೆಂದೂ ಇಲ್ಲ. ನಮಗೆ ಇಷ್ಟವಾಗದಿದ್ದರೆ ನಾವು ಪ್ರಶ್ನಿಸಬಹುದು; ಟೀಕೆ ಮಾಡಬಹುದು; ಪ್ರತಿಭಟಿಸಬಹುದು. ಆದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದನ್ನು ಸಹಿಸಲು ಎಂದಿಗೂ ಸಾಧ್ಯವಿಲ್ಲ. ನಮ್ಮ ಅಭಿಪ್ರಾಯವನ್ನು ಪ್ರಕಟಿಸಲು ನಾವು ಸ್ವತಂತ್ರರಿದ್ದೇವೆ. ಆ ಸ್ವಾತಂತ್ರ್ಯವನ್ನು ನಮಗೆ ನಮ್ಮ ಸಂವಿಧಾನ ನೀಡಿದೆ ಎಂದಷ್ಟೇ ನಾನು ಹೇಳಲಿಚ್ಛಿಸುತ್ತೇನೆ.

ಸಾಹಿತ್ಯದ ಕುರಿತು ಇಷ್ಟೆಲ್ಲಾ ಹೇಳಿದ ಬಳಿಕ ಇನ್ನೊಂದು ಬಹಳ ಮುಖ್ಯ ವಿಷಯದೆಡೆಗೂ ನಾವು ಗಮನಹರಿಸ ಬೇಕಾಗಿದೆ. ಕನ್ನಡ ಭಾಷೆ ಬೆಳೆಯಬೇಕು, ಕನ್ನಡದಲ್ಲಿ ಗುಣಮಟ್ಟದ ಸಾಹಿತ್ಯ ಕೃತಿಗಳು ಹೊರಬರಬೇಕೆನ್ನುವ ನಾವು ಕನ್ನಡ ಶಾಲೆಗಳ ಶಿಕ್ಷಣದ ಕುರಿತು ಚಿಂತಿಸುತ್ತಿಲ್ಲ. ಇಂದು ಪ್ರಾಥಮಿಕ ಶಿಕ್ಷಣ ತೀರಾ ದುಃಸ್ಥಿತಿಯಲ್ಲಿದೆ. ಅಲ್ಲಿ ಮಕ್ಕಳಿಗೆ ಸಮನಾದ ತರಬೇತಿ ದೊರೆಯುತ್ತಿಲ್ಲ. ಹಿಂದಿನ ಕಾಲದಂತೆ ಈಗ ಮಕ್ಕಳಿಂದ ಕಾಪಿ ಬರೆಸುವುದಿಲ್ಲ. ಕಾಪಿ ಬರೆಸಿದರೆ ಮಕ್ಕಳ ಮೇಲೆ ಹೊರೆಬೀಳುತ್ತದೆ ಎಂಬುದು ಈಗಿನ ಸಂಶೋಧನೆ. ಸಮನಾಗಿ ಬರೆದು ಅಭ್ಯಾಸವಿಲ್ಲದ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಾರೆ. ಈಗ ಹೈಸ್ಕೂಲು ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ. ಇಪ್ಪತ್ತರಷ್ಟು ವಿದ್ಯಾರ್ಥಿಗಳಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ. ಎಂಬುದು ಅಧ್ಯಾಪಕರೊಬ್ಬರ ಅಭಿಪ್ರಾಯ. ಓದಲು, ಬರೆಯಲು ತಿಳಿಯದ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಿದ್ದೇಕೆಂದು ಕೇಳಿದರೆ, “ವಿದ್ಯಾರ್ಥಿಗಳನ್ನು ಫೈಲ್ ಮಾಡಿದರೆ ಶಾಲಾ ಮೇಲಾಧಿಕಾರಿಗಳಿಂದ, ವಿದ್ಯಾರ್ಥಿಗಳಿಗೆ ಯಾಕೆ ಸಮನಾಗಿ ತರಬೇತಿ ನೀಡಲಿಲ್ಲ?” ಎಂಬ ಪ್ರಶ್ನೆಗೆ ಅಧ್ಯಾಪಕರು ಉತ್ತರಿಸಬೇಕಾಗುತ್ತದೆ. ಅಧ್ಯಾಪಕರಿಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಅವರು ಉತ್ತರ ಬರೆಯಲಿ, ಬರೆಯದಿರಲಿ ಎಲ್ಲರನ್ನೂ ತೇರ್ಗಡೆಗೊಳಿಸಲಾಗುತ್ತದೆ.” ಎನ್ನುತ್ತಾರೆ.

ಇಲ್ಲಿ ಇನ್ನೂ ಒಂದು ವಿಷಯವಿದೆ. “ಪಠ್ಯಪುಸ್ತಕಗಳಿಗೆ ಪಠ್ಯಗಳನ್ನು ಆಯ್ಕೆ ಮಾಡುವ ಸಮಿತಿ ಆಯ್ಕೆ ಮಾಡಿದ ಪಾಠಗಳನ್ನು ಅಧ್ಯಾಪಕರಿಂದಲೇ ಅರಗಿಸಿಕೊಳ್ಳಲಾಗುವುದಿಲ್ಲ.” ಎನ್ನುತ್ತಾರೆ ಓರ್ವ ಅಧ್ಯಾಪಕರು. “ಇನ್ನು ನಾವು ಅದನ್ನು ವಿದ್ಯಾರ್ಥಿಗಳಿಗೆ ವಿವರಿಸುವುದು ಹೇಗೆ? ಹದಿಮೂರೋ ಹದಿನಾಲ್ಕೊ ವರ್ಷ ಪ್ರಾಯದ ವಿದ್ಯಾರ್ಥಿಗಳ ಮೆದುಳಿನಲ್ಲಿ ಎಂತಹ ಪಾಠಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ ಎಂಬುದರೆಡೆಗೆ ಈ ಸಮಿತಿಯ ಶಿಕ್ಷಣ ತಜ್ಞರು ಗಮನ ಹರಿಸುವುದಿಲ್ಲ. ಅವರು, ತಮ್ಮ ಬುದ್ಧಿಮತ್ತೆಗೆ ಸಮನಾದ ಪಾಠಗಳನ್ನು ಪಠ್ಯಪುಸ್ತಕಗಳಲ್ಲಿ ತುರುಕುತ್ತಾರೆ. ಪಠ್ಯಗಳ ಮೇಲೆ ಆಯ್ಕೆ ಸಮಿತಿಗೆ ಗಮನವಿಲ್ಲ; ಬದಲಾಗಿ ಅದನ್ನು ಬರೆದವರು ಯಾರೆಂಬುದರೆಡೆಗೆ ಇವರ ಗಮನವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಕನ್ನಡ ಕಲಿಕೆಯಲ್ಲಿ, ಕನ್ನಡ ಭಾಷೆಯಲ್ಲಿ ಮುಂದೆ ಬರುವುದಾದರೂ ಹೇಗೆ? ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರ ಕುಲಗೆಟ್ಟು ಹೋಗಿದೆ” ಎಂಬುದು ಈ ಅಧ್ಯಾಪಕರ ಕಳಕಳಿಯ ನುಡಿ.

ಒಂದು ಭಾಷೆ ಒಳ್ಳೆಯ ಬೆಳವಣಿಗೆ ಕಾಣಬೇಕಾದರೆ ಆ ಭಾಷೆಯಲ್ಲಿ ವಿಪುಲವಾದ ಉತ್ತಮ ಗುಣಮಟ್ಟದ ಸಾಹಿತ್ಯ ಕೃತಿಗಳು ಹೊರಬರಬೇಕು. ಹಾಗೂ ಅಂತಹ ಕೃತಿಗಳನ್ನು ವಿದ್ಯಾರ್ಥಿಗಳು, ಯುವ ಜನರು ಓದಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಶಾಲಾ ಕಾಲೇಜು ಗ್ರಂಥಾಲಯಗಳಲ್ಲಿ ಖ್ಯಾತ ಲೇಖಕರ ಕೃತಿಗಳಿರುವಂತೆ ಅಧ್ಯಾಪಕರು ನೋಡಿ ಕೊಳ್ಳಬೇಕು. ಆದರೆ ಇಂದು ಈ ಗ್ರಂಥಾಲಯಗಳು ಕೆಲವು ಪ್ರಾಂಶುಪಾಲರು ಮತ್ತು ಅಧ್ಯಾಪಕರಿಗೆ ಹೊಸ ಸಂಪಾದನೆಯ ಹಾದಿಯಾಗಿದೆಯಷ್ಟೇ ಹೊರತು ಶಾಲಾ ಗ್ರಂಥಾಲಯಗಳಲ್ಲಿ ಎಂತಹ ಗ್ರಂಥಗಳಿರಬೇಕು ಎಂಬುದರೆಡೆಗೆ ಇವರು ಗಮನ ಹರಿಸುವುದಿಲ್ಲ. ಸರಕಾರ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದರೂ ಅದು ಎಲ್ಲೆಲ್ಲೊ ಹೇಗೆ ಹೇಗೋ ಹರಿದುಹೋಗುತ್ತವೆ ಎನ್ನುತ್ತಾರೆ ಪುಸ್ತಕ ಮಾರಾಟಗಾರರೋರ್ವರು.

ಇಂದು ಕರ್ನಾಟಕದಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳು ಅಲ್ಲದೆ ಇತರ ಸುಮಾರು ಹತ್ತು ವಿಶ್ವವಿದ್ಯಾಲಯಗಳಿವೆ. ಆದರೆ ಈ ಯಾವ ವಿಶ್ವವಿದ್ಯಾಲಯಗಳು ನನ್ನಿಂದ ಈ ವರೆಗೆ ತಾವಾಗಿ ಪುಸ್ತಕ ತರಿಸಿ ಕೊಂಡದ್ದಿಲ್ಲ. ನಾವು ಬಹಳ ಒತ್ತಾಯ ಮಾಡಿದಾಗ ಒಂದೆರಡು ವಿಶ್ವವಿದ್ಯಾಲಯಗಳು ಒಂದೆರಡು ಬಾರಿ ಎರಡೋ ನಾಲ್ಕೋ ಪ್ರತಿಗಳನ್ನು ತರಿಸಿಕೊಂಡಿವೆ. ಮಹಿಳಾ ವಿಶ್ವವಿದ್ಯಾಲಯ ಮಹಿಳೆಯರ ಕೃತಿಗಳನ್ನು ತರಿಸಿಕೊಳ್ಳುವ ಪದ್ಧತಿಯೇ ಇಲ್ಲವೆಂದರು ಅಲ್ಲಿದ್ದವರೊಬ್ಬರು. ಗ್ರಂಥಾಲಯಕ್ಕೆ ಮಂಜೂರಾದ ಹಣ ಕಟ್ಟಡ ನಿರ್ಮಾಣದತ್ತ ಹರಿಯಿತೆಂದರವರು.

ನಾನು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡಲು ಇನ್ನೊಂದು ಕಾರಣ ಇಲ್ಲಿ ಹರಡಿರುವ ಕೋಮು ವೈಷಮ್ಯ. ನನ್ನ ನಾಡು ಕಾಸರಗೋಡಿನಲ್ಲಿ, ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಕೋಮು ವೈಷಮ್ಯ, ಕೋಮು ಘರ್ಷಣೆ, ಕೋಮು ಸೌಹಾರ್ದ ಮುಂತಾದ ಶಬ್ದಗಳನ್ನು ನಾನು ಕೇಳಿಯೇ ಇರಲಿಲ್ಲ. ನಮ್ಮ ನೆರೆಕರೆಯಲ್ಲಿದ್ದ ಎಲ್ಲಾ ಮುಸ್ಲಿಮೇತರರೊಡನೆಯೂ ನನ್ನ ಹೆತ್ತವರು ಉತ್ತಮ ಸ್ನೇಹ ಸಂಬಂಧ ಇಟ್ಟುಕೊಂಡಿದ್ದರು. ಹಾಗೆಯೇ ನಾವು ಮಕ್ಕಳೆಲ್ಲರೂ ಒಂದೇ ಮನೆಯವರಂತೆ ಬದುಕುತ್ತಿದ್ದೆವು. ಜಾತಿ, ಧರ್ಮದ ಯಾವ ಅಡ್ಡಗೋಡೆಗಳೂ ಆಗ ನಮ್ಮ ನಡುವೆ ಎದ್ದಿರಲಿಲ್ಲ.

ಮನುಷ್ಯ ಮನುಷ್ಯರ ನಡುವೆ ಇಂತಹ ಅಗಲಿಕೆ ಇದೆ, ಜಾತಿ ಧರ್ಮಗಳು ನಮ್ಮನ್ನು ಬೇರ್ಪಡಿಸುತ್ತಿವೆ ಎಂದು ನನ್ನ ಗಮನಕ್ಕೆ ಬಂದದ್ದೇ ನಾನು ವಿವಾಹಿತಳಾಗಿ ಕರ್ನಾಟಕದ ಮಂಗಳೂರಿಗೆ ಬಂದ ಬಳಿಕ ಎನ್ನಬಹುದು. ನನ್ನ ಗಂಡನ ಮನೆಯ ನೆರೆಕರೆಯಲ್ಲಿ ಅನ್ಯ ಜಾತಿಯವರಿದ್ದು ಆ ಮಹಿಳೆಯರೊಡನೆ ನನ್ನ ಮನೆಯ ಮಹಿಳೆಯರಿಗೆ ಯಾವ ರೀತಿಯ ಪರಿಚಯದ ನಡವಳಿಕೆ ಕೂಡ ಇರಲಿಲ್ಲ. ಇದಕ್ಕೇನು ಕಾರಣವೆಂದು ನಾನು ಹುಡುಕ ಹೊರಟಾಗ ನನಗೆ ದೊರೆತ ಉತ್ತರ ಇಲ್ಲಿನ ಮಹಿಳೆಯರ ತೀರಾ ಅನಕ್ಷರತೆ ಮತ್ತು ಇಲ್ಲಿನ ಸಾಹಿತ್ಯ ಕ್ಷೇತ್ರ. ಕೇರಳದಲ್ಲಿ ಕಳೆದ ಶತಮಾನದ ಮೂವತ್ತರ ದಶಕದಿಂದಲೂ ಮುಸ್ಲಿಂ ಸಾಹಿತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಟ್ಟಿದ್ದು ಅವರ ಕೃತಿಗಳಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಪರಸ್ಪರ ಸಹಕರಿಸುತ್ತಾ ಬದುಕುವಂತಹ ಚಿತ್ರಗಳು ಕಾಣಿಸಿಕೊಂಡಿದ್ದರೂ ಕರ್ನಾಟಕದಲ್ಲಿ ಎಪ್ಪತ್ತರ ದಶಕದವರೆಗೂ ಕನ್ನಡ ಸಾಹಿತ್ಯದಲ್ಲಿ ಮುಸಲ್ಮಾನರ ವಾಸ್ತವ ಬದುಕಿನ ಚಿತ್ರಣದ ಪ್ರತಿಬಿಂಬ ಮೂಡಿ ಬರಲೇ ಇಲ್ಲ. 1982ರಲ್ಲಿ ನನ್ನ ಕಾದಂಬರಿ ‘ಚಂದ್ರಗಿರಿ ತೀರದಲ್ಲಿ’ ಪ್ರಕಟವಾದಾಗ ಈ ಕೃತಿ ಈ ಅನುಭವ ಹೇಳುವ ಮೊತ್ತ ಮೊದಲ ಕಾದಂಬರಿ ಎಂದು ಹೆಸರು ಪಡೆಯಿತು. ಅಂದರೆ ಮುಸ್ಲಿಂ ಜನಜೀವನದ, ಸಾಮಾಜಿಕ ಬದುಕಿನ ಸಮನಾದ ಪರಿಚಯ ಇಲ್ಲಿನ ಮುಸ್ಲಿಮೇತರರಿಗೆ ಈ ಶತಮಾನದ ಎಪ್ಪತ್ತರ ದಶಕದ ವರೆಗೂ ದೊರೆಯಲೇ ಇಲ್ಲ. ಎಲ್ಲ ಮುಸ್ಲಿಮರ ಭಾಷೆ ಉರ್ದು ಎಂಬ ತಪ್ಪು ತಿಳುವಳಿಕೆಯಿಂದಾಗಿ ಹಿಂದೂ ಮುಸಲ್ಮಾನರ ನಡುವೆ ಸಂಪರ್ಕ ಕೊರತೆಯಿಂದಾಗಿ ಸ್ನೇಹ ಸೇತುವೆಯೊಂದು ನಿರ್ಮಾಣವಾಗದೆ ಇವರ ನಡುವೆ ದೊಡ್ಡದೊಂದು ಕಂದಕವೇ ನಿರ್ಮಾಣವಾಗಿ ಬಿಟ್ಟಿತು. ದಕ್ಷಿಣ ಕನ್ನಡವನ್ನುಳಿದು ಇತರೆಡೆಯ ಮುಸಲ್ಮಾನರು ಕನ್ನಡವನ್ನು ಕಲಿಯುವ, ಆ ಮೂಲಕ ಇಲ್ಲಿನ ಹಿಂದುಗಳೊಡನೆ ಸಂಪರ್ಕ ಬೆಳೆಸಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲವೆನ್ನಬಹುದು. ಇದಕ್ಕೆ ಬೆರಳೆಣಿಕೆಯಷ್ಟು ಅಪವಾದಗಳಿರಬಹುದಷ್ಟೇ. ಹೀಗಾಗಿ ಕೇರಳದ ಖ್ಯಾತ ಸಾಹಿತಿ ವೈಕ್ಕಂ ಮುಹಮ್ಮದ್ ಬಷೀರ್‍ರಂತೆ, ಕುಟ್ಟಿ ಕೃಷ್ಣನ್, ಪಿ. ಕೇಶವದೇವ್..... ಶಿವಶಂಕರ್ ಪಿಳ್ಳೆ ಅವರಂತೆ ಮುಸ್ಲಿಂ ಜನಜೀವನದ ನೈಜ ಚಿತ್ರಣ ನೀಡಲು ಸಾಧ್ಯವಾಗಲೇ ಇಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಹಿರಿಯ ಸಾಹಿತಿ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಕೂಡಾ ಮುಸ್ಲಿಂ ಪಾತ್ರಗಳು ತೀರಾ ಅಪರೂಪವಾಗಿ ಮೀನು ಮಾರುವ ಬ್ಯಾರಿಯ ರೂಪದಲ್ಲಷ್ಟೆ ಕಾಣಿಸಿಕೊಂಡಿವೆ. ಅ.ನ. ಕೃಷ್ಣರಾಯರು ಹಾಗೂ ತ.ರಾ.ಸು. ಅವರ ಕೃತಿಗಳಲ್ಲೂ ಮುಸ್ಲಿಮರು ಜಟಕಾ ಸಾಬಿಯಾಗಿಯೊ, ವೇಶ್ಯೆಯರಾಗಿಯೊ ಕಾಣಿಸಿಕೊಂಡಿದ್ದಾರೆ. ಮಹಿಳಾ ಸಾಹಿತಿಗಳ ಕೃತಿಗಳಲ್ಲಿ ಈ ಅಲ್ಪಸಂಖ್ಯಾತ ಪಾತ್ರಗಳನ್ನು ನಾವಿನ್ನೂ ಕಾಣಬೇಕಾಗಿದೆಯೆಂದೆನ್ನಿಸುತ್ತಿದೆ. ಇಂತಹ ಸಾಹಿತ್ಯ ಕೃತಿಗಳ ಅಭಾವದಿಂದ ಈ ಎರಡೂ ಸಮಾಜಗಳೂ ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲೇ ಇಲ್ಲ. ಅಂದರೆ ತಮ್ಮ ಜನಜೀವನದ ಮೇಲೆಳೆದಿದ್ದ ಪರದೆಯನ್ನು ಮುಸ್ಲಿಮರು ತಾವಾಗಿ ಸರಿಸಲೂ ಇಲ್ಲ; ಈ ಪರದೆಯ ಹಿಂದೆ ಏನಿದೆಯೆಂದು ಇಣುಕಿ ನೋಡಲು ಮುಸ್ಲಿಮೇತರರು ತಾವಾಗಿ ಪ್ರಯತ್ನಿಸಲೂ ಇಲ್ಲ. ಎಪ್ಪತ್ತರ ದಶಕದಲ್ಲಿ ಬೊಳುವಾರು ಮುಹಮ್ಮದ್ ಕುಂಞ, ಫಕೀರ್ ಮುಹಮ್ಮದ್ ಕಟ್ಪಾಡಿಯವರ ಸಣ್ಣ ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಲಾರಂಭಿಸಿದಾಗಲಷ್ಟೇ ಈ ಪರದೆಯ ಹಿಂದಿರುವ ಮುಸ್ಲಿಂ ಜನಾಂಗವೂ ಕೂಡಾ ತಮ್ಮಂತೆಯೇ ನೋವು, ನಲಿವುಗಳನ್ನುಂಡು ಬದುಕುತ್ತಿವೆ ಎಂದು ಬಹು ಸಂಖ್ಯಾಕರಿಗೆ ತಿಳಿಯತೊಡಗಿತು. ಕೆಲವು ಸಂಘಟನೆಗಳೂ, ಮೂಲಭೂತವಾದಿಗಳೂ ಈ ಎರಡೂ ಜನಾಂಗಗಳಲ್ಲಿ ದ್ವೇಷದ ವಿಷಬೀಜ ಬಿತ್ತತೊಡಗಿದ್ದುವು. ಅದರಿಂದಾಗಿ ಈ ಜನಾಂಗಗಳು ದೂರ ಸರಿಯತೊಡಗಿದ್ದುವು. ಸಾಹಿತಿಗಳು ಬದುಕಿನ ನೈಜ ಚಿತ್ರಣ ನೀಡಹೊರಟಾಗ ಅದಕ್ಕೆ ಧರ್ಮದ ಬಣ್ಣ ಬಳಿದು, ಮುಂದೆ ಆ ಸಾಹಿತಿ ಲೇಖನಿ ಕೈಗೆತ್ತಿಕೊಳ್ಳದಂತೆ ಪಿತೂರಿ ಮಾಡಲೂ ಈ ಜನ ಮುಂದಾಗುತ್ತಾರೆ. ಆದರೆ ಪ್ರಾಮಾಣಿಕ ಲೇಖಕ ಲೇಖಕಿಯರು ಎಂತಹ ಒತ್ತಡಕ್ಕೂ ಮಣಿಯಲಾರದೆಂಬುದು ಬೇರೆಯೇ ಮಾತು.

ಹಾಗೆಯೇ ದಲಿತ ಲೇಖಕಿಯರ ಕೃತಿಗಳೂ ಕನ್ನಡದಲ್ಲಿ ಇನ್ನಷ್ಟು ಹೊರಬರಬೇಕಾಗಿದೆ. ಎಂದನ್ನಿಸುತ್ತದೆ.

ಒಂದು ಕೃತಿ ರಚಿಸಲು ಇಂದು ಲೇಖಕಿಯರು ವಸ್ತುವಿಗಾಗಿ ಹುಡುಕಬೇಕಾಗಿಲ್ಲ. ಪತ್ರಿಕೆಗಳ ಪುಟಗಳನ್ನು ತಿರುವಿದರೆ ಸಾಕು ಮಹಿಳೆಯರ ಮೇಲೆ ನಡೆಯುತ್ತಿರುವ ನೂರಾರು ದೌರ್ಜನ್ಯಗಳ ವರದಿಗಳು ನಮ್ಮ ಕಣ್ಮುಂದೆ ನರ್ತಿಸುತ್ತಿರುತ್ತದೆ. ಅತ್ಯಂತ ದುಃಖದ, ಹೃದಯವನ್ನು ಹಿಂಡುವ ಸುದ್ದಿಯೆಂದರೆ ಮಹಿಳೆಯರು ತಮ್ಮ ಪುಟ್ಟ ಕಂದಮ್ಮಗಳನ್ನು ನದಿಗೊ ಬಾವಿಗೊ ಎಸೆದು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿ. ತಾಯಿಯೋರ್ವಳು ತನ್ನ ಮಕ್ಕಳನ್ನು ಆ ರೀತಿ ಕೈಯಾರ ಕೊಲ್ಲಬೇಕಾದರೆ ಆಕೆ ತನ್ನ ಬದುಕಿನಲ್ಲಿ ಅನುಭವಿಸಿದ ನೋವು ಎಂತಹದ್ದಾಗಿರಬಹುದು?

ಕೆಲವು ವರ್ಷಗಳ ಹಿಂದೆ ಮುಸ್ಲಿಂ ಹೆಣ್ಣು ಮಗಳೋರ್ವಳು ತನ್ನ ಆರು ವರ್ಷದ ಮಗಳನ್ನು ಸೊಂಟದಲ್ಲೆತ್ತಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಗಂಡ ತಲಾಖ್ ನೀಡಿದ್ದೇ ಇದಕ್ಕೆ ಕಾರಣವಾಗಿತ್ತು. ಶಿಕ್ಷಣವಿಲ್ಲ; ಆರ್ಥಿಕ ಸ್ವಾತಂತ್ರ್ಯವಿಲ್ಲದ ಹೆಣ್ಣಿಗೆ ಗಂಡ ಬಿಟ್ಟಾಗ ಮುಂದಿನ ಬದುಕು ಶೂನ್ಯವಾದಂತಾಗಿ ಇಂತಹ ನಿರ್ಧಾರಕ್ಕೆ ಬಂದಿರಬಹುದು.

ಒಂದೆರಡು ತಿಂಗಳ ಹಿಂದೆ ಇನ್ನೋರ್ವ ಮುಸ್ಲಿಂ ಹೆಣ್ಣು ಮಗಳು ತನ್ನ ಮೂರು ಮಕ್ಕಳೊಡನೆ ನಮ್ಮ ನೇತ್ರಾವತಿ ರೈಲ್ವೇ ಸೇತುವೆಗೆ ಬಂದು ಈ ಮಕ್ಕಳನ್ನು ನದಿಗೆಸೆದು ತಾನೂ ಆತ್ಮಹತ್ಯೆ ಮಾಡಿಕೊಂಡಳು. ತಾಯಿ ಇಬ್ಬರು ಮಕ್ಕಳನ್ನು ನೀರಿಗೆಸೆಯುವುದನ್ನು ಕಂಡ ಇನ್ನೋರ್ವ ಮಗು ತಾಯಿಯ ಬಳಿಯಿಂದ ಓಡಿತು. ಆ ತಾಯಿ ಆ ಮಗುವನ್ನು ಎಳೆದು ತಂದು ನದಿಗೆಸೆದು ತಾನೂ ಹಾರಿದಳು. ಗಂಡ ಕೊಲ್ಲಿ ರಾಷ್ಟ್ರದಲ್ಲಿದ್ದಾನೆ. ಆದುದರಿಂದ ಆರ್ಥಿಕ ಸಮಸ್ಯೆಯಾಗಿರಲಾರದೇನೊ. ಅತ್ತೆ, ನಾದಿನಿ, ಮೈದುನ, ಮಾವ ಎಂದು ಇರುವವರಿಂದ ತೊಂದರೆಯಾಗಿರಬಹುದು. ಅತ್ತೆಯ ಮನೆಯಲ್ಲಿದ್ದವಳು ಬಸ್ಸಿನಲ್ಲಿ ಒಂದು ತವರು ಮನೆಯ ಸಮೀಪ ನದಿಗೆ ಹಾರಿದ್ದಾಳೆ.

ತಾಯಿಯಾದವಳೋರ್ವಳು ಇಂತಹ ಕಠಿಣ ಕ್ರಮ ಕೈಗೊಳ್ಳಬೇಕಾದರೆ, ಹೃದಯವನ್ನು ಕಲ್ಲು ಮಾಡಿಕೊಳ್ಳಬೇಕಾದರೆ ಆಕೆ ಅನುಭವಿಸಿದ ಆ ನೋವು ಏನಾಗಿರಬಹುದು? ಇಂದಿನ ಮಹಿಳೆಯರ ಸಹನ ಶಕ್ತಿ ಏಕೆ ಇಷ್ಟೊಂದು ದುರ್ಬಲವಾಗಿದೆ? ಇವರಿಗೇಕೆ ಬದುಕನ್ನೆದುರಿಸಲು ಶಕ್ತಿ ಇಲ್ಲ? ಹತ್ತಿಪ್ಪತ್ತು ವರ್ಷಗಳ ಹಿಂದೆ ಇಷ್ಟೊಂದು ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ. ಬಡತನ ಹಿಂದಿನ ಕಾಲದಲ್ಲೂ ಇತ್ತು. ಗಂಡಂದಿರ ದಬ್ಬಾಳಿಕೆ ಅಥವಾ ಕುಡಿತ ಇವರನ್ನು ಇಂತಹ ಕೃತ್ಯಕ್ಕೆ ಪ್ರೇರೇಪಿಸುತ್ತಿದೆಯೇ? ಇಂತಹ ಆತ್ಮಹತ್ಯೆಗಳ ಮೇಲೆ ಬೆಳಕು ಚೆಲ್ಲಿ ಈ ಆತ್ಮಹತ್ಯೆಗಳಿಗೆ ಕಾರಣ ಹುಡುಕಿ ಸಾಹಿತ್ಯ ಕೃತಿ ರಚಿಸಿ ಮುಂದೆ ಯಾರೂ ಅಂತಹ ಕೃತ್ಯ ಎಸಗದಂತೆ ತಡೆಯುವಂತಾಗ ಬೇಕು.

ಸಾಹಿತ್ಯ ಕೃತಿ ರಚನೆಯ ಕುರಿತು ಹೇಳುವಾಗ ಇತ್ತೀಚೆಗೆ ನಾನು ಓದಿದ ನಮ್ಮ ಸಚಿವೆ ಉಮಾಶ್ರೀಯವರ ಆತ್ಮಕತೆ ನೆನಪಾಗುತ್ತದೆ. ಹೆತ್ತವರಿಲ್ಲದೆ ಸಾಕು ತಾಯಿತಂದೆ ಅವರ ಮದುವೆ ಮಾಡಿಕೊಟ್ಟ ಬಳಿಕ ಅವರು ಗಂಡ, ಅತ್ತೆ, ಸಾಕು ತಾಯಿ ಎಲ್ಲರಿಂದಲೂ ದೌರ್ಜನ್ಯವನ್ನನುಭವಿಸಿದರೂ, ಹಸಿವೆಯಿಂದಲೇ ಅತ್ತೆಯ ಮನೆಯಿಂದ ಓಡಿ ಬಂದರೂ ಮತ್ತೂ ಧೈರ್ಯದಿಂದ ಬದುಕಿಗಂಟಿಕೊಂಡರಲ್ಲಾ, ಅದಕ್ಕಾಗಿ ಅವರನ್ನು ಅಭಿನಂದಿಸಲೇಬೇಕು.

ಎಲ್ಲವನ್ನೂ ಒಬ್ಬಳೇ ಎದುರಿಸಿ ಆ ದೌರ್ಜನ್ಯದ ವಿರುದ್ಧ ಹೋರಾಡಿ ಗೆದ್ದು ಇಂದು ವಿಜಯಿಯಾಗಿ ತಲೆ ಎತ್ತಿ ನಡೆಯುತ್ತಿದ್ದಾರಲ್ಲ ಇದು ಎಲ್ಲ ಮಹಿಳೆಯರಿಗೂ ಆದರ್ಶ ನಡವಳಿಕೆಯಾಗಬೇಕು. ಒಂದು ಸಾಹಿತ್ಯ ಕೃತಿ ಓದಿದ ಬಳಿಕ ಕೆಲವು ಕಾಲವಾದರೂ ಆ ಕೃತಿ ನಮ್ಮನ್ನು ಕಾಡಬೇಕು; ನಮ್ಮ ಮನ ಕಲಕಬೇಕು; ನಮ್ಮ ನಿದ್ರೆ ಕೆಡಿಸಬೇಕು. ಆಗ ಮಾತ್ರ ಈ ಸಮಾಜ ಪರಿವರ್ತನೆಯ ಕುರಿತು ನಾವು ಚಿಂತಿಸುವುದು ಸಾಧ್ಯವಾಗುತ್ತದೆ.

ನಾನು ಒಂದೆರಡು ಮಲಯಾಳ ಕೃತಿಗಳನ್ನು ಅನುವಾದ ಮಾಡಿದ್ದೇನೆ. ಗುಜರಾತಿನ ‘ಡಿ.ಜಿ.ಪಿ. (ಈಗ ನಿವೃತ್ತರು) ಆರ್.ಬಿ. ಶ್ರೀಕುಮಾರ್ ಗುಜರಾತಿನ ಹತ್ಯಾಕಾಂಡದ ಕುರಿತು ರಚಿಸಿದ ಕೃತಿ ಅದಾಗಿತ್ತು. ಅವರು ಕಣ್ಣಾರೆ ಕಂಡ ಕೆಲವು ದೃಶ್ಯಗಳನ್ನು ಮುಖ್ಯಮಂತ್ರಿಗಳು ಅವರಿಗೆ ಪ್ರಮೋಶನ್ ನೀಡದೆ ಕಿರುಕುಳ ನೀಡಿದ್ದನ್ನೂ ಮನ ಮುಟ್ಟುವಂತೆ ವಿವರಿಸಿದ್ದಾರೆ. ಅವರು ಆ ಕೃತಿ ಬರೆಯದಿದ್ದಿದ್ದರೆ ಗುಜರಾತಿನ ಹತ್ಯಾಕಾಂಡದ ಕುರಿತು ನಮಗೆ ಅಷ್ಟೊಂದು ವಿಷಯಗಳು ವಿವರವಾಗಿ ತಿಳಿಯುತ್ತಿರಲಿಲ್ಲ. ಇನ್ನೊಂದು ಕೃತಿ ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವನನ್ನು ನಕ್ಸಲೈಟ್ ಎಂದು ಪೊಲೀಸರು ಬಂಧಿಸಿ ಕೊಲೆ ಮಾಡಿ ಸುಟ್ಟು ತಾವು ಬಂಧಿಸಿಯೇ ಇಲ್ಲವೆಂದು ಶಿಕ್ಷೆ ಇಲ್ಲದೆ ಸರಕಾರದ ಸೌಲಭ್ಯಗಳೆಲ್ಲವನ್ನೂ ಗಿಟ್ಟಿಸಿಕೊಂಡ ಕತೆ.

ಹಾಗೆಯೇ ಡಾ. ಖದೀಜಾ ಮುಂತಾಸ್ ಎಂಬವರು ಬರೆದ ಒಂದು ಕಾದಂಬರಿಯನ್ನೂ ನಾನು ಅನುವಾದ ಮಾಡಿದೆ. ಅವರು ಡಾಕ್ಟರಾಗಿ ಆರು ವರ್ಷ ಸೌದಿ ಅರೇಬಿಯಾದ ಮಕ್ಕಾದಲ್ಲಿದ್ದಾಗ ಅಲ್ಲಿನ ಜನಜೀವನವನ್ನು, ಮಹಿಳೆಯರ ಬದುಕನ್ನು ಕಣ್ಣಾರೆ ಕಂಡದ್ದನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾರೆ. ಅವರು ಇಂದಿನ ವಿಜ್ಞಾನಿಗಳಾದ ವೈದ್ಯರೂ ಕೂಡಾ ಎಂತಹ ಮೂಢನಂಬಿಕೆಗಳಲ್ಲಿ, ಮತಾಂಧತೆಯಲ್ಲಿ ಮುಳುಗಿದ್ದಾರೆಂಬುದರೆಡೆಗೆ ಬೆಳಕು ಚೆಲ್ಲಿದ್ದಾರೆ. ಆ ಕೃತಿಯಲ್ಲಿ ಒಂದೆಡೆ ಮಹಿಳಾ ವೈದ್ಯರೊಡನೆ ನಡೆದ ಒಂದು ಸಂಭಾಷಣೆಯನ್ನು ಈ ರೀತಿ ವಿವರಿಸಿದ್ದಾರೆ. “ಮುಸ್ಲಿಮರಲ್ಲದವರು ಸ್ವರ್ಗಕ್ಕೆ ಹೋಗುವುದಿಲ್ಲ” ಎಂದು ಓರ್ವ ಮಹಿಳಾ ವೈದ್ಯೆ ಹೇಳಿದಾಗ ಕಥಾ ನಾಯಕಿ, “ಹಾಗಾದರೆ ಬುದ್ಧ, ಮಹಾತ್ಮಾಗಾಂಧಿ, ಮದರ್ ಥೆರೆಸಾ ಇವರ್ಯಾರೂ ಸ್ವರ್ಗಕ್ಕೆ ಹೋಗುವುದಿಲ್ಲವಾ?” ಎಂದು ಕೇಳುತ್ತಾರೆ. “ಇಲ್ಲ ಮುಸ್ಲಿಮರಲ್ಲದ ಕಾರಣ ಅವರು ಯಾರೂ ಹೋಗಲಾರರು” ಎನ್ನುತ್ತಾರೆ ಆಕೆ. ಆಗ ಕಥಾ ನಾಯಕಿ, “ಹಾಗಾದರೆ ಆ ಸ್ವರ್ಗ ನನಗೆ ಬೇಡ” ಎನ್ನುತ್ತಾರೆ. ನಾನೂ ಕೂಡಾ ಕೆಲವು ವರ್ಷಗಳ ಹಿಂದೆ ಇಂತಹದೇ ಉತ್ತರ ನೀಡಿದ್ದೇನೆ. ಕೇರಳದ ಕೋಮು ಸೌಹಾರ್ದಕ್ಕೆ ಇದೂ ಒಂದು ಉದಾಹರಣೆಯೇ ಆಗಿದೆ. ಎಂದಷ್ಟೇ ಹೇಳುತ್ತಿದ್ದೇನೆ.

ಕೊನೆಯದಾಗಿ ಇಂದು ನಮ್ಮ ದೇಶದಲ್ಲಿ ಮಹಿಳೆಯರ ಪಾಡು ಏನಾಗಿದೆ ಎಂಬುದರೆಡೆಗೆ ಗಮನ ಹರಿಸಿದರೆ ನಮಗೆ ಆಘಾತವಾಗುತ್ತದೆ. ಕಳೆದ ಶತಮಾನದ ಅರುವತ್ತರ ದಶಕದವರೆಗೆ ಕುಟುಂಬದ ಮಹಿಳೆಯರು ಬಡತನದಿಂದ ನರಳುತ್ತಿದ್ದರೇ ಹೊರತು ಇಂದಿನಂತೆ ಹಿಂಸೆ ಮತ್ತು ದೌರ್ಜನ್ಯ ಇರಲಿಲ್ಲವೆನ್ನಿಸುತ್ತದೆ. ವರದಕ್ಷಿಣೆಯ ಹಿಂಸೆ ಮತ್ತು ಅದಕ್ಕಾಗಿ ಕೊಲೆ ಮಾಡುವ ಪರಿಪಾಠ ಅರುವತ್ತರ ದಶಕದಿಂದ ಆರಂಭವಾಯಿತು. ಎಪ್ಪತ್ತರ ದಶಕದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಯುಗ ಪ್ರಾರಂಭವಾಯಿತು. ಅದಕ್ಕಾಗಿ ಸರಕಾರ ಎಷ್ಟೆಷ್ಟೋ ನಿಯಮಗಳನ್ನು ರೂಪಿಸಿದರೂ ಇಂದಿಗೂ ಅದು ಯಾವುದೇ ತಡೆಯಿಲ್ಲದೆ ಮುಂದುವರಿಯುತ್ತಲೇ ಇದೆ.

ಸರಕಾರ ಕ್ರಮ ಕೈಗೊಳ್ಳತೊಡಗಿದೊಡನೆ ಅದು ಭೂಗತವಾಯಿತಷ್ಟೇ ಹೊರತು ಅದನ್ನು ಇಂದಿಗೂ ಕೊನೆಗೊಳಿಸಲಾಗಿಲ್ಲ. ಹೆಣ್ಣು ಮಕ್ಕಳ ಮಾರಾಟ, ವೇಶ್ಯಾವೃತ್ತಿ, ಮಲಗುವ ಕೋಣೆಯಲ್ಲಿ ಗಂಡನ ಹಿಂಸೆ ಎಂದು ಹಲವಾರು ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ಹಿಂಸೆ ದೌರ್ಜನ್ಯ ನಡೆಯುತ್ತಲೇ ಇದೆ. 21ನೇ ಶತಮಾನದ ಹೊಸ ಕೊಡುಗೆ ಸಾಮೂಹಿಕ ಅತ್ಯಾಚಾರ. ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮತ್ತು ಆರ್ಥಿಕವಾಗಿ ಕೊಂಚ ಮುಂದುವರಿಯುತ್ತಿದ್ದಂತೆ ಅವರ ಮೇಲೆ ಸೇಡು ತೀರಿಸಿಕೊಳ್ಳುವಂತೆ ಈ ದೌರ್ಜನ್ಯಗಳು ಎಸಗಲ್ಪಡುತ್ತಿವೆ. ಎಂಟು ವರ್ಷ, ಆರು ವರ್ಷ, ನಾಲ್ಕು ವರ್ಷದ ಹೆಣ್ಣು ಮಕ್ಕಳ ಮೇಲೆ ಕೂಡಾ ಈ ದೌರ್ಜನ್ಯ ನಡೆಸುತ್ತಾರೆ ಎಂದರೆ ಈ ಮನುಷ್ಯರ ಮೃಗೀಯತೆಗೆ ಏನೆಂದು ಹೆಸರಿಡಬೇಕು? ಹೆಣ್ಣು ಮಕ್ಕಳು ಉದ್ಯೋಗಿಗಳಾಗಿರುವಲ್ಲಿ ಮೇಲಧಿಕಾರಿಗಳಿಂದ, ಪೊಲೀಸ್ ಅಧಿಕಾರಿಗಳಿಂದ, ತಮ್ಮ ಕೈ ಕೆಳಗೆ ಉದ್ಯೋಗಿಗಳಾದ ಮಹಿಳಾ ಎಸ್.ಐ. ಅಥವಾ ಮಹಿಳಾ ಪೊಲೀಸಳ ಮೇಲೆ ಲೈಂಗಿಕ ಕಿರುಕುಳ ನೀಡಲು ಇವರಿಗೆ ಯಾವುದೇ ಅಪರಾಧಿ ಮನೋಭಾವ ಕಾಡುವುದಿಲ್ಲ. ಐ.ಎ.ಎಸ್. ಅಧಿಕಾರಿಗೆ ತನ್ನದೇ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿಯ ಮೇಲೆ ಲೈಂಗಿಕ ಕಿರುಕುಳ ನೀಡಲೂ ಹಿಂಜರಿಕೆ ಇಲ್ಲ. ಅನ್ಯ ಜಾತಿಯವನನ್ನು ಮದುವೆಯಾದ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಕೊಲೆ ಮಾಡುವ ಹೃದಯಹೀನ ನಡವಳಿಕೆ ಕೂಡಾ ಈ ಶತಮಾನದ ಕೊಡುಗೆ ಎನ್ನಬಹುದು. ಆ ಮಕ್ಕಳನ್ನು, ‘ನಮ್ಮ ಕಣ್ಣ ಮುಂದಿರಬೇಡಿ; ಎಲ್ಲಾದರೂ ಹೋಗಿ ಬದುಕಿ’ ಎಂದು ಊರಿನಿಂದ ಓಡಿಸಬಹುದಲ್ಲಾ? ಹೆತ್ತ ಮಕ್ಕಳನ್ನು ಜಾತಿಯ ಕಾರಣಕ್ಕಾಗಿ ಕೊಲೆ ಮಾಡುವಂತಹ ಮನಃಸ್ಥಿತಿ ಮನುಷ್ಯರಿಗೆ ಹೇಗೆ ಉಂಟಾಯಿತು? ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕಾಗಿ ಹೆಣ್ಣು ಮಕ್ಕಳ ಮೇಲೆ ಆ್ಯಸಿಡ್ ಎರಚಿ ಆಕೆ ಬದುಕುಪೂರ್ತಿ ನರಳುವಂತೆ ಮಾಡಲಾಗುತ್ತದೆ. ಪಟ್ಟಿ ಮಾಡುತ್ತಾ ಹೋದರೆ ಕೊನೆಯೇ ಇಲ್ಲದಂತಾಗುತ್ತದೆ. ಇಂತಹ ಎಲ್ಲಾ ಹಿಂಸೆ, ದೌರ್ಜನ್ಯಗಳಿಂದ ಬಹಳಷ್ಟು ನೋವನುಭವಿಸುವವರು ಮಹಿಳೆಯರೇ ಆಗಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಮಹಿಳಾ ಚಳವಳಿಯ ಕುರಿತು ಒಂದೆರಡು ಮಾತುಗಳನ್ನಷ್ಟೆ ಹೇಳುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಲಯದಲ್ಲಿ ‘ಮಹಿಳಾ ಚಳವಳಿಗಳು ಮತ್ತು ಹೋರಾಟಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ಕುರಿತು ವರಲಕ್ಷ್ಮಿ ಎಂಬವರು ಭಾಷಣ ಮಾಡಿದರು. ತಮ್ಮ ನ್ಯಾಯಯುತ ವೇತನಕ್ಕಾಗಿ ಹಾಗೂ ಕೆಲಸ ಖಾಯಂಗೊಳಿಸಲು ಕೈಗೊಂಡ ತಮ್ಮ ಪ್ರತಿಭಟನೆ ಮತ್ತು ಮುಖ್ಯಮಂತ್ರಿಯನ್ನು ಗೆರಾವ್ ಮಾಡಿದುದೆಲ್ಲವನ್ನೂ ಇವರು ವಿವರಿಸಿದರು. ಅಂತಹ ಸಂದರ್ಭಗಳಲ್ಲಿ ತಾವು ಪೊಲೀಸರಿಂದ ಏಟು ತಿಂದುದನ್ನು ವಿವರಿಸುತ್ತಾ, “ಪೊಲೀಸರ ಏಟು ತಾಗದ ಒಂದೇ ಒಂದಿಂಚು ಸ್ಥಳವೂ ನನ್ನ ದೇಹದಲ್ಲಿ ಇಲ್ಲ” ಎಂದರು. ಈ ಮಹಿಳೆಯರು ಗುಲ್ಬರ್ಗಾದಂತಹ ದೂರದ ಪ್ರದೇಶಗಳಿಂದಲೂ ಬರುತ್ತಾರೆ. ಹಾಗೆ ಬರಲು ಅವರ ಕೈಯಲ್ಲಿ ಟ್ರೈನ್ ಟಿಕೇಟ್‍ಗಳಿಗೂ ಹಣವಿರುವುದಿಲ್ಲ. ಇಂತಹ ಸಮ್ಮೇಳನಗಳಲ್ಲಿ ಊಟ, ತಿಂಡಿಗಳೂ ಇರುವುದಿಲ್ಲ. ಬರೇ ನೀರು ಮಾತ್ರ ದೊರೆಯುತ್ತದೆ. ಹೀಗಾಗಿ ಈ ಮಹಿಳೆಯರು ಒಂದೆರಡು ದಿನಗಳಿಗೆ ಬೇಕಾಗುವಷ್ಟು ರೊಟ್ಟಿ ಮತ್ತು ಚಪಾತಿಗಳನ್ನು ಮನೆಯಲ್ಲಿ ಮಾಡಿ ಕಟ್ಟಿಕೊಂಡು ಬರುತ್ತಾರೆ. ಅವುಗಳನ್ನು, ಬಟ್ಟೆಯ ಗಂಟನ್ನು ತಲೆಯ ಮೇಲಿಟ್ಟು ಕೊಂಡು, ಸೊಂಟದಲ್ಲಿ ಮಗುವನ್ನೆತ್ತಿಕೊಂಡು, ಟ್ರೈನ್ ಟಿಕೇಟು ಕೊಂಡುಕೊಳ್ಳದೆ ಪ್ರಯಾಣ ಮಾಡುತ್ತಾರೆ. ಕೆಲವೊಮ್ಮೆ ಟಿ.ಟಿ.ಇ. ಇವರನ್ನು ಹಿಡಿದು ಪೊಲೀಸರಿಗೊಪ್ಪಿಸುವುದೂ ಪೊಲೀಸರ ಹೊಡೆತ ತಿನ್ನುವುದೆಲ್ಲವೂ ನಡೆಯುತ್ತದೆ. ಈ ಎಲ್ಲ ಕಷ್ಟಗಳನ್ನೂ, ತೊಂದರೆಗಳನ್ನೂ ಅನುಭವಿಸುತ್ತಾ ಈ ಮಹಿಳೆಯರು ನಾಲ್ಕು ಕಾಸಿಗಾಗಿ, ಬದುಕಿಗಾಗಿ ಹೋರಾಟ ಮಾಡುತ್ತಾರೆ. ಮಂತ್ರಿಗಳು ಮತ್ತು ರಾಜಕಾರಣಿಗಳು ಸರಕಾರದ ಖರ್ಚಿನಲ್ಲಿ ದೆಹಲಿಗೆ ವಿಮಾಣ ಪ್ರಯಾಣ ಮಾಡುವುದನ್ನೂ ಅಲ್ಲಿನ ತಾರಾ ಹೊಟೇಲುಗಳಲ್ಲಿ ಇವರ ವಾಸ್ತವ್ಯದ ಖರ್ಚುಗಳನ್ನೂ ಊಹಿಸಿಕೊಳ್ಳಿ ಎಂದಷ್ಟೆ ಹೇಳುತ್ತಿದ್ದೇನೆ.

ಮಹಿಳೆಯರು ಇಂದು ಎದುರಿಸುತ್ತಿರುವ ನೂರಾರು ಸಮಸ್ಯೆಗಳಿವೆ. ಜಗತ್ತಿನಾದ್ಯಂತ ಎಲ್ಲಿಯೂ ಮಹಿಳೆಯರು ನೆಮ್ಮದಿಯ ಬದುಕು ನಡೆಸುತ್ತಿರುವುದು ಕಮ್ಮಿಯೇ. ನಮ್ಮ ದೇಶ, ನಮ್ಮ ರಾಜ್ಯ ಕೂಡಾ ಇದಕ್ಕೆ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲಿ ನಾವು ಮಹಿಳಾ ಸಾಹಿತಿಗಳ ಜವಾಬ್ದಾರಿ ಏನು, ಯಾವ ಗುರಿ ಹೊತ್ತು ನಾವು ಮುಂದೆ ಸಾಗಬೇಕು ಎಂಬುದರೆಡೆಗೆ ನಮ್ಮೆಲ್ಲ ಚಿಂತನೆಗಳು ಹರಿಯಬೇಕು.

ನಾನು ಬರಹದ ಮೂಲಕ ಜಾತಿ, ಧರ್ಮದ ಹಂಗಿಲ್ಲದೆ ಕೇವಲ ಮನುಷ್ಯರಾಗಿ ಬದುಕಲು ಸಾಧ್ಯ ಎಂಬುದನ್ನು ತೋರಿಸಿದ್ದೇನೆ. ಉತ್ತರ ಕರ್ನಾಟಕದವರೊಬ್ಬರು ನನ್ನ ಬಳಿ ಬಂದು ತಮ್ಮ ಮಗಳ ಬದುಕಿನ ದುರಂತವನ್ನು ವಿವರಿಸಿ ಕಾದಂಬರಿಯೊಂದನ್ನು ಬರೆಯಲು ಹೇಳಿದಾಗ ನಾನು ನನ್ನಿಂದ ಸಾಧ್ಯವಾದ ರೀತಿಯಲ್ಲಿ ಅದನ್ನು ಬರೆದು ಕೊಟ್ಟಿದ್ದೇನೆ. ಅವರ ಮಗಳ ಬದುಕಿನ ದುರಂತವನ್ನು ಅವರು ನನ್ನೊಡನೆ ಹಂಚಿಕೊಂಡಾಗ ಅವರು ಓರ್ವ ಹಿಂದುವೂ ಆಗಲಿಲ್ಲ; ನಾನೋರ್ವ ಮುಸ್ಲಿಮಳೂ ಆಗಲಿಲ್ಲ. ನಾವಿಬ್ಬರೂ ಕೇವಲ ಪರಸ್ಪರರ ಸುಖ ದುಃಖದಲ್ಲಿ ಪಾಲ್ಗೊಂಡ ಮನುಷ್ಯರು ಮಾತ್ರ ಆಗಿದ್ದೆವು. ಇಂತಹ ಎಷ್ಟೋ ಘಟನೆಗಳು ನನ್ನ ಮನದಾಳದಲ್ಲಿ ಅಚ್ಚೊತ್ತಿವೆ.

ನಿಮ್ಮೆಲ್ಲರೊಡನೆ ನನ್ನದೊಂದು ಕೋರಿಕೆ ಇದೆ. ನನ್ನ ಲೇಖನ ಸಂಗ್ರಹವೊಂದನ್ನು ‘ಸಾಹಿತ್ಯಕ್ಕೊಂದು ದಾರಿ ದೀಪ’ ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ‘ಚಿಂತೆ-ಚಿಂತನೆ’ ಎಂಬ ಇನ್ನೊಂದು ಲೇಖನ ಸಂಗ್ರಹವನ್ನು ನಾನೇ ಪ್ರಕಟಿಸಿದ್ದೇನೆ. ಈ ಎರಡೂ ಲೇಖನ ಸಂಗ್ರಹಗಳನ್ನೂ ನೀವೆಲ್ಲರೂ ದಯವಿಟ್ಟು ಓದಬೇಕು ಎಂಬುದು ನನ್ನದೊಂದು ವಿನಂತಿ.