ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಅಧ್ಯಕ್ಷೆಯರ ಕನಸು ನನಸು ನೆನಪು

 

ಟಿ. ಸುನಂದಮ್ಮ - 1979-1981

ಲೇಖಕಿಯರ ಸಂಖ್ಯೆ ಕಡಮೆ ಇದ್ದ ಕಾಲ ಅದು. ಅದೂ ಹೆಸರಿನಿಂದ ಪರಸ್ಪರ ಪರಿಚಯ ಇದ್ದ ಲೇಖಕಿಯರೇ ಹೊರತು ಭೇಟಿಯಿಂದ ಅಲ್ಲ. 1964ರಲ್ಲಿ ಜಯದೇವಿ ತಾಯಿ ಲಿಗಾಡೆಯವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಶಾಂತಾ ದಿವಾಕರ್ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲೇಖಕಿಯರ ಒಕ್ಕೂಟವನ್ನು ಏರ್ಪಡಿಸಿದ್ದು ಅಪರೂಪದ ಸಂಭ್ರಮ. ಎಂ.ಕೆ.ಇಂದಿರಾ, ಸಾವಿತ್ರೀದೇವಿ ನಾಯ್ಡು, ಕಾಮಾಕ್ಷಮ್ಮ, ಟಿ.ಸುನಂದಮ್ಮನವರು ಸೇರಿದ್ದ ಒಕ್ಕೂಟ ಅದು. ಪರಸ್ಪರರನ್ನು ನೋಡಿ ಪುಳಕಿತರಾದೆವೆಂದು ನಂತರ ಆ ಹಿರಿಯ ಚೇತನಗಳು ಹೇಳಿಕೊಂಡದ್ದಿದೆ. ಇಂಥದ್ದೇ ಒಂದು ಸಂದರ್ಭದಲ್ಲಿ ಎಚ್.ಆರ್.ಇಂದಿರಾರವರ ಪ್ರಯತ್ನದಿಂದ `ಕನ್ನಡ ಲೇಖಕಿಯರ ಸಂಘ' ಅಸ್ತಿತ್ವಕ್ಕೆ ಬಂದು ವ್ಯವಸ್ಥಿತ ಕಾರ್ಯಕ್ರಮಗಳನ್ನು ನಡೆಸಿ, ಲೇಖಕಿಯರ ಸಮ್ಮಿಲನಕ್ಕೆ ಕಾರಣವಾಗಿತ್ತು...ಆದರೆ ಕೆಲವೇ ವರ್ಷಗಳಲ್ಲಿ ಆ ಸಂಘ ಸ್ಥಗಿತವಾಯ್ತು.

1970ರ ಒಂದು ಸಂಜೆ ಸರೋಜಾ ನಾರಾಯಣರಾವ್ ತಮ್ಮ ಹೊಸ ಕಾದಂಬರಿಯ ಉಡುಗೊರೆ ಕೊಡುವ ನೆಪದಲ್ಲಿ ಕೆಲವು ಲೇಖಕಿಯರನ್ನು ಮನೆಗೆ ಆಹ್ವಾನಿಸಿದರು. ಅಂದಿನ ಮಾತುಕತೆಯೆಲ್ಲವೂ ಸಾಹಿತ್ಯವನ್ನು ಕುರಿತದ್ದೇ. ವಿಚಾರ ವಿನಿಮಯ, ಓದಿದ ಕೃತಿಗಳು, ಸಾಹಿತ್ಯ ಸಾಗುತ್ತಿರುವ ಹಾದಿ, ವಿಮರ್ಶೆ, ಹೊಸ ಪ್ರಕಟಣೆಗಳ ಬಗ್ಗೆ ಅಭಿಪ್ರಾಯ ಹೀಗೆ...ಎಲ್ಲವೂ...ಅಂದಿನ ಅನುಭವ ಅವಿಸ್ಮರಣೀಯ. ಆ ವಿಶೇಷ ಅನುಭವದಿಂದ ಪ್ರೇರಿತರಾದ ಲೇಖಕಿಯರು ಪ್ರತಿ ತಿಂಗಳು ಸಾಹಿತ್ಯಕೂಟ ನಡೆಸಲು ನಿರ್ಧರಿಸಿಯಾಗಿತ್ತು! ಅಂತೆಯೇ ಬೇರೆ ಬೇರೆ ಸದಸ್ಯರ ಮನೆಯಲ್ಲಿ ಈ ಸಾಹಿತ್ಯಕೂಟ ಅನೇಕ ವರ್ಷ ನಡೆದವು. ಆ ಅನೌಪಚಾರಿಕ ಕೂಟ ವರ್ಷಗಟ್ಟಳೆ ಅವರ ಸಾಹಿತ್ಯ ವೇದಿಕೆಯಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ `ಮಹಿಳಾ ವಿಭಾಗ' ಇದ್ದಿತಾದರೂ ಆಸಕ್ತ ಮಹಿಳೆಯರ ಸಂಖ್ಯೆಯ ಕೊರತೆಯಿತ್ತು. ಜಿ.ನಾರಾಯಣರವರು ಪರಿಷತ್ತಿನ ಅಧ್ಯಕ್ಷರಾದ ನಂತರ ಪರಿಷತ್ತಿನಲ್ಲಿ ಮಹಿಳೆಯರ ಸ್ಥಾನ-ಮಾನ ಹೆಚ್ಚಿತೆಂದರೆ ತಪ್ಪಲ್ಲ. 1975ನೇ ವರ್ಷವನ್ನು `ಮಹಿಳಾ ವರ್ಷ' ಎಂದು ಘೋಷಿಸಿದಾಗ ವಿವಿಧ ಕ್ಷೇತ್ರದ ಅನುಭವವಿರುವ ಲೇಖಕಿಯರಿಂದ ಪುಸ್ತಕಗಳನ್ನು ಬರೆಸಿದರು, ಉತ್ತಮ ಕೃತಿಗಳಿಗೆ ಬಹುಮಾನ ಕೊಟ್ಟರು.ಹೀಗೇ ನಾನಾ ಹಂತಗಳಲ್ಲಿ ಲೇಖಕಿಯರಿಗೆ ಸಹಕಾರ ಬೆಂಬಲ ಕೊಡುತ್ತಿದ್ದ ಜಿ.ನಾರಾಯಣ ಅವರು 1978ರ ಒಂದು ಸಂಜೆ ಕೆಲವು ಬರಹಗಾರ್ತಿಯರಿಗೆ ಮನೆಗೆ ಬರುವಂತೆ ಆಮಂತ್ರಣವಿತ್ತರು. `ನೀವು ನಿಮ್ಮದೇ ಸಂಘ ಸ್ಥಾಪಿಸಿ' ಎನ್ನುವ ಸಿಹಿ ಹಂಚಿದರು. ವಿಚಾರವಿನಿಮಯದ ನಂತರ `ಟಿ.ಸುನಂದಮ್ಮ ಅಧ್ಯಕ್ಷರಾಗಲಿ' ಎನ್ನುವ ನಿರ್ಣಯವೂ ಆಯಿತು. ಜಿ.ನಾರಾಯಣ ಅವರ ವಿನೋದ ಕಾರ್ಯಾಲಯದಲ್ಲಿಯೇ ಮೊದಲ ಸಭೆ ಮತ್ತು ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿಯ ಅಧಿಕೃತ ಆಯ್ಕೆ ಮಾಡಲಾಯ್ತು.

ಟಿ.ಸುನಂದಮ್ಮನವರ ನೇತೃತ್ವದಲ್ಲಿ ಪದಾಧಿಖಾರಿಗಳ ಮೊದಲ ಗುರಿ ಸ್ವಾಭಾವಿಕವಾಗಿ ಆರ್ಥಿಕ, ಆಜೀವ ಮತ್ತು ಸಾಮಾನ್ಯ ಸದಸ್ಯರನ್ನು ಕೂಡಿಸುವ ಪ್ರಯತ್ನ. ವಿಶೇಷವಾದ ಕೂಪನ್ ಪುಸ್ತಕಗಳ ಮಾರಾಟ. ಆಸಕ್ತರು ಅನೇಕರಿದ್ದು ಸದಸ್ಯತ್ವ ಪ್ರೋತ್ಸಾಹಕರವಾಯಿತು. ವಿನೋದ ಕಾರ್ಯಾಲಯದಲ್ಲಿ ಜಿ.ನಾರಾಯಣ ಅವರ ಉಪಸ್ಥಿತಿ, ಮಾರ್ಗದರ್ಶನದಲ್ಲಿ ಮೀಟಿಂಗ್ಗಳು ನಡೆಯುತ್ತಿದ್ದವು.

ಪುಸ್ತಕಗಳ ಪ್ರಕಟಣೆ ಹಾಗೂ ಮಹಿಳಾ ವರ್ಷದ ಪ್ರಯುಕ್ತ 12 ಲೇಖಕಿಯರ ಕೃತಿಗಳ ಬಿಡುಗಡೆ, ಉಪನ್ಯಾಸ ಹಾಗೂ ಮಕ್ಕಳ ಸಾಹಿತ್ಯ ತಜ್ಞರಿಂದ ವಿಚಾರಗೋಷ್ಠಿ ಆ ಅವಧಿಯಲ್ಲಿ ನಡೆದ ಹೆಸರಿಸಬೇಕಾದ ಕಾರ್ಯಕ್ರಮಗಳು. ಉದಯೋನ್ಮುಖ ಕವಯತ್ರಿಯರ ಕವಿಗೋಷ್ಠಿ, ವಾರ್ಷಿಕೋತ್ಸವದಂದು ನಡೆದ `ಟೊಮೇಟೋ ಪ್ರಿಯ'' ನಗೆ ನಾಟಕ ಮುದನೀಡಿದ ಕಾರ್ಯಕ್ರಮಗಳು.

 

ಎಚ್.ಎಸ್.ಪಾರ್ವತಿ 1981 ರಿಂದ 87 (ಮೂರು ಅವಧಿಗಳು)

ಬರೆಯುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಆದರೆ ಅವರ ಸಾಹಿತ್ಯ ಕುರಿತಾದ ಅಸಡ್ಡೆ ವ್ಯಾಪಕವಾಗಿತ್ತು! ಅಡುಗೆಮನೆ ಸಾಹಿತ್ಯ ಎಂದು ಮೂಲೆಗುಂಪಾಗಿದ್ದ ಪರಿಸ್ಥಿತಿ ಇತ್ತು. ಸ್ವತಃ ಮಹಿಳೆಯರೂ ಆತ್ಮ ವಿಮರ್ಶೆ ಮಾಡಿಕೊಳ್ಳುವ ಗೋಜಿಗೇ ಹೋಗಿರಲಿಲ್ಲ...ಬೆರಳೆಣಿಕೆಯಷ್ಟು ಹೊರತಾಗಿ. ಇಂಥ ಸಂದರ್ಭದಲ್ಲಿ ಕರ್ನಾಟಕ ಲೇಖಕಿಯರ ಸಂಘದಂತಹ (ಸಂಕ್ಷಿಪ್ತ ರೂಪ - ಕಲೇಸಂ) ವೇದಿಕೆಯ ಅವಶ್ಯಕತೆ ಇತ್ತು.

ಟಿ.ಸುನಂದಮ್ಮನವರ ನಂತರ ಸರ್ವಸದಸ್ಯರ ಸಭೆಯಲ್ಲಿ ಎಚ್.ಎಸ್.ಪಾರ್ವತಿಯವರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದಾಗ ಅರೆಮನಸ್ಸಿನಿಂದಲೇ ಒಪ್ಪಿಗೆ ನೀಡಿದರಂತೆ. ಉದ್ಯೋಗಸ್ಥೆ, ಪುಟ್ಟ ಮಕ್ಕಳ ತಾಯಿ..ಹೊಸದಾಗಿ ಹುಟ್ಟಿದ ಸಂಸ್ಥೆಯನ್ನು ನಿಭಾಯಿಸಿಕೊಂಡು ಹೋಗಲು ಸಾಧ್ಯವೇ...ಬಲು ಕಷ್ಟ ಎಂದುಕೊಂಡರೂ ಉತ್ಸಾಹದಿಂದಲೇ `ಸಂಘ ಮುಂದುವರೆಯಲೇ ಬೇಕು' ಎಂಬ ಜಾಗೃತ ಮನಃಸ್ಥಿತಿಯಿಂದ ಕೆಲಸ ಆರಂಭಿಸಿದರು.

ಸಮಾನ ಮನಸ್ಕ, ನುರಿತ, ಸಮಾನ ಉತ್ಸಾಹಿ ಪದಾಧಿಕಾರಿಗಳೊಂದಿಗೆ, ಕಾರ್ಯಕಾರಿ ಸಮಿತಿ ಸದಸ್ಯೆಯರ ಪೂರ್ಣ ವಿಶ್ವಾಸದೊಂದಿಗೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಆರ್ಥಿಕ ಸ್ಥಿತಿ ಏನೇನೂ ಅಲ್ಲದ ಸಂದರ್ಭದಲ್ಲಿಯೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದು ಹೆಚ್ಚುಗಾರಿಕೆ. ಸಂಘದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲೇ ಬೇಕು ಎನ್ನುವ ಉದ್ದೇಶದಿಂದ `ಬಡಾವಣೆ ಕಾರ್ಯಕ್ರಮ'ಗಳನ್ನು ಹಮ್ಮಿಕೊಳ್ಳಲಾಯಿತು. ಲಲಿತಾಗೋಪಾಲಸ್ವಾಮಿಯವರ ಸಂಚಾಲಕತ್ವದಲ್ಲಿ ಬಿಎನ್ಎಂ ಕಾಲೇಜಿನ ಆವರಣದಲ್ಲಿ ಕೆಲವು ಕಾರ್ಯಕ್ರಮಗಳು ನಡೆದವು. ಬನಶಂಕರಮ್ಮನವರ ನೇತೃತ್ವದಲ್ಲಿ ಶಂಕರಪುರದ ಅಶೋಕ ಶಿಶುವಿಹಾರದಲ್ಲಿ ಭಾಷಣ, ವಿಮರ್ಶೆ, ವೀಣಾವಾದನ, ಏಕಾಪಾತ್ರಾಭಿನಯ, ಇಟಾಲಿಯನ್ ಕಲಾ ಪ್ರದರ್ಶನ ಏರ್ಪಟ್ಟಿತು. 1982ರಲ್ಲಿ ಸಂಘದ 3ನೇ ಹುಟ್ಟುಹಬ್ಬ ಅರ್ಥಪೂರ್ಣವಾಗಿ ನಡೆಯಿತು. ಸಾಕಷ್ಟು ಪ್ರಯತ್ನಪಟ್ಟು 1982ರ ಫೆಬ್ರವರಿ 27 ಮತ್ತು 28ರಂದು ವಾರ್ಷಿಕೋತ್ಸವದ ಕಾರ್ಯಕ್ರಮಗಳು ನಡೆದವು. 27ರಂದು ಸಂಜೆ, ಅಂದಿನ ರಾಜ್ಯ ವಿಧಾನ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಬಸವರಾಜೇಶ್ವರಿ ಅವರು ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉದ್ಘಾಟಿಸಿದರು. ಶ್ರೀಮತಿ ಶಾಂತಾ ನಾಗರಾಜ್ ತುಂಬಾ ಶ್ರಮವಹಿಸಿ, ಲೇಖಕಿಯರ ಪುಸ್ತಕ ಸಂಗ್ರಹಿಸಿ ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆ ಗಳಿಸಿತು. ಹಿರಿಯ ಲೇಖಕಿಯರಾದ ಎಂ.ಕೆ. ಇಂದಿರಾ ಮತ್ತು ಟಿ.ಸುನಂದಮ್ಮನವರನ್ನು ಸನ್ಮಾನಿಸಲಾಯಿತು.

ಈ ವೇಳೆಗೆ ಸಂಘ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ರಾಜ್ಯದ ಇತರ ಸ್ಥಳಗಳಲ್ಲೂ ಕಾರ್ಯಕ್ರಮಗಳನ್ನು ನಡೆಸಲು ಆರಂಭಿಸಿದ್ದು ಒಂದು ವಿಶೇಷ ಹೆಜ್ಜೆಯಾಯಿತು. ಬೆಳಗಾವಿಯಲ್ಲಿ ಭಗಿನಿ ಮಂಡಲಿಯ ಸಹಯೋಗದೊಂದಿಗೆ, ಶಿವಮೊಗ್ಗದಲ್ಲಿ ಪ್ರತಿಭಾ ರಂಗದ ನೆರವಿನೊಂದಿಗೆ, ಗುಡಿಬಂಡೆಯಲ್ಲಿ ಮೈತ್ರಿ ಸಂಗಮ ಸಂಸ್ಥೆಯೊಂದಿಗೆ ಸಂಘ ಜೊತೆಗೂಡಿ ಒಳ್ಳೆಯ ಸಾಹಿತ್ಯಕ ಮತ್ತು ಮಹಿಳಾ ಅಭಿವೃದ್ಧಿಪರ ವಿಷಯಗಳ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿತು.

ಈ ಅವಧಿಯ ಒಂದು ಮುಖ್ಯ ಕಾರ್ಯಕ್ರಮವೆಂದರೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಅಂದಿನ ದಿನಗಳಲ್ಲಿ ನಡೆಸುತ್ತಿದ್ದ `ಸಂಸ್ಕೃತಿ ಸುದಿನ' ಕಾರ್ಯಕ್ರಮದ ಪ್ರಯೋಜನವನ್ನು ಕರ್ನಾಟಕ ಲೇಖಕಿಯರ ಸಂಘ ಪಡೆದುಕೊಂಡಿದ್ದು! ಕಲೇಸಂ `ಸಂಸ್ಕೃತಿ-ಸುದಿನ' ಕಾರ್ಯಕ್ರಮವನ್ನು ನಡೆಸಿಕೊಡಲು ಸಾಧ್ಯವೇ ಎಂದು ಕೇವಲ ಐದಾರು ದಿನಗಳಿರುವಾಗ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶಶನಾಲಯ ಸಂಘವನ್ನು ಕೇಳಿತು. ಬೆಂಗಳೂರು ಆಕಾಶವಾಣಿಯ ಉದ್ಯೋಗಿಗಳಾಗಿದ್ದ ನಾಗಮಣಿ ಎಸ್.ರಾವ್ ಮತ್ತು ಪಾರ್ವತಿಯವರು ಅಂದು ಮಧ್ಯಾಹ್ನವೇ ಚರ್ಚಿಸಿ, ಸಂಘಕ್ಕೆ ಸುಮಾರು ಎರಡು ಸಾವಿರ ರೂಪಾಯಿಗಳು ದೊರಕುವುದರಿಂದ ಈ ಕಾರ್ಯಕ್ರಮ ಒಪ್ಪಿಕೊಂಡು ಮಾಡಿಬಿಡುವುದು. ಹೇಗೂ ಇತರ ಎಲ್ಲ ವ್ಯವಸ್ಥೆಗಳ ಜವಾಬ್ದಾರಿಯನ್ನು ನಿರ್ದೇಶನಾಲಯ ನೋಡಿಕೊಳ್ಳುತ್ತದೆ ಎಂದು ಯೋಚಿಸಿ, ದಿಢೀರ್ ರಸಮಂಜರಿ ಕಾರ್ಯಕ್ರಮವೊಂದನ್ನು ರೂಪಿಸಿದ್ದಲ್ಲದೆ, ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪರಿಚಯಸ್ಥ ಕಲಾವಿದರನ್ನೇ ಆರಿಸಿ, ಅವರನ್ನು ಭೇಟಿ ಮಾಡಿ ಒಪ್ಪಿಸಿ ಯಶಸ್ವಿಯಾಗಿ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದರು. ಮಹಿಳಾ ನಾಟಕ ಸಂಸ್ಥೆ ಸ್ಥಾಪಿಸಿ ವೀರ ಪುರುಷರ ಪಾತ್ರ ನಿರ್ವಹಣೆಗೆ ಹೆಸರಾಗಿದ್ದ ರಂಗ ಕಲಾವಿದೆ ಆರ್. ನಾಗರತ್ನಮ್ಮ ಕಂಸನ ಪಾತ್ರದಲ್ಲಿ ವಿಜೃಂಭಿಸಿದರೆ, ರಂಗ ಹಾಗೂ ಚಲನಚಿತ್ರ ಕಲಾವಿದೆಯಾಗಿ ಹೆಸರು ಮಾಡಿ, ಆ ವೇಳೆಗೆ ಆಕಾಶವಾಣಿಯ ಕಲಾವಿದೆಯಾಗಿದ್ದ ಎಸ್.ಕೆ. ಪದ್ಮಾದೇವಿಯವರು, "ಇನ್ನು ಹುಬ್ಬಳಿಯಾವ ಯಾಕೆ ಬರಲಿಲ್ಲ?" ಎಂಬ ದ.ರಾ.ಬೇಂದ್ರೆಯವರ ಕವನದ ಹಿನ್ನೆಲೆಯಲ್ಲಿ ನರ್ತಿಸಿ ಸಭಿಕರನ್ನು ರಂಜಿಸಿದರು. ಜೊತೆಗೆ ಖ್ಯಾತ ಕಲಾವಿದರುಗಳು ಇತರ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸರ್ಕಾರಿ ವಲಯದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಘಕ್ಕೆ ಇದರಿಂದಾಗಿ ವಿಶೇಷ ಮಾನ್ಯತೆ ದೊರೆಯಿತು.

ಸಂಘದ ಐದನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೆಳವಣಿಗೆಯ ಇನ್ನೊಂದು ಹೆಜ್ಜೆಯಾಗಿ, ತುಮಕೂರಿನ ಸುಲೋಚನಾದೇವಿ ಆರಾಧ್ಯ ಅವರು ಸಿದ್ಧಪಡಿಸಿದ "ಸೋ ಎನ್ನಿರೇ ಸೋಬಾನೆ ಎನ್ನಿರೊ" ಎಂಬ ಕ್ಯಾಸೆಟ್ ಬಿಡುಗಡೆ ಮಾಡಲಾಯಿತು. ಹಿರಿಯ ಲೇಖಕಿ ಜಯಲಕ್ಷ್ಮಿ ಶ್ರೀನಿವಾಸನ್, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಲೀಲಾದೇವಿ ಆರ್ ಪ್ರಸಾದ್ ಮತ್ತು ಬೆಂಗಳೂರು ನಗರ ಕಾರ್ಪೋರೇಷನ್ನಿನ ಉಪಮೇಯರ್ ಆಗಿ ಆಯ್ಕೆಗೊಂಡಿದ್ದ ಲಲಿತಾ ರಾಜ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಲೇಖಕಿಯರ ಸಂಘದ ಮುನ್ನಡೆಯಲ್ಲಿ 1985ನೇ ಸಾಲಿಗೆ ವಿಶೇಷ ಮಾನ್ಯತೆಯಿದೆ. ಮೊದಲ ಸಮ್ಮೇಳನ ನಡೆದದ್ದು, ಸಂಘ ಬಾಡಿಗೆಯನ್ನು ಕೊಟ್ಟು ಒಂದು ರೂಮಿನ ಪ್ರತ್ಯೇಕ ಕಛೇರಿ ಹೊಂದಲು ಸಾಧ್ಯವಾದದ್ದು, ಸಂಘದ ತ್ರೈಮಾಸಿಕ ಪತ್ರಿಕೆ "ಲೇಖಕಿ" ಶುರುವಾದದ್ದು, ತುಮಕೂರಿನ ಸಂಘದ ಶಾಖೆ ಆರಂಭವಾದದ್ದು ಮತ್ತು ಮೊದಲ ದತ್ತಿನಿಧಿ ಅಸ್ತಿತ್ವಕ್ಕೆ ಬಂದದ್ದು ಈ ವರ್ಷದಲ್ಲಿಯೇ. ಪ್ರಥಮ ಸಮ್ಮೇಳನ

1985ರ ಮಾರ್ಚಿ 11 ಮತ್ತು 12ರಂದು ಕರ್ನಾಟಕ ಲೇಖಕಿಯರ ಸಂಘದ ಮೊದಲ ರಾಜ್ಯಮಟ್ಟದ ಸಮ್ಮೇಳನ, ಖ್ಯಾತ ಲೇಖಕಿ ಮತ್ತು ಪಾರ್ಲಿಮೆಂಟ್ ಸದಸ್ಯೆ ಡಾ|| ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ ಸೊಗಸಾಗಿ ನಡೆಯಿತು. ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ರಾಜ್ಯ ಸರ್ಕಾರ ಸಮ್ಮೇಳನದ ಖರ್ಚಿಗಾಗಿ 20 ಸಾವಿರ ರೂಪಾಯಿಗಳನ್ನು ನೀಡಿದ್ದರಿಂದ ಹಣಕಾಸಿನ ತೊಂದರೆಯಾಗಲಿಲ್ಲ. ಹೊರ ಊರುಗಳಿಂದ ಬಂದಿದ್ದ ಪ್ರತಿನಿಧಿಗಳಿಗೆಲ್ಲ ವಸತಿ, ಊಟ ಉಪಚಾರದ ವ್ಯವಸ್ಥೆಯಾಗಿತ್ತು. ಸಮ್ಮೇಳನದ ನಂತರ ಸರ್ಕಾರದ ನೆರವು, ಸ್ಮರಣ ಸಂಚಿಕೆಯ ಜಾಹೀರಾತು ಪ್ರತಿನಿಧಿ ಶುಲ್ಕ ಮುಂತಾದ ಮೂಲಗಳಿಂದ ಬಂದ ಹಣದಲ್ಲಿ ಸ್ವಲ್ಪ ಉಳಿತಾಯವೂ ಆಗಿತ್ತು.

ತನ್ನದೇ ಗೂಡಿಗೆ...
ಸ್ವತಂತ್ರವಾದ ಒಂದು ಕಛೇರಿಯ ಅವಶ್ಯಕತೆ ತೀವ್ರವಾಯಿತು. ಉಪಾಧ್ಯಕ್ಷೆ ಕೆ.ಟಿ. ಬನಶಂಕರಮ್ಮನವರ ಪ್ರಯತ್ನದ ಫಲವಾಗಿ ಚಾಮರಾಜಪೇಟೆ 2ನೇ ಅಡ್ಡರಸ್ತೆ, ಮೂರನೇ ಮುಖ್ಯರಸ್ತೆಯ ಮೂಲೆಯಲ್ಲಿದ್ದ ಶ್ರೀ ಕೃಷ್ಣಮೂರ್ತಿಯವರ ಮನೆಯ ಮೇಲಿದ್ದ ಒಂದು ಚಿಕ್ಕ ಕೊಠಡಿಯನ್ನು ಬಾಡಿಗೆಗೆ ಪಡೆದು ಕ್ರಮೇಣ ಕುರ್ಚಿ, ಮೇಜು ಬೀರುಗಳನ್ನು ಕೊಂಡು ರೂಮಿನ ಮುಂದೆ ಒಂದು ನಾಮಫಲಕ ತಗುಲಿ ಹಾಕಿ ಸಂಭ್ರಮಿಸಲಾಯಿತು. ಆರು ವರ್ಷಗಳ ಕಾಲ ಜಿ.ನಾರಾಯಣ ಅವರ ಔದಾರ್ಯದಲ್ಲಿ ಕಾರ್ಯ ನಿರ್ವಹಿಸಿದ್ದ ಕಲೇಸಂ ತನ್ನದೇ ಆದ ಜಾಗಕ್ಕೆ ಬಂತು. ಇದುವರೆಗೂ ವಾರ್ಷಿಕ ಸರ್ವ ಸದಸ್ಯರ ಸಭೆಗಳೆಲ್ಲ ವಿನೋದ ಕಾರ್ಯಾಲಯಕ್ಕೆ ಹತ್ತಿರವಾಗಿದ್ದ ಶ್ರೀ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತಿತ್ತು. ಹೊಸ ಸ್ಥಳಕ್ಕೆ ಬಂದನಂತರ ಕೆ.ಟಿ. ಬನಶಂಕರಮ್ಮನವರು ಮುಖ್ಯಸ್ಥರಾಗಿದ್ದ ಅಶೋಕ ಶಿಶುವಿಹಾರದ ಸಭಾಂಗಣದಲ್ಲಿ ಸಂಘದ ವಾರ್ಷಿಕಕ ಸರ್ವ ಸದಸ್ಯರ ಸಭೆ ಹಾಗೂ ಹಲವಾರು ಸಾಧಾರಣ ಕಾರ್ಯಕ್ರಮಗಳು ಸಹ ನಡೆದವು.

ಲೇಖಕಿ' ಯ ಜನನ....
ಸಂಘದ ಮುಖವಾಣಿಯಾಗಿ `ಲೇಖಕಿ' ಎಂಬ ಹೆಸರಿನ ತ್ರೈಮಾಸಿಕ ಪತ್ರಿಕೆ ಇದೇ ವರ್ಷ ಅಕ್ಟೋಬರ್ 23ರಂದು ಆರಂಭವಾಯಿತು. ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಶ್ರೀ ಅ.ರಾ. ಚಂದ್ರಹಾಸಗುಪ್ತ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಎಚ್.ಎಸ್. ಪಾರ್ವತಿ ಸಂಪಾದಕಿಯಾದರು. ಕವಯತ್ರಿ ಉಷಾದೇವಿ ಸಹಸಂಪಾದಕಿಯಾದರು.

ಮೊದಲ ಶಾಖೆ
ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಶಾಖೆ 1985ರ ಡಿಸೆಂಬರ್ 22 ರಂದು ಆರಂಭವಾಯಿತು. ಉತ್ಸಾಹಿ ಲೇಖಕಿ ಬಾ.ಹ. ರಮಾಕುಮಾರಿ ಶಾಖೆಯ ಮೊದಲ ಅಧ್ಯಕ್ಷರು. ಇಂದಿಗೂ ಈ ಶಾಖೆ ತುಂಬ ಚಟುವಟಿಕೆಯಿಂದ ಕಾರ್ಯಶೀಲವಾಗಿದೆ.

ಮೊದಲ ದತ್ತಿನಿಧಿ
ಈ ಮಧ್ಯೆ ಅಮೇರಿಕಾದಿಂದ ಬಂದಿದ್ದ ಕನ್ನಡಾಭಿಮಾನಿ `ಅಮೆರಿಕನ್ನಡ' ಪತ್ರಿಕೆ ಸಂಪಾದಕ ಡಾ|| ಹರಿಹರೇಶ್ವರ ಅವರು ಸಂಘಕ್ಕೆ ಒಂದು ನೂರು ಡಾಲರ್ ನೀಡಿದರು. ಅದರ ವಿನಿಮಯವಾಗಿ ಬಂದ ಎರಡು ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ದತ್ತಿಯಾಗಿಟ್ಟು ವಿದ್ಯಾರ್ಥಿಗಳ ಲೇಖನ ಸ್ಪರ್ಧೆ ವಿಜೇತರಿಗೆ ಒಂದು ಬಹುಮಾನ ನೀಡುವ ವ್ಯವಸ್ಥೆ ಮಾಡಲಾಯಿತು. ಬಹುಶಃ ಸಂಘದ ಪ್ರಥಮ ದತ್ತಿ ನಿಧಿ ಇದು.

ಇದೇ ವರ್ಷ ಫೆಬ್ರವರಿ 15ರಿಂದ ಪ್ರಪ್ರಥಮವಾಗಿ ಸಾಹಿತ್ಯ ಶಿಬಿರವೊಂದನ್ನು ಸಂಘ ಒಂದು ವಾರ ಕಾಲ ನಡೆಸಿತು. ಹಲವಾರು ಪ್ರಖ್ಯಾತರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಬೆಂಗಳೂರಿನ ಅಶೋಕ ಶಿಶುವಿಹಾರದಲ್ಲಿ ನಡೆದ ಈ ಶಿಬಿರಕ್ಕೆ ಪ್ರೊ. ಎಲ್.ಎಸ್. ಶೇಷಗಿರಿರಾವ್ ಮತ್ತು ಕೆ.ಎಸ್. ನಿರ್ಮಲಾದೇವಿಯವರು ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು.

ಸಂಘ ಎಲ್ಲ ರೀತಿಯಲ್ಲೂ ಸದೃಢವಾಗಿ ಬೆಳೆಯಲಾರಂಭಿಸಿತ್ತು. ಸಂಘದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತ್ತು. ಸರ್ಕಾರದಿಂದಲೂ ಪ್ರತಿವರ್ಷ ಸಹಾಯಧನ ದೊರಕುವಂತಾಯಿತು. ಕೆಲವು ಪುಸ್ತಕಗಳೂ ಪ್ರಕಟಣೆಯಾಗಿದ್ದವು. ಲೇಖಕಿಯರಿಗಾಗಿಯೇ ಒಂದು ಪ್ರತ್ಯೇಕ ಸಂಘದ ಅಗತ್ಯವಿದೆಯೇ ಎಂಬ ಸಂದೇಹವನ್ನು ಆರಂಭ ಕಾಲದಲ್ಲಿ ವ್ಯಕ್ತಪಡಿಸಿದ್ದ ಅನುಪಮಾ ನಿರಂಜನ, ಚಿ.ನಾ. ಮಂಗಳಾ ಮತ್ತಿತರ ಕೆಲವು ಹಿರಿಯ ಲೇಖಕಿಯರು ತಮ್ಮ ದ್ವಂದ್ವದಿಂದ ಹೊರಬಂದು, ಸಂಘದ ಪ್ರತ್ಯೇಕ ಅಸ್ತಿತ್ವವನ್ನು ಒಪ್ಪಿಕೊಂಡು ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ನೆರವಾಗುತ್ತಿದ್ದರು.

 

ಹೇಮಲತಾ ಮಹಿಷಿ

1987-95 ರವರೆಗೆ (ನಾಲ್ಕು ಅವಧಿಗಳು)

ಶ್ರೀಮತಿ ಹೇಮಲತಾ ಮಹಿಷಿಯವರು ಸಂಘದ ಅಧ್ಯಕ್ಷರಾಗುವ ವೇಳೆಗೆ, ಪ್ರಪಂಚದೆಲ್ಲೆಡೆ ಸ್ತ್ರೀವಾದಿ ಚಳುವಳಿಯ ಬೀಸುಗಾಳಿ ಬಲವಾಗಿತ್ತು. ಲೇಖಕಿಯರ ಸಂಘಟನೆಯನ್ನು ಬಲಪಡಿಸುವುದರೊಂದಿಗೆ, ಲೇಖಕಿಯರ ಸಂಘಕ್ಕೆ ತನ್ನದೇ ಆದ ಅನನ್ಯತೆ ತಂದುಕೊಡುವತ್ತ ಅವರು ಗಮನ ನೀಡಿದರು. ಹಲವಾರು ಪ್ರಮುಖ ಲೇಖಕಿಯರೂ ಆ ವೇಳೆಗೆ ಸಂಘದ ಸದಸ್ಯರಾಗಿದ್ದು ಈ ಕಾರ್ಯದಲ್ಲಿ ಅವರಿಗೆ ಸಕ್ರಿಯ ನೆರವು ನೀಡಿದರು. ನಿರ್ಲಕ್ಷಿಸಲ್ಪಟ್ಟಿದ್ದ ಹಲವಾರು ಹಿರಿಯ ಲೇಖಕಿಯರ ಬಗ್ಗೆ ಸಂಶೋಧನೆ ನಡೆಸಿ ಪುಸ್ತಕಗಳನ್ನು ಪ್ರಕಟಿಸುವ ಸ್ತುತ್ಯಕಾರ್ಯ ಈ ಅವಧಿಯಲ್ಲಿ ನಡೆಯಿತು. ಬೆಳೆಗೆರೆ ಜಾನಕಮ್ಮ, ಆರ್. ಕಲ್ಯಾಣಮ್ಮ, ಶ್ಯಾಮಲಾದೇವಿ ಬೆಳಗಾಂವ್ಕರ್ ಅವರುಗಳ ಬದುಕು ಹಾಗೂ ಸಾಹಿತ್ಯ ಕುರಿತು ಮಹತ್ವದ ಪುಸ್ತಕಗಳು ಹೊರಬಂದವು. `ಸ್ತ್ರೀವಾದಿ ಪ್ರವೇಶಿಕೆ' ಸ್ತ್ರೀವಾದದ ಬಗ್ಗೆ, ಅದರ ತಾತ್ವಿಕ ನೆಲೆಗಳ ಬಗ್ಗೆ ಪರಿಚಯ ಮಾಡಿಕೊಡುವ ಸಂಘದ ಮಹತ್ವಪೂರ್ಣ ಪ್ರಕಟಣೆಯಾಗಿ ಹೊರಬಂದಿತು.

ಖ್ಯಾತ ಲೇಖಕಿ ಎಂ.ಕೆ. ಇಂದಿರಾ ಅವರಿಗೆ 75 ವರ್ಷ ಸಂದ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಕುರಿತಂತೆ `ಸುರಗಿ' ಎಂಬ ಹೆಸರಿನ ಅಭಿನಂದನಾ ಗ್ರಂಥ ಪ್ರಕಟಿಸಿ, 50 ಸಾವಿರ ರೂಪಾಯಿಗಳ ಹಮ್ಮಿಣಿಯೊಂದಿಗೆ ಸುಂದರ ಸಮಾರಂಭವೊಂದರಲ್ಲಿ ಕೊಡಮಾಡಲಾಯಿತು. 1993ರ ನವಂಬರ್ 22ರಂದು ಏರ್ಪಡಿಸಿದ್ದ ಹಿರಿಯ ಸಾಹಿತಿ ಟಿ. ಸುನಂದಮ್ಮನವರ 76ವರ್ಷದ ಹುಟ್ಟುಹಬ್ಬದ ಅಭಿನಂದನಾ ಸಮಾರಂಭದಲ್ಲಿ ಹರಿಹರದ ಆಶಾ ಪಬ್ಲಿಕೇಷನ್ ಪ್ರಕಟಿಸಿದ್ದ ಟಿ.ಸುನಂದಮ್ಮನವರ ಸಮಗ್ರ ಹಾಸ್ಯ ಸಾಹಿತ್ಯದ ಬೃಹತ್ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.

ರಾಜ್ಯದ ವಿವಿಧ ಸ್ಥಳಗಳಲ್ಲಿ ಹಲವಾರು ಕಾರ್ಯಕ್ರಮಗಳು ನಡೆದುದಷ್ಟೇ ಅಲ್ಲ, ಮಧ್ಯಪ್ರದೇಶದ ಇಂದೂರನಲ್ಲಿ ದೇವಿ ಅಹಲ್ಯಾಬಾಯಿ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಯಾಗಿದ್ದ ಸಂಘದ ಸದಸ್ಯೆ ಬಿ.ವೈ. ಲಲಿತಾಂಬರವರ ಪರಿಶ್ರಮದಿಂದ ವಿಚಾರ ಸಂಕಿರಣ ಏರ್ಪಾಡಾಯಿತು. ಕರ್ನಾಟಕ ಲೇಖಕಿಯರ ಸಂಘ ಹಾಗೂ ಇಂದೂರಿನ ಕನ್ನಡ ಸಂಘದ ಸಹಯೋಗದಿಂದ ರೂಪಿತವಾದ ಸಮಾರಂಭದಲ್ಲಿ 1995ರ ಫೆಬ್ರವರಿ 26ರಂದು ಸಂಘದ ಲೇಖಕಿಯರು ಭಾಗವಹಿಸಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಟ್ಟರು.

ಕರ್ನಾಟಕ ಲೇಖಕಿಯರ ಸಂಘದ ಎರಡು ಪ್ರಮುಖ ದತ್ತಿ ನಿಧಿಗಳು ಸ್ಥಾಪನೆಗೊಂಡದ್ದೂ ಈ ಅವಧಿಯಲ್ಲಿಯೇ. ಮೊದಮೊದಲು ದೂರವೇ ಇದ್ದ ಡಾ. ಅನುಪಮಾ ನಿರಂಜನ ಅವರು ಹತ್ತಿರವಾದರು; ಉತ್ಸಾಹದಿಂದ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಅಷ್ಟೇ ಅಲ್ಲ, ಅವರು ನಿಧನ ಹೊಂದಿದಾಗ ಅವರಿಚ್ಛೆಯಂತೆ 50 ಸಾವಿರ ರೂಪಾಯಿಗಳ ನಿಧಿಯನ್ನು ಅವರ ಮಕ್ಕಳು ಸಂಘಕ್ಕೆ ನೀಡಿದರು. ಅವರ ಅಭಿಮಾನಿ ದಾನಿಗಳಿಂದ ಮತ್ತಷ್ಟು ಹಣಕೂಡಿಸಿ ಒಂದು ಲಕ್ಷ ರೂಪಾಯಿಗಳ ದತ್ತಿ ನಿಧಿಯೊಂದನ್ನು ಸ್ಥಾಪಿಸಲಾಯಿತು.

1992ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು 10 ಸಾವಿರ ರೂಪಾಯಿಗಳನ್ನು ಹಿರಿಯ ಲೇಖಕಿ ಎಚ್.ವಿ.ಸಾವಿತ್ರಮ್ಮನವರಿಗೆ ನೀಡಿದಾಗ, ಅವರು ಅದರ ಜೊತೆಗೆ ಮತ್ತೆ ಹತ್ತು ಸಾವಿರ ರೂಪಾಯಿ ಸೇರಿಸಿ ತಮ್ಮ ಹೆಸರಿನ ದತ್ತಿ ನಿಧಿಯಾಗಿ ಸಂಘಕ್ಕೆ ನೀಡಿದರು. ಈಗ ಅವರ ಮಕ್ಕಳ ಕೊಡುಗೆಯಿಂದಾಗಿ ಈ ದತ್ತಿ ನಿಧಿ ದೊಡ್ಡದಾಗಿ ಬೆಳೆದಿದೆ. ಸಂಘದ ಮೊದಲ ವರ್ಷಗಳಲ್ಲಿ ಕಾರ್ಯದರ್ಶಿಯಾಗಿದ್ದ ಲೇಖಕಿ ಗೀತಾ ದೇಸಾಯಿ ಅವರ ಹೆಸರಿನಲ್ಲಿ ಅವರ ಮನೆಯವರೂ ದತ್ತಿ ನಿಧಿಯೊಂದನ್ನು ಈ ಅವಧಿಯಲ್ಲೇ ಕೊಡಮಾಡಿದರು.

ಸಂಘ ಸತ್ವಶಾಲಿಯಾಗಿ ಬೆಳೆಯತೊಡಗಿತು. ಸದಸ್ಯರ ಸಂಖ್ಯೆಯು ಐದುನೂರು ದಾಟಿತ್ತು. ಸಂಖ್ಯೆ ದೊಡ್ಡದಾದಂತೆ ಹಲವಾರು ರೀತಿಯ ಸಮಸ್ಯೆಗಳೂ ಏಳುತ್ತಿದ್ದವು. ಇವುಗಳನ್ನೆಲ್ಲ ಪರಿಹರಿಸಿಕೊಳ್ಳುತ್ತಾ ಸಂಘ ತನ್ನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ, ಮುನ್ನಡೆಯುತ್ತಿದ್ದುದು ಸಂತಸದ ಸಮಾಧಾನದ ಸಂಗತಿಯಾಗಿತ್ತು.

 

ನಾಗಮಣಿ ಎಸ್.ರಾವ್

1995-99 (ಎರಡು ಅವಧಿಗಳು)

1995ರ ಆಗಸ್ಟ್ನಲ್ಲಿ ನಡೆದ ಸಂಘದ ಸರ್ವಸದಸ್ಯರ ಸಭೆಯಲ್ಲಿ ಬಹುಮತದಿಂದ ನಾಗಮಣಿ ಎಸ್.ರಾವ್ ಅಧ್ಯಕ್ಷರಾಗಿ ಆಯ್ಕೆಯಾದರು. ಆರಂಭದ ವರ್ಷಗಳಲ್ಲಿ ಚುನಾವಣೆಯ ಜಂಜಾಟ ಬೇಡ ಅಧ್ಯಕ್ಷರು ಸರ್ವಾನುಮತದಿಂದ ಆಯ್ಕೆಯಾಗಲಿ ಎಂಬ ಅಭಿಪ್ರಾಯವಿದ್ದುದರಿಂದ ಇದುವರೆಗಿನ ಮೂರೂ ಅಧ್ಯಕ್ಷರನ್ನು ಒಮ್ಮತದಿಂದ ಸಂಘ ಆರಿಸಿತ್ತು. ಆದರೆ ಈ ವರ್ಷ ಆಯ್ಕೆ ಇನ್ನೇನು ಅವಿರೋಧವಾಗಿ ಆಯಿತು ಎಂದು ಭಾವಿಸುವಷ್ಟರಲ್ಲಿ ಹಿರಿಯ ಲೇಖಕಿ ಎ. ಪಂಕಜಾ ಅವರ ಹೆಸರೂ ಸೂಚಿಸಲ್ಪಟ್ಟಿತು. ಎಂದಾದರೂ ಒಂದು ದಿನ ಈ ಸಂದರ್ಭ ಎದುರಿಸಬೇಕು. ಇಂದಿನಿಂದಲೇ ಮತದಾನದ ಆಯ್ಕೆ ನಡೆದೇ ಬಿಡಲಿ ಎಂದು ಸಭೆ ಅಭಿಪ್ರಾಯಪಟ್ಟಿತು. ಚುನಾವಣಾಧಿಕಾರಿಯಾಗಿದ್ದ ಹೇಮಲತಾ ಮಹಿಷಿ ತುಂಬ ಶಿಸ್ತಿನಿಂದ ಈ ಅನೌಪಚಾರಿಕ ಚುನಾವಣೆ ನಡೆಸಿದರು.

ಇದು ಸಂಘಕ್ಕೊಂದು ಪಾಠವಾಯಿತು. ಸಂಘ ಸರಿದಾರಿಯಲ್ಲಿ ಮುನ್ನಡೆಯುತ್ತಿದ್ದು ಹದಿನಾರು ವರ್ಷಗಳ ಸಾರ್ಥಕ ಅಸ್ತಿತ್ವ ಪೂರೈಸಿ ಬೆಳೆಯುತ್ತಿರುವ ಈ ಸಂಸ್ಥೆಯ ಹೊಸ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಘದ ಅಂಗ ರಚನೆಯನ್ನು ತಿದ್ದುಪಡಿ ಮಾಡಬೇಕಾಗಿದೆ ಎಂದರಿತ ನಾಗಮಣಿ ಎಸ್ ರಾವ್ ಅವರ ಆದ್ಯತೆ ಅದಕ್ಕೆ ಬದ್ಧವಾಗಿತ್ತು. ಆ ಕೆಲಸವನ್ನು ಕ್ರಮಬದ್ಧವಾಗಿ ಮಾಡಲಾಯಿತು. ತಿದ್ದುಪಡಿಗಳಲ್ಲಿ ಮುಖ್ಯವಾದುವೆಂದರೆ ಸಂಘದ ಅಧ್ಯಕ್ಷರ ಅಧಿಕಾರಾವಧಿಯನ್ನು 2 ವರ್ಷದಿಂದ 3 ವರ್ಷಕ್ಕೆ ಹೆಚ್ಚಿಸಿ, ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಯತಕ್ಕದ್ದು; ಎರಡು ಅವಧಿಗಿಂತ ಹೆಚ್ಚಾಗಿ ಸತತವಾಗಿ ಒಬ್ಬರೇ ಅಧ್ಯಕ್ಷರಾಗುವಂತಿಲ್ಲ ಮುಂತಾದ ಅಂಶಗಳನ್ನು ನಿರ್ದಿಷ್ಟಗೊಳಿಸಲಾಯಿತು.

ಸಂಘದಲ್ಲಿ ವಿವಿಧ ಸ್ತರದ ಲೇಖಕಿಯರಿದ್ದರು. ಕೆಲವರನ್ನು ಬೆಳೆಸಬೇಕಾದ ಅಗತ್ಯವಿದ್ದರೆ, ಕೆಲವು ಹಿರಿಯ ಲೇಖಕಿಯರ ಅನುಭವವನ್ನು ಎಲ್ಲರೂ ಅರಿಯಬೇಕಾಗಿತ್ತು. ಪರಸ್ಪರ ಸಮಾಲೋಚನೆಗೆ ವೇದಿಕೆ ಕಲ್ಪಿಸಬೇಕಿತ್ತು. ಈ ಎಲ್ಲ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿತ್ತು.

ಲೇಖ-ಲೋಕ' ಎಂಬ ಹೆಸರಿನಲ್ಲಿ ಇಂದು ಸಾಹಿತ್ಯ ವಲಯದಲ್ಲಿ ಪ್ರಸಿದ್ಧವಾಗಿರುವ ಪುಸ್ತಕಗಳ ಬಗ್ಗೆ ಯೋಜನೆ. ಮಹಿಳಾ ಸಾಹಿತ್ಯ ಚರಿತ್ರೆ ರಚನೆಯಾಗಬೇಕು; ಮಹಿಳೆಯರ ಸಾಹಿತ್ಯ ಕಾಣಿಕೆ ಸೂಕ್ತವಾಗಿ ದಾಖಲಾಗಬೇಕು ಎಂಬುದು ಸಂಘದ ಬಹುದೊಡ್ಡ ಆಸೆ. ಈ ದೃಷ್ಟಿಯಿಂದ ಹಿಂದಿನ ತಲೆಮಾರಿನ ಕೆಲವು ಪ್ರಮುಖ ಬರಹಗಾರ್ತಿಯರ ಬಗ್ಗೆ ಸಾಕಷ್ಟು ಪರಿಶ್ರಮ ವಹಿಸಿ ಸಂಘ ಕೆಲವು ಪುಸ್ತಕಗಳನ್ನು ಪ್ರಕಟಿಸಿತು.

ಇದರ ಜೊತೆಗೆ,
ಪ್ರಸ್ತುತ ನಮ್ಮೊಡನಿರುವ ಹಿರಿಯ ಪ್ರಬುದ್ಧ ಲೇಖಕಿಯರಿಂದ ಅವರ ಬದುಕು, ಸಾಹಿತ್ಯ ಪ್ರೇರಣೆ, ಎದುರಿಸಿದ ಅಡ್ಡಿ ಆತಂಕಗಳು, ಇತಿಮಿತಿಗಳು ಮುಂತಾದ ಅಂಶಗಳ ಬಗ್ಗೆ ಅವರಿಂದಲೇ ನೇರವಾಗಿ ಕೇಳಿ ದಾಖಲಿಸುವ ಕಾರ್ಯಕ್ರಮವೊಂದನ್ನು ರೂಪಿಸಿ ಕಾರ್ಯಗತ ಮಾಡಲಾಯಿತು. ಮಹಿಳೆಯರು ಯಾವುದೇ ಹಿಂಜರಿಕೆಯಿಲ್ಲದೆ ಮುಕ್ತ ವಾತಾವರಣದಲ್ಲಿ ಮಾತನಾಡಲಿ ಎಂಬ ಉದ್ದೇಶದಿಂದ ಮಹಿಳೆಯರಿಗೆ ಮಾತ್ರ ಅವಕಾಶವಿದ್ದ ಒಳಾವರಣ ಕಾರ್ಯಕ್ರಮವಾಗಿ ಇದನ್ನು ನಡೆಸಲಾಯಿತು. ಅವರ ಮಾತುಗಳನ್ನು ಧ್ವನಿ ಮುದ್ರಿಸಿಕೊಂಡು, ನಂತರ ಅದನ್ನು ಬರಹ ರೂಪಕ್ಕಿಳಿಸಿ ಲೇಖ-ಲೋಕ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಸಾರಸ್ವತ ಲೋಕದಿಂದ ಈ ಕಾರ್ಯಕ್ರಮಗಳು ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಹೆಸರಿನ ಮಾಲೆಯಲ್ಲಿ ಸಂಘ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿ 30ಕ್ಕೂ ಹೆಚ್ಚು ಹಿರಿಯ ಲೇಖಕಿಯರ ಪರಿಚಯ ಮಾಡಿಕೊಟ್ಟಿದೆ.

ಕಲೇಸಂ ಆಶ್ರಯದಲ್ಲಿ ನಾಲ್ಕನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ಮಂಗಳೂರಿನಲ್ಲಿ 1996ರ ನವಂಬರ್ ತಿಂಗಳಲ್ಲಿ ಎಚ್.ಎಸ್. ಪಾರ್ವತಿಯರ ಸಮ್ಮೇಳನಾಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಲೇಖಕಿಯರು ಪಕ್ವತೆಯತ್ತ ಸಾಗಿದ್ದಾರೆ ಎಂದು ಬಹುಪಾಲು ಎಲ್ಲ ಪತ್ರಿಕೆಗಳೂ ಮೆಚ್ಚಿ ಬರೆದವು. ಪ್ರತಿಭಾವಂತ ಮಹಿಳೆಯರ ಸಾಲು ಸಾಲೇ ವೇದಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಭಾಂಗಣದಲ್ಲಿ ವಿಜೃಂಭಿಸಿದುವು.

ಈ ಅವಧಿಯ ಇನ್ನೊಂದು ಬಹುಮುಖ್ಯ ಕಾರ್ಯಕ್ರಮವೆಂದರೆ `ಸುವರ್ಣೋತ್ಸವ ಕಾಳಜಿ'. ಭಾರತ ಸ್ವಾತಂತ್ರ್ಯ ಗಳಿಸಿದ ಸುವರ್ಣ ಮಹೋತ್ಸವದ ವರ್ಷವದು. ಭಾರತದ ಈ ಅಹಿಂಸಾ ಚಳವಳಿಯ ಆ ದಿನಗಳ ಮಹತ್ವವನ್ನು ನಾಡಿನ ಹೊಸ ಪೀಳಿಗೆಯವರಿಗೆ ತಿಳಿಸಿ ಹೇಳಬೇಕು. ಗಾಂಧೀಜಿಯವರಂತಹ ಒಬ್ಬ ಮಹಾತ್ಮನ ಬಗ್ಗೆ ಅಷ್ಟಿಷ್ಟಾದರೂ ತಿಳಿಹೇಳುವ ಕಾರ್ಯ ನಮ್ಮದು ಎಂದು ಭಾವಿಸಿ ರೂಪಿಸಲಾದ ಕಾರ್ಯಕ್ರಮ ಜೊತೆಗೆ ಸಂಘದ ಪ್ರತಿಯೊಬ್ಬ ಸದಸ್ಯೆಯೂ ಭಾಗವಹಿಸಿ, ಕೃತಕೃತ್ಯತೆಯ ಭಾವ ಅನುಭವಿಸಲಿ ಎಂಬ ಹಿರಿಯ ಉದ್ದೇಶ. ಎಲ್ಲ ಸದಸ್ಯೆಯರೂ ತಮ್ಮ ವಾಸಸ್ಥಳದ ಸಮೀಪದಲ್ಲಿಯೇ ಯಾವುದಾದರೂ ಶಾಲೆ ಅಥವಾ ಸಂಸ್ಥೆಯ ಸಹಕಾರದೊಂದಿಗೆ ಅಲ್ಲಿನ ಮಕ್ಕಳಿಗೆ ಸ್ವಾತಂತ್ರ್ಯ ಯೋಧರ ತ್ಯಾಗ, ಧೈರ್ಯ, ಅಹಿಂಸಾತ್ಮಕ ರೀತಿಯಲ್ಲಿ ಬ್ರಿಟಿಷರನ್ನು ಎದುರಿಸಿದ ಧೀಮಂತ ನಡೆ - ಈ ಎಲ್ಲದರ ಬಗ್ಗೆ ತಿಳಿಸಿ ಹೇಳುವುದು, ದೇಶಭಕ್ತಿ ಗೀತೆಗಳನ್ನು ಕಲಿಸುವುದು, ರಸಪ್ರಶ್ನೆ, ಪ್ರಬಂಧ ರಚನೆ, ಆಶು ಭಾಷಣ, ಇಂತಹ ಯಾವುದಾದರೂ ಸ್ಪರ್ಧೆಗಳನ್ನು ಏರ್ಪಡಿಸಿ ಪುಟ್ಟ ಬಹುಮಾನ ನೀಡುವುದು - ಒಟ್ಟಿನಲ್ಲಿ ಭಾರತದ ಸ್ವಾತಂತ್ರ್ಯ ಗಳಿಕೆಗೆ ಸಂಬಂಧಿಸಿದಂತೆ ಕಿರಿಯರಿಗೆ ಕಿಂಚಿತ್ತಾದರೂ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಜೊತೆಗೆ ಸಂಘದ ಪ್ರತಿಯೊಬ್ಬರಿಗೂ ತಾವೇ ಮುಂದಾಗಿ ನಿಂತು ಒಂದು ಕಾರ್ಯಕ್ರಮ ನಡೆಸಲು ಅವಕಾಶ. ಅಂದಿನ ಶಿಕ್ಷಣ ಸಚಿವ, ಗಾಂಧೀವಾದಿ ಶ್ರೀ ಎಚ್.ಜಿ. ಗೋವಿಂದೇಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದಸ್ಯೆಯರು ತುಂಬ ಉತ್ಸಾಹದಿಂದ ಭಾಗವಹಿಸಿ, ಹಲವಾರು ರೀತಿಯಲ್ಲಿ ಕಾರ್ಯಕ್ರಮ ನಡೆಸಿದರು. ಈ ವರ್ಷವಿಡೀ ಕಲೇಸಂ ಯಾವುದೇ ಕಾರ್ಯಕ್ರಮ ಮಾಡಿದರೂ, ಸಮೀಪದಲ್ಲಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನೂ ಕರೆದು ಅಥವಾ ಅವರಿದ್ದಲ್ಲಿಗೆ ತೆರಳಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕ್ರಾಂತಿ ಸ್ಮರಣೆ - ಗೌರವಾರ್ಪಣೆ ಎಂದು 24.8.97 ರಂದು ಆರಂಭವಾದ ಕಾರ್ಯಕ್ರಮದಲ್ಲಿ ಗಾಂಧೀವಾದಿ ಜಿ. ನಾರಾಯಣ, ಹಿರಿಯ ಲೇಖಕಿ ಮಲ್ಲಿಕಾ ಕಡಿದಾಳ್ ಮಂಜಪ್ಪ ಅವರಿಗೆ ಗೌರವಾರ್ಪಣೆ, ಹಂಪೆ ಉತ್ಸವದ ಅಂಗವಾಗಿ, ಅಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಚಳುವಳಿ ವಿಚಾರಗೋಷ್ಠಿಯಲ್ಲಿ ಶ್ರೀಮತಿ ಕುಸುಮಾಪತಿ ಶಂಕರರಾವ್ ದೇಶಪಾಂಡೆ ಮತ್ತು ಶಂಕರರಾವ್ ದೇಶಪಾಂಡೆ ಅವರಿಗೆ ಚಿತ್ರದುರ್ಗದಲ್ಲಿ 23.3.98ರಂದು 90ರ ವಯೋವೃದ್ಧೆ ಸ್ವಾತಂತ್ರ್ಯ ಹೋರಾಟಗಾರ್ತಿ ಮಂಗಮ್ಮ ರಾಮರೆಡ್ಡಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಸಂಘದ ಮೊದಲ ಅನುಪಮಾ ಪ್ರಶಸ್ತಿ ಪಡೆದಿದ್ದ ಎಚ್.ವಿ. ಸಾವಿತ್ರಮ್ಮನವರ ಪತಿ, ಎಚ್.ವಿ. ನಾರಾಯಣರಾವ್ ಅವರು 1996 ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದು ಈಗಾಗಲೇ ಆರಂಭವಾಗಿದ್ದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿಗೆ ಮತ್ತೆ 20 ಸಾವಿರ ರೂಪಾಯಿಗಳ ದೇಣಿಗೆ ನೀಡಿದರು. ಶಾಂತಾದೇವಿ ಮಾಳವಾಡ ಅವರು ಉಪನ್ಯಾಸ ದತ್ತಿ ನಿಧಿ ಆರಂಭಿಸಲು ಐದು ಸಾವಿರ ರೂಪಾಯಿ ದೇಣಿಗೆ ನೀಡಿದರು. ಇನ್ನೂ ಕೆಲವು ದತ್ತಿ ನಿಧಿಗಳೂ ಈ ಕಾಲದಲ್ಲಿ ಆರಂಭವಾದವು.

ಉದಯೋನ್ಮುಖ ಕವಯತ್ರಿಯರಿಗೆ ಬಹುಮಾನ ನೀಡಲು ಗುಡಿಬಂಡೆ ಪೂರ್ಣಿಮಾ ಅವರು ಪ್ರತಿವರ್ಷ ಒಂದು ಸಾವಿರ ರೂಪಾಯಿಗಳ ಕೊಡುಗೆ ಪ್ರಕಟಿಸಿದರು (ಈಗ ಅದನ್ನು ಅವರು ಹೆಚ್ಚಿಸಿದ್ದಾರೆ).

ಸಂಘದ ಸದಸ್ಯೆ ರತ್ನ ರಂಗನಾಥ್ ಅವರು ತಮ್ಮ ತಂದೆ ಕರ್ನಾಟಕದ ಸುಪ್ರಸಿದ್ಧ ಗಮಕ ವಿದ್ವಾಂಸರಾದ ದಿವಂಗತ ಕೃಷ್ಣಗಿರಿ ಕೃಷ್ಣರಾಯರ ಹೆಸರಿನಲ್ಲಿ ಗಮಕ ಕಾರ್ಯಕ್ರಮಕ್ಕಾಗಿ ಐದು ಸಾವಿರ ರೂಪಾಯಿಗಳ ದತ್ತಿ ನಿಧಿಯನ್ನೂ, ಸಂಘದ ಹಿರಿಯ ಸದಸ್ಯೆ ಶ್ರೀಮತಿ ಲಕ್ಷ್ಮೀದೇವಿಯವರು ಪ್ರತಿ ವರ್ಷ ಉಪನ್ಯಾಸ ಕಾರ್ಯಕ್ರಮವೊಂದನ್ನು ನಡೆಸಲು 3 ಸಾವಿರ ರೂಪಾಯಿಗಳ ದತ್ತಿ ನಿಧಿಯನ್ನು ನೀಡಿದರು.

ಈ ಎರಡೂ ದತ್ತಿ ನಿಧಿಗಳ ಸಂಯುಕ್ತ ಕಾರ್ಯಕ್ರಮ ಮೊಟ್ಟ ಮೊದಲ ಬಾರಿಗೆ "ಕಾವ್ಯ ವಿಹಾರ - ಗಮಕ ಸುಧಾ" ಎಂಬ ಹೆಸರಿನಡಿ 1999ರ ಮೇ 2 ರಂದು ನಡೆಯಿತು.

ಸಂಘಕ್ಕೆ ಸ್ವಂತ ಕಟ್ಟಡ
ಸಾಧನೆಯೇ ಸರಿ . . .
ಸಂಘಕ್ಕಾಗಿ ಒಂದು ಸ್ವಂತ ಕಟ್ಟಡ ಪಡೆದುಕೊಂಡದ್ದು ಈ ಅವಧಿಯ, ಅಷ್ಟೇಕೆ, ಕರ್ನಾಟಕ ಲೇಖಕಿಯರ ಸಂಘದ ಇತಿಹಾಸದಲ್ಲೇ ಒಂದು ಬಹುಮುಖ್ಯವಾದ ಸಾಧನೆ ಎನ್ನಬಹುದು. ಸಂಘಕ್ಕಾಗಿ ಒಂದು ಸ್ವಂತ ಕಟ್ಟಡ ಹೊಂದಬೇಕೆಂಬ ಆಶಯ ಬಹುಕಾಲದಿಂದ ನಮ್ಮೆಲ್ಲರಲ್ಲೂ ಇದ್ದರೂ ಅದು ಕಾರ್ಯಗತವಾಗಿರಲಿಲ್ಲ. ಈ ಕನಸನ್ನು ನನಸಾಗಿಸಲು ಶತ ಪ್ರಯತ್ನಪಟ್ಟರೂ ಏನೂ ಪ್ರಯೋಜನವಾಗಲಿಲ್ಲ. ಆದರೂ ಪ್ರಯತ್ನ ಬಿಡಲಿಲ್ಲ. ಖಾಸಗಿ ನಿವೇಶನ ಹಾಗೂ ಕಟ್ಟಡವೇನಾದರೂ ಸಂಘದ ಇತಿಮಿತಿಯಲ್ಲಿ ದೊರಕಬಹುದೇ ಎಂಬ ಪ್ರಯತ್ನ ಆರಂಭಿಸಿ, ಮುಂಗಡ ನೀಡಲಾದರೂ ಸ್ವಲ್ಪ ಹಣವಿರಬೇಕೆಂದು ಕಟ್ಟಡ ನಿಧಿಯೊಂದನ್ನು ಆರಂಭಿಸಿದೆವು. ಕೊಡುಗೆ ಸಂಘದ ಸದಸ್ಯರಿಂದಲೇ ಆರಂಭವಾಗಲಿ ಎಂಬ ಇಚ್ಛೆಯಿಂದ ಸದಸ್ಯೆಯರೆಲ್ಲರೂ ಒಂದು ಸಾವಿರ ರೂಪಾಯಿಗಳನ್ನು ಈ ನಿಧಿಗೆ ನೀಡಬೇಕೆಂದು ಮನವಿ ಮಾಡಲಾಯ್ತು. ಸಂಘದ ಸದಸ್ಯೆಯರು ಉದಾರ ಮನಸ್ಸಿನಿಂದ ನೆರವಾದರು. ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಓಡಾಡಿ ಸಂಘ ಸಂಸ್ಥೆಗಳು, ದಾನಿಗಳು ಮತ್ತು ಸರ್ಕಾರದಿಂದ ಒಂದಿಷ್ಟು ಹಣ ಸಂಗ್ರಹಿಸಿದರು.

ಅಂತೂ ಕೊನೆಗೆ ಚಾಮರಾಜಪೇಟೆಯ 2ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆಯ ಕೆನರಾ ಬ್ಯಾಂಕಿನ ಕಟ್ಟಡದ ಎರಡನೇ ಮಹಡಿಯ ಮೇಲಿರುವ ಇಂದಿನ ಸಂಘದ ಕಛೇರಿ ಕಟ್ಟಡವನ್ನು ಖರೀದಿಸುವುದು ಸಾಧ್ಯವಾಯಿತು. ಉದ್ಘಾಟನಾ ಸಮಾರಂಭ 8.8.1999ರಂದು ಸಂಘದ ಸದಸ್ಯೆಯರ ಸಡಗರ, ಸಂಭ್ರಮ, ಸಂತೋಷದ ಜೊತೆಗೆ ನಾಡಿನ ಹಿರಿಯರೆಲ್ಲ ಬಂದು ಶುಭ ಹಾರೈಸಿದರು. ಸಂಘದ ಈ ಕಛೇರಿ ತುಂಬ ಉಪಯುಕ್ತವಾಗಿದ್ದು, ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ಮುಂದೆಯೂ ಸಂಘ ಯಶೋಪಥದಲ್ಲಿ ಸಾಗಿ, ಲವಲವಿಕೆಯಿಂದ ಕಾರ್ಯನಿರ್ವಹಿಸಲು ದಕ್ಷ, ಪ್ರತಿಭಾವಂತ ಲೇಖಕಿಯರು ಕರ್ನಾಟಕ ಲೇಖಕಿಯರ ಸಂಘದತ್ತ ಬರುತ್ತಿದ್ದಾರೆ.

 

ಶಶಿಕಲಾ ವೀರಯ್ಯಸ್ವಾಮಿ ( 1999-2000)

22-8-99
ಅನೇಕ ವೈಯಕ್ತಿಕ ಕಾರಣಗಳು ಸಂಘದ ಇವರ ಕಾರ್ಯಗಳಿಗೆ ಅಡೆತಡೆಯಾದವು ಎಂದು ಒಪ್ಪಿಕೊಂಡರೂ ಅತಿ ಕಡಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮಗಳ ಆಯೋಜನೆ, ಸಂಗದೊಡನೆ ಒಡನಾಟ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯೆಯರನ್ನು ಸಂಘದ ವ್ಯಾಪ್ತಿಗೆ ಸೇರಿಸಲು ಯತ್ನಿಸಿದ್ದನ್ನು ಮರೆಯಲಾಗದು.

ಪುಸ್ತಕಗಳ ಬಿಡುಗಡೆ, ಪುರುಷರ ಕೃತಿ ಬಿಡುಗಡೆ ಮಾಡುವಷ್ಟು ಸಂಘ ವ್ಯಾಪ್ತಿ ಹೆಚ್ಚಿಸಿಕೊಳ್ಳಬೇಕೆನ್ನುವ ಅರ್ಥದಲ್ಲಿ ಕಾ.ತ.ಚಿಕ್ಕಣ್ಣನವರ `ದಂಡೆ' ಕಾದಂಬರಿಗೆ ಸಂಘದ ಸಹಯೋಗ ವಹಿಸಿ ಕೆಲವು ಆಕ್ಷೇಪಣೆಗಳನ್ನು ಎದುರಿಸಿದ್ದು ಈ ಅವಧಿಯಲ್ಲಿಯೇ. ಆಸ್ಟ್ರೇಲಿಯಾದ ಕನ್ನಡಕೂಟ ಪತ್ರಿಕೆಯಲ್ಲಿ ಪ್ರಕಟವಾದ ಕಲೇಸಂ ಪದಾಧಿಕಾರಿಗಳ ಮಾಹಿತಿ ಇವರ ಸಂಪರ್ಕ, ಬಹುವ್ಯಾಪ್ತಿಗೆ ಒಂದು ಚಿಕ್ಕ ಉದಾಹರಣೆ.

ವೃತ್ತಿ ಸಂಬಂಧ ಬಡ್ತಿ ದೊರೆತು ಪರ ಊರಿಗೆ ಹೋಗಬೇಕಾದ ಅನಿವಾರ್ಯತೆಯಲ್ಲಿ ಸಂಘದ ಅಧ್ಯಕ್ಷಸ್ಥಾನವನ್ನು ತೆರವು ಮಾಡಿದರು.

 

ಕೆ. ಉಷಾ.ಪಿ.ರೈ

2000-2005 ( ಎರಡು ಅವಧಿಗಳು)

ಶಶಿಕಲಾ ವೀರಯ್ಯಸ್ವಾಮಿಯವರು ಕೆಲವು ಕಾರಣಗಳಿಂದ ಸಂಘದ ಅಧ್ಯಕ್ಷ ಸ್ಥಾನವನ್ನು ಅರ್ಧದಲ್ಲಿಯೇ ತೆರವು ಮಾಡಿದ ನಂತರ ಸಂಘದ ಬೈಲಾದಲ್ಲಿರುವ ಅಧಿನಿಯಮದ ಪ್ರಕಾರ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ಉಪಾಧ್ಯಕ್ಷೆಯಾಗಿದ್ದ ಕೆ.ಉಷಾ ಪಿ.ರೈ ಅವರ ಹೆಗಲೇರಿತು. ಹಲವಾರು ವರ್ಷ ಸಂಘದ ಒಡನಾಟದಲ್ಲಿ ಪ್ರೀತಿಯಿಂದ ಕಾರ್ಯ ನಿರ್ವಹಿಸುತ್ತಿದ್ದ ಉಷಾ ಅವರಿಗೆ ಇದು ಹೆಚ್ಚಿನ ಜವಾಬ್ದಾರಿ ಎನ್ನಿಸಲಿಲ್ಲ! ಕಾರ್ಯವೈಖರಿಗೆ ಅನಿರೀಕ್ಷಿತವಾಗಿ ಒಲಿದ, ಸಂದ ಗೌರವ ಇದಾಯಿತು.

ಆ ಹಿಂದಿನ ಕೆಲವು ತಿಂಗಳುಗಳಿಂದ ಕೊಂಚ ನಿಷ್ಕ್ರಿಯವಾದಂತೆನ್ನಿಸಿದ ಸಂಘದ ಕಾರ್ಯಗಳಿಗೆ, ಯೋಜನೆಗಳಿಗೆ ಮತ್ತೆ ಚಾಲನೆ ನೀಡುವ ಕೆಲಸ ಇವರದ್ದಾಯಿತು. ಸಾಲದೆಂಬಂತೆ ಬರುತ್ತಿದ್ದ ವಾರ್ಷಿಕ ಸಹಾಯಧನ 50%ರಷ್ಟು ಇಳಿದದ್ದು ಒಮ್ಮೆಲೇ ಆಘಾತವೆನ್ನಿಸಿದರೂ ಅದರ ಬಿಕ್ಕಟ್ಟಿನಿಂದ ಹೊರಬರುವುದು ಅನಿವಾರ್ಯವಾಗಿತ್ತು. ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಂಡು ಹದಕ್ಕೆ ತಂದು, ಹಿಂದಿನ ಅಧ್ಯಕ್ಷರಿಗೆ ಸಲ್ಲಬೇಕಾಗಿದ್ದ ರೂ 28000 ಪಾವತಿ ಮಾಡಿದ್ದು ಒಂದು ಸಾಹಸವೇ ಆಗಿತ್ತು. ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ತುಂಬು ಸಹಕಾರ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನಡೆಸಲು ಹುಮ್ಮಸ್ಸು ನೀಡಿತು.

ಈ ಅವಧಿಯಲ್ಲಿ ಕಚೇರಿಯ ಗ್ರಂಥಭಂಡಾರಕ್ಕೆ ಒಂದು ರೂಪಕೊಡುವ ಪ್ರಯತ್ನಗಳು ನಡೆದವು. ಕೊಡುಗೆಯಾಗಿ ಕಪಾಟುಗಳು ದೊರೆತವು.

ಕನ್ನಡ ಪುಸ್ತಕಗಳು ಮತ್ತು ಮಹಿಳೆಯರು ವಿಚಾರ ಸಂಕಿರಣ, ಕನ್ನಡ ಪುಸ್ತಕ ಸಪ್ತಾಹ-ಮನೆಮನೆಗೆ ಪುಸ್ತಕಯಾತ್ರೆ, ಯುವಜನತೆಯತ್ತ ನಾವು, ಮಹಿಳೆ-ಸಾಹಿತ್ಯ-ಸಾಮಾಜಿಕ ಚಿಂತನೆ, `ನಮ್ಮ ನಮ್ಮಲ್ಲಿ' ಈ ಅವಧಿಯ ವಿಶಿಷ್ಟ ಕಾರ್ಯಕ್ರಮಗಳು ಎನ್ನಬಹುದು. ಅಲ್ಲದೆ ನಾಗಮಣಿ ಎಸ್.ರಾವ್ ಅವರ ಕಾಲದಲ್ಲಿ ಪ್ರಾರಂಭಿಸಿದ ಮಹಿಳೆ-ಸಾಹಿತ್ಯ-ಪರಿಸರ ಯೋಜನೆ ಮುಂದುವರಿಕೆಯಾಗಿ ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಲಾಯಿತು. ಲೇಖ-ಲೋಕ 3 ಮತ್ತು 4 ಕ್ಕೆ ಸಮೃದ್ಧ ಸಾಹಿತ್ಯ ಒದಗಿತು.

2002 ಮತ್ತು 2003ರ ಅನುಪಮಾ ಪ್ರಶಸ್ತಿ ಪ್ರದಾನಮಾಡಲಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಿದ `ಭಾಷೆ ಮೀರಿದ ಬಾಂಧವ್ಯ' ಅತಿ ಹೆಚ್ಚು ಶ್ಲಾಘನೆ ಪಡೆದದ್ದಲ್ಲದೆ ಸಂಘದ ಚರಿತ್ರೆಯಲ್ಲೊಂದು ನಿಶ್ಚಿತ ಸ್ಥಾನ ಪಡೆದ ಕಾರ್ಯಕ್ರಮ.

ಎರಡನೇ ಅವಧಿಗೆ (2002ರಿಂದ) ಆಯ್ಕೆಯಾದ ಉಷಾ ಪಿ.ರೈ ರವರು ಮತ್ತಷ್ಟು ಉತ್ಸಾಹದಿಂದ ತಮ್ಮನ್ನು ತಾವು ಸಂಘದಲ್ಲಿ ತೊಡಗಿಸಿಕೊಂಡದ್ದಲ್ಲದೆ, ಉದಯೋನ್ಮುಖ ಲೇಖಕಿಯರ ಕಮ್ಮಟ ನಡೆಸಿದರು. 5ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ಈ ಅವಧಿಯಲ್ಲೇ ಆದದ್ದು (2003ರಜುಲೈ 12,13).

 

ಡಾ.ಸಂಧ್ಯಾರೆಡ್ಡಿ

2005-20011ರ ವರೆಗೆ (ಎರಡು ಅವಧಿಗಳು)

1979ರಲ್ಲಿ ಸ್ಥಾಪನೆಯಾದ ಕರ್ನಾಟಕ ಲೇಖಕಿಯರ ಸಂಘ ಮೂವತ್ನಾಲ್ಕು ವಸಂತಗಳನ್ನು ಪೂರೈಸುತ್ತಿರುವ ಸಂದರ್ಭ. ಮಹಿಳಾ ಸಾಹಿತ್ಯವನ್ನು ಸರಿಯಾದ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು, ಲೇಖಕಿಯರ ಕೊಡುಗೆಗೆ ಸೂಕ್ತ ಮನ್ನಣೆ ಸಿಗಬೇಕು, ರಾಜ್ಯದ ಎಲ್ಲ ಭಾಗಗಳ ಲೇಖಕಿಯರಿಗೆ ಇದು ಸಮಾನ ವೇದಿಕೆಯಾಗಬೇಕು ಮೊದಲಾದ ಆಶಯಗಳೊಂದಿಗೆ ಸ್ಥಾಪನೆಯಾದ ಈ ಸಂಘದ ಏಳನೇ ಅಧ್ಯಕ್ಷರಾಗಿ ಡಾ. ಸಂಧ್ಯಾರೆಡ್ಡಿ ಯವರು 2005ರ ಜುಲೈ 31ರಂದು ಚುನಾಯಿತರಾಗಿ ಒಟ್ಟು ಎರಡು ಅವಧಿಗಳವರೆಗೆ (2005ರ ಜುಲೈ 30ರಿಂದ 2011ರ ಅಕ್ಟೋಬರ್ 16ರ ವರೆಗೆ) ಕಾರ್ಯನಿರ್ವಹಿಸಿದರು. ಈ ಹಿಂದಿನ ಅಧ್ಯಕ್ಷರಾಗಿದ್ದ ಉಷಾ.ಪಿ.ರೈ ಯವರ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದರಿಂದ ಇಲ್ಲಿನ ಕೆಲಸದ ಸ್ವರೂಪ, ಯೋಜನೆಗಳು ಹಾಗೂ ಅಶಯಗಳ ಸಂಪೂರ್ಣ ಪರಿಚಯವಿದ್ದುದು ಇವರ ಕೆಲಸದ ನಿರ್ವಹಣೆಗೆ ಸಾಕಷ್ಟು ಸಹಾಯಕವಾಯಿತು.

ಸಂಘವು ನಡೆಸಿದ ಕೆಲವು ವಿಶಿಷ್ಟ ಕಮ್ಮಟಗಳು ಸಂಘವು ಸಣ್ಣಕಥೆ, ಕಾವ್ಯ ಮೊದಲಾದ ಸಾಮಾನ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಕಮ್ಮಟಗಳನ್ನು ನಡೆಸುವುದರ ಜೊತೆಗೆ ಸಾಹಿತ್ಯ ಹಾಗೂ ಸಮಾಜದ ಸಮಕಾಲೀನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಿದಂಥ ಕಮ್ಮಟಗಳು ಉಲ್ಲೇಖನೀಯ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಹವ್ಯಾಸಿ ಪತ್ರಿಕೋದ್ಯಮ ಶಿಬಿರ (ಡಿಸೆಂಬರ್ 2006) ಗಮನಾರ್ಹ. ರಾಜ್ಯದ ವಿವಿಧೆಡೆಗಳಿಂದ ಸುಮಾರು ಐವತ್ತು ಲೇಖಕಿಯರು ಭಾಗವಹಿಸಿದ ಈ ಶಿಬಿರದಲ್ಲಿ ಇಂದು ಮಹತ್ವ ಪಡೆಯುತ್ತಿರುವ ಪತ್ರಿಕಾ ಲೇಖನಗಳು, ಅಂಕಣಗಳು ಮುಂತಾದ ಬರಹಗಳತ್ತ ಲೇಖಕಿಯರು ತೊಡಗಿಕೊಳ್ಳಬೇಕಾದ ಅವಶ್ಯಕತೆಯನ್ನು ಹಾಗೂ ಈ ಬರವಣಿಗೆಯ ರೀತಿ ನೀತಿಗಳನ್ನು ಮನದಟ್ಟು ಮಾಡಿಕೊಡಲಾಯಿತು. ನಾಡಿನ ಪ್ರಖ್ಯಾತ ಪತ್ರಿಕಾ ಪರಿಣಿತರು ಇಲ್ಲಿನ ಉಪನ್ಯಾಸಕರಾಗಿದ್ದರು. ಇದೇ ರೀತಿಯ ಎರಡನೇ ಶಿಬಿರವನ್ನು ಗ್ರಾಮೀಣ ಯುವ ಬರಹಗಾರ್ತಿಯರಿಗಾಗಿ ತುಮಕೂರಿನಲ್ಲಿ ನಡೆಸಲಾಯಿತು(2009). ಈ ಶಿಬಿರದಲ್ಲಿ ಭಾಗವಹಿಸಿದ ಪತ್ರಿಕೋದ್ಯಮ ವಿದ್ಯಾರ್ಥಿನಿಯರು, ತರಗತಿಗಳಲ್ಲಿ ಸಿಗಲು ಸಾಧ್ಯವೇ ಇಲ್ಲದಂಥ ಮಾಹಿತಿ ಇಲ್ಲಿ ನಮಗೆ ಲಭ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ದೃಶ್ಯ ಮಾಧ್ಯಮಗಳ ಪ್ರಾಬಲ್ಯದಿಂದ ಓದುಗರೆಲ್ಲ ನೋಡುಗರಾಗಿರುವ ಇಂದಿನ ಸಂದರ್ಭದಲ್ಲಿ ಲೇಖಕಿಯರು ನಾಟಕ ಹಾಗೂ ರೂಪಕಗಳ ರಚನೆಯತ್ತ ತಮ್ಮ ಲೇಖನಿಯನ್ನು ಹೆಚ್ಚು ತೊಡಗಿಸಿಕೊಳ್ಳವುದು ಆಗತ್ಯ ಎಂಬ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯಲ್ಲಿ ರಂಗಾಯಣದ ಪರಿಣತರ ನಿರ್ದೇಶನದಲ್ಲಿ ಮೂರುದಿನಗಳ ಕಾಲ (ಫೆಬ್ರವರಿ 2008) ನಾಟಕ ಹಾಗೂ ರೂಪಕ ಸಾಹಿತ್ಯ ರಚನಾ ಶಿಬಿರವನ್ನು ಸಂಘವು ನಡೆಸಿತು. ಸಾಣೆಹಳ್ಳಿಯ ಶಿವಕುಮಾರ ಕಲಾ ಸಂಘದ ರಂಗ ಪ್ರದರ್ಶನಗಳನ್ನು ಜೊತೆಜೊತೆಗೇ ನೋಡುವ ಅಪೂರ್ವ ಅವಕಾಶ ಇಲ್ಲಿ ಲಭ್ಯವಾಯಿತು. ಸಮಾಜಕ್ಕೆ ತಲುಪಿಸಬೇಕಾದ ಸಂದೇಶಗಳನ್ನು ತಲುಪಿಸವುದಕ್ಕೆ ನಾಟಕ ರೂಪವನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಲೇಖಕಿಯರ ನಾಟಕಗಳು ಮತ್ತು ಪ್ರಯೋಗ ಶಿಬಿರವನ್ನು ನಡೆಸಲಾಯಿತು(ಜುಲೈ 2011). ಮೊದಲೇ ಬರೆದುಕೊಂಡು ಬಂದ ನಾಟಕಗಳ ಪರಿಷ್ಕರಣೆ ಮಾಡಿ ಪ್ರಕಟಿಸುವ ಕ್ರಮವನ್ನು ಇಲ್ಲಿ ಅನುಸರಿಸಲಾಯಿತು.

ಬದಲಾದ ಸಾಮಾಜಿಕ ಸಾಂಸ್ಕೃತಿಕ ಸಂದರ್ಭದಲ್ಲಿ ಅದರಲ್ಲಿಯೂ ಆರ್ಥಿಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಲೇಖಕಿಯರಿಂದ ಪ್ರವಾಸ ಸಾಹಿತ್ಯ ಕೃತಿಗಳು ಹೆಚ್ಚು ಹೆಚ್ಚಾಗಿ ಬರುತ್ತಿದ್ದು ಈ ಪ್ರಕಾರದ ಬಗ್ಗೆ ಸೂಕ್ತ ಸಮೀಕ್ಷೆ, ವಿಮರ್ಶೆ ನಡೆಸುವ ಉದ್ದೇಶದಿಂದ ಬಿಳಿಗಿರಿ ರಂಗನ ಬೆಟ್ಟದಂಥ ಅಪೂರ್ವ ತಾಣದಲ್ಲಿ ಲೇಖಕಿಯರ ಪ್ರವಾಸ ಸಾಹಿತ್ಯ ಶಿಬಿರವನ್ನು ಏರ್ಪಡಿಸಲಾಯಿತು (ಜನವರಿ 2008). ಪ್ರವಾಸ ಸಾಹಿತ್ಯವು ವಿದೇಶ ಪ್ರವಾಸಗಳಿಗಷ್ಟೇ ಸಂಬಂಧಿಸಿರಬೇಕಿಲ್ಲ ಎಂಬ ಹೊಸ ಅರಿವು ಮೂಡಿಸುವಲ್ಲಿ ಇದು ಯಶ್ವಸಿಯಾಯಿತು ಇಲ್ಲಿನ ಸೋಲಿಗ ಬುಡಕಟ್ಟು ಜನರ ಬದುಕಿನ ನೇರ ಪರಿಚಯವೂ ಲೇಖಕಿಯರಿಗೆ ಲಭ್ಯವಾಯಿತು.. ಸಾಹಿತ್ಯ ಹಾಗೂ ಸಂಸ್ಕೃತಿಯ ಎಲ್ಲ ಮಗ್ಗಲುಗಳ ಪರಿಚಯವೂ ಲೇಖಕಿಯರಿಗೆ ಇರಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಮತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಸಲಾದ ಇನ್ನೊಂದು ಕಮ್ಮಟ ರಂಗವಲ್ಲಿ ಕಲೆಯ ದಾಖಲಾತಿ ಕಮ್ಮಟ (2006). ಜಾನಪದೀಯ ಕಲೆಗಳ ಮಹತ್ವ, ಅವುಗಳ ಪರಂಪರೆ ಹಾಗೂ ದಾಖಲಾತಿಯ ರೀತಿನೀತಿಗಳನ್ನು ಪರಿಚಯಿಸಿದ ಈ ಕಮ್ಮಟದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಇದೇ ರೀತಿ ಶ್ರವಣ ಬೆಳಗೊಳದಲ್ಲಿ ನಡೆಸಿದ ಪ್ರಾಕೃತ ಭಾಷಾ ಪರಿಚಯದ ಉಪನ್ಯಾಸ ಮಾಲಿಕೆ (2009) ಉಲ್ಲೇಖನೀಯ. ಪ್ರಾಕೃತ ಭಾಷೆಯಲ್ಲಿ ಅನೇಕ ಮಹಿಳೆಯರು ಸಾಹಿತ್ಯ ರಚನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇದು ಹೊಸ ಅರಿವನ್ನು ನೀಡಿದ ಕಾರ್ಯಕ್ರಮವಾಗಿತ್ತು.

ಪ್ರಕಟಣೆಗಳು:

ಮಹಿಳಾ ಸಾಹಿತ್ಯ ಹಾಗೂ ಮಹಿಳಾ ವಿಚಾರಗಳಿಗೆ ಸಂಬಂಧಿಸಿದ ಕೃತಿಗಳ ಪ್ರಕಟಣೆಯು ಸಂಘದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದ್ದು ಪ್ರಸ್ತುತ ಅವಲೋಕನದ ಅವಧಿಯಲ್ಲಿ ಪ್ರಮುಖವಾದ ಐದು ಕೃತಿಗಳು ಪ್ರಕಟವಾಗಿವೆ. ಮೂವತ್ತು ಮಂದಿ ಲೇಖಕಿಯರ ಆತ್ಮಕಥನಗಳನ್ನೂಳಗೊಂಡ 'ನಮ್ಮ ಬದುಕಿನ ಪುಟಗಳು' (2007ರಲ್ಲಿ ಮಂಡ್ಯದಲ್ಲಿ ನಡೆದ ಲೇಖಕಿಯರ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಯಾಯಿತು) ಹಾಗೂ ಇಪ್ಪತ್ತೊಂಬತ್ತು ಮಂದಿ ಲೇಖಕಿಯರ ಆತ್ಮಕಥನಗಳನ್ನೊಳಗೊಂಡ ನಮ್ಮ ಬದುಕು ನಮ್ಮ ಬರಹ (2011 ರಲ್ಲಿ ಬಿಡುಗಡೆಯಾಯಿತು) ಇವು, ಇಡೀ ಸಾಹಿತ್ಯಲೋಕದ ಗಮನ ಸೆಳೆದ ಲೇಖಕಿಯರ ಆತ್ಮಕಥನಗಳ ದಾಖಲಾತಿಯನ್ನೊಳಗೊಂಡ ಲೇಖ ಲೋಕದ ನಾಲ್ಕು ಸಂಪುಟಗಳೂ ಹಾಗೂ ಎಪ್ಪತ್ತರ ವಯಸು ಇಪ್ಪತ್ತರ ಮನಸು ಕೃತಿಗಳ ಸಾಲಿಗೆ ಸೇರುತ್ತವೆ. ಇಲ್ಲಿನ ಲೇಖಕಿಯರ ಸಾಧನೆಗಳು, ಜೀವನೋತ್ಸಾಹ, ಸಾಮಾಜಿಕ ಕಳಕಳಿ, ದಿಟ್ಟ ನಿಲುವು ಗಮನ ಸೆಳೆಯುತ್ತವೆ. ಬದುಕಿನ ಆಳ ಅಂತರಾಳಗಳನ್ನು, ಮನುಷ್ಯ ಸ್ವಭಾವದ ವಿಭಿನ್ನ ಮುಖಗಳನ್ನು ಇಲ್ಲಿನ ಬರಹಗಳು ಪರಿಚಯಿಸುತ್ತವೆ. ಪತ್ರಿಕೆಯ ಟಾಪ್ ಟೆನ್ನಲ್ಲಿ ಈ ಕೃತಿಯು ಸ್ಥಾನ ಪಡೆದಿರುವುದು ಉಲ್ಲೇಖನೀಯ. ಈ ಅವಧಿಯಲ್ಲಿ ಪ್ರಕಟವಾದ ಇನ್ನೊಂದು ಮಹತ್ವದ ಕೃತಿ ದೇವರು ಧರ್ಮದ ಚಿಂತೆ (2008).ಇದು ಜಯಮಾಲಾರವರ ಅಯ್ಯಪ್ಪ ಸ್ವಾಮಿ ಪಾದಸ್ಪರ್ಶ ವಿವಾದದ ಹಿನ್ನೆಲೆಯಲ್ಲಿ ದೇವರು, ಧರ್ಮ, ಧಾರ್ಮಿಕ ಸ್ವಾತಂತ್ರ್ಯ, ಸ್ತ್ರೀ ಸಮಾನತೆ ಮೊದಲಾದ ವಿಚಾರಗಳ ಬಗ್ಗೆ ಲೇಖಕಿಯರ ಹಾಗೂ ನಾಡಿನ ಪ್ರಜ್ಞಾವಂತ ಮಹಿಳೆಯರ ವೈಚಾರಿಕ ಲೇಖನಗಳನ್ನು ಒಳಗೊಂಡಿದೆ.

ಗ್ರಾಮಾಂತರ ಮಹಿಳೆಯರಿಗೆ ಹಾಗೂ ಪಂಚಾಯತಿ ಆಡಳಿತ ಮತ್ತು ಸ್ತ್ರೀ ಶಕ್ತಿ ಸಂಘಗಳವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಹಿತ್ಯ ಸಂಸ್ಕೃತಿ, ಸಮಾಜ, ಪರಿಸರ, ಕಾನೂನು ಮೊದಲಾದ ವಿಷಯಗಳ ಕೆಲವು ಮೂಲ ವಿಷಯಗಳನ್ನು ಪರಿಚಯಿಸುವ ದೃಷ್ಟಿಯಿಂದ ಪ್ರಕಟಿಸಲಾದ ಕೃತಿ ಜಾಗೃತಿ (2010). ಕೈಪಿಡಿಯ ರೀತಿಯಲ್ಲಿರುವ ಇದರಲ್ಲಿ ರಾಷ್ಟ್ರಗೀತೆ, ನಾಡಗೀತೆ, ಆಯ್ದವಚನಗಳು, ಕೀರ್ತನೆಗಳು, ಜಾನಪದ ತ್ರಿಪದಿಗಳು ಮೊದಲಾದವನ್ನು ಅಳವಡಿಸಲಾಗಿದೆ.

ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿ ನಿಧಿ ಬಹುಮಾನ ಪಡೆದ ಇಪ್ಪತ್ತೈದು ಉದಯೋನ್ಮುಖ ಕವಯತ್ರಿಯರ ಬಹುಮಾನಿತ ಕವಿತೆಗಳನ್ನೊಳಗೊಂಡ ಕೃತಿ 'ಗರಿಕೆ'(2008) ಶ್ರೀಮತಿ ಎನ್. ಸರಸ್ವತಿ ರಾಜು ಕವಿತಾ ವಿಕಾಸ ಮಾಲೆಯ ಎರಡನೇ ಕೃತಿಯಾಗಿ ಇದು ಪ್ರಕಟವಾಗಿದೆ.

ಮಂಡ್ಯದಲ್ಲಿ ನಡೆದ ಆರನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಂಗವಾಗಿ ಪ್ರಕಟಿಸಲಾದ 'ವಿಶೇಷ ಲೇಖಕಿ' ಎಂಬ ಸ್ಮರಣ ಸಂಚಿಕೆಯೂ ಸಂಗ್ರಹ ಯೋಗ್ಯವಾಗಿದ್ದು ಸಮ್ಮೇಳನದಲ್ಲಿ ಪುರಸ್ಕೃತರಾದ ಹತ್ತು ಮಂದಿ ಲೇಖಕಿಯರ ಬದುಕು ಸಾಧನೆಗಳ ವಿವರವಾದ ಪರಿಚಯ, ಸಮ್ಮೇಳನಾಧ್ಯಕ್ಷೆ ನೀಳಾದೇವಿಯವರ ಅಧ್ಯಕ್ಷ ಭಾಷಣ ಹಾಗೂ ಸಂದರ್ಶನ ಲೇಖನ, ನಾನೇಕೆ ಬರೆಯುತ್ತೇನೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಕೆಲವು ಲೇಖಕಿಯರು ತಮ್ಮ ಬರಹದ ಪ್ರಕ್ರಿಯೆಯನ್ನು ನಿರೂಪಿಸಿರುವ ಲೇಖನಗಳು ಹಾಗೂ ತುಮಕೂರು, ಬೀದರ್, ಉತ್ತರ ಕರ್ನಾಟಕ, ಕರಾವಳಿ ಹಾಗೂ ಮುಂಬೈ ಲೇಖಕಿಯರ ಬಳಗಗಳ ಪರಿಚಯದ ಲೇಖನಗಳು ಇದರಲ್ಲಿವೆ.

ಈ ಅವಧಿಯಲ್ಲಿ ಸಂಘವು ಹಮ್ಮಿಕೊಂಡ ಇನ್ನೊಂದು ಪ್ರಕಟಣಾ ಯೋಜನೆ ಲೇಖಕಿಯರ ಮಾಹಿತಿ ಕೋಶ. ಉಷಾ ಪಿ. ರೈ ಅವರ ಅವಧಿಯಲ್ಲಿಯೇ ಇದಕ್ಕಾಗಿ ಮಾಹಿತಿ ಸಂಗ್ರಹ ಆರಂಭಗೊಂಡಿದ್ದು, ಸಂಧ್ಯಾರೆಡ್ಡಿಯವರ ಅವಧಿಯಲ್ಲಿ ಪೂರ್ಣಗೊಂಡಿತ್ತು. ಇಂಥ ಮಾಹಿತಿ ಕೋಶವೊಂದು ಅತ್ಯಗತ್ಯವಾಗಿದ್ದ ಕಾಲದಲ್ಲಿ ಇದು ಪ್ರಕಟವಾಗತ್ತಿರುವುದು ಗಮನಾರ್ಹ. ಲೇಖಕಿಯರ ಬದುಕು ಬರಹ ಹಾಗೂ ಮಹಿಳಾ ಸಾಹಿತ್ಯ ಚರಿತ್ರೆಯ ಅಭ್ಯಾಸ ಮಾಡುವವರಿಗೂ ಇದು ಬಹು ಮುಖ್ಯ ಆಕರ ಗ್ರಂಥವಾಗುವುದರಲ್ಲಿ ಸಂದೇಹವಿಲ್ಲ. ಈ ಶತಮಾನದ ಮೂರು ತಲೆಮಾರುಗಳ ಕವಯತ್ರಿಯರ ಕವಿತೆಗಳನ್ನೊಳಗೊಂಡ ಶತಮಾನದ ಮಹಿಳಾ ಕಾವ್ಯ ಹಾಗೂ ಲೇಖಕಿಯರಿಂದ ರಚಿತವಾದ ನಾಟಕಗಳ ಸಂಪುಟಗಳನ್ನು ಪ್ರಕಟಿಸುವ ದಿಸೆಯಲ್ಲಿಯೂ ಈ ಅವಧಿಯಲ್ಲಿ ಸಾಕಷ್ಟು ಕೆಲಸ ನಡೆದಿದ್ದು ಮುಂದಿನ ಅಧ್ಯಕ್ಷರ ಅವಧಿಯಲ್ಲಿ ಈ ಕೃತಿಗಳು ಬಿಡುಗಡೆಯಾಗುತ್ತಿವೆ. ಆತ್ಮಕಥನಗಳ ದಾಖಲಾತಿಗೆ ತಳಹದಿಹಾಕಿಕೊಟ್ಟ ಲೇಖಲೋಕ ಒಂದನೇ ಸಂಪುಟದ ಪ್ರತಿಗಳು ಮುಗಿದು ಹೋಗಿದ್ದರಿಂದ (ಮೊದಲ ಮುದ್ರಣ 1998) ಕೆಲವು ಹೊಸ ಮಾಹಿತಿಗಳನ್ನು ಸೇರಿಸಿ ಪರಿಷ್ಕರಿಸಿ ಹೊಸ ಮುಖಪುಟ ವಿನ್ಯಾಸದೊಂದಿಗೆ ಅದನ್ನು ನನ್ನ ಅವಧಿಯಲ್ಲಿ ಮರುಮುದ್ರಿಸಲಾಯಿತು. (2010)

ಮಾಹಿತಿ ಕೇಂದ್ರವಾಗಿ ಲೇಖಕಿಯರ ಸಂಘ :-

ಲೇಖಕಿಯರ ಸಂಘವು ಮಹಿಳಾ ಸಾಹಿತ್ಯ ಕುರಿತಂತೆ ಒಂದು ಉತ್ತಮ ಮಾಹಿತಿ ಕೇಂದ್ರವಾಗಬೇಕು ಎಂಬುದು ಈ ಅವಧಿಯ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಹಮ್ಮಿಕೊಂಡ ಯೋಜನೆಗಳಲ್ಲಿ ಮುಖ್ಯವಾದುದು ಲೇಖಕಿಯರ ಭಾವಚಿತ್ರಗಳ ಸಂಗ್ರಹ ಹಾಗೂ ಪ್ರದರ್ಶನ (ಸೆಪ್ಟೆಂಬರ್ 6, 2006). ಈ ನಿಟ್ಟಿನಲ್ಲಿ ಹಿರಿಯ ಲೇಖಕಿಯರು, ಸರ್ಕಾರ ಹಾಗೂ ಅಕಾಡಮಿಯ ಗೌರವ ಪುರಸ್ಕೃತ ಲೇಖಕಿಯರು, ಸಂಘದ ಅನುಪಮಾ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳಿಗೆ ಕಟ್ಟು ಹಾಕಿಸಿ ಸಂಘದಲ್ಲಿ ಪ್ರದರ್ಶಿಸಲಾಗಿದೆ. ಬೇರೆಲ್ಲಿಯೂ ಇಂತಹ ಸಂಗ್ರಹ ಲಭ್ಯವಾಗುವುದಿಲ್ಲ. ಸಂಘದ ಗ್ರಂಥಾಲಯವನ್ನು ಇನ್ನಷ್ಟು ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಯಿತು. ಮಹಿಳಾ ಸಾಹಿತ್ಯ ಮತ್ತು ಮಹಿಳಾ ಅಧ್ಯಯನದಲ್ಲಿ ತೊಡಗಿಕೊಂಡವರಿಗೆ ಹಾಗೂ ಪಿಎಚ್,ಡಿ, ಎಂಫಿಲ್, ಮಾಡುವವರಿಗೆ ಸಂಘವು ಪುಸ್ತಕಗಳನ್ನು ದೊರಕಿಸುವ ಬಹು ಮುಖ್ಯ ತಾಣವಾಗಿದೆ, ಹಾಗೂ ಲೇಖಕಿಯರನ್ನು ಕುರಿತ ಮಾಹಿತಿ ಒದಗಿಸುವ ವಿಶ್ವಾಸನೀಯ ಮೂಲವಾಗಿದೆ.

ಲೇಖಕಿಯರು ಸಾಮಾಜಿಕ, ರಾಜಕೀಯ ವಿಷಯಗಳಿಗೆ ಸ್ವಂದಿಸುವುದಿಲ್ಲ ಎಂಬ ಪೂರ್ವಾಗ್ರಹದ ಟೀಕೆ ಆಗಾಗ ಕೇಳಿ ಬರುತ್ತಿರುತ್ತದೆ. ಲೇಖಕಿಯರು ಇಂಥ ವಿಷಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವುದು ಸಾಮಾಜಿಕ ಹಾಗೂ ಕೌಟುಂಬಿಕ ಕಾರಣಗಳಿಂದಾಗಿಯೇ ಸಾಧ್ಯವಾಗಿರುವುದಿಲ್ಲ. ಆದರೆ ಇಂಥ ಸಂಗತಿಗಳಿಗೆ ಅವರು ಕುರುಡಾಗಿಲ್ಲ.

2005 ರಿಂದ 2011ರ ಅವಧಿಯಲ್ಲಿ ಸಂಘವು ಸಕ್ರಿಯವಾಗಿ ಸ್ಪಂದಿಸಿದ ಸಂದರ್ಭಗಳು ಹೀಗಿವೆ :-

ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಕ್ರಮಗಳು :-

ಗ್ರಾಮೀಣ ಪ್ರದೇಶದ ಮಹಿಳೆಯಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ, ತರುಣ ಪೀಳಿಗೆಯವರಲ್ಲಿ ಸಾಹಿತ್ಯ ಸಂಸ್ಕೃತಿ, ಪರಿಸರ, ಸಾಮಾಜಿಕ ವಿಷಯಗಳ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಸಂಘವು ಬಹಳಷ್ಟು ಕಾರ್ಯಕ್ರಮಗಳನ್ನು ಹೊಸಕೋಟೆಯ ಉಪ್ಪಾರಹಳ್ಳಿ, ದೊಡ್ಡಬಳ್ಳಾಪುರ, ಸಾಣೆಹಳ್ಳಿ, ಗುಡಿಬಂಡೆ, ರಾಮನಗರ, ಚನ್ನಪಟ್ಟಣ, ಉಡುತಡಿ ಮೊದಲಾದ ಊರುಗಳಲ್ಲಿ ಹಾಗೂ ಗ್ರಾಮಾಂತರ ಪ್ರಾದೇಶಗಳ ಕಾಲೇಜುಗಳಲ್ಲಿ ನಡೆಸಿದೆ. ಮೂಢನಂಬಿಕೆಗಳ ನಿವಾರಣೆ, ಮನೆ ಮದ್ದಿನ ಮಹತ್ವ, ಪರಿಸರ, ಯೋಗ, ಧ್ಯಾನ, ಸಾಮಾನ್ಯರನ್ನು ಕಾಡುವ ಖಾಯಿಲೆಗಳು ಜಾನಪದದ ಮಹತ್ವ, ಪರಂಪರಾಗತ ಜ್ಞಾನ ಸಂಪತ್ತಿನ ರಕ್ಷಣೆ ಮುಂತಾದವು ಇಲ್ಲಿನ ಉಪನ್ಯಾಸದ ವಿಷಯಗಳಾಗಿವೆ. ರಾಜಧಾನಿಯಿಂದ ಹೊರಗಿನ ಶಿವಮೊಗ್ಗ, ಮಂಡ್ಯ, ತುಮಕೂರು, ಬೀದರ್, ಗುಲ್ಬರ್ಗಾ ಮೊದಲಾದ ಜಿಲ್ಲೆಗಳಲ್ಲಿ ಕಥಾ ಕಮ್ಮಟ, ಕಾವ್ಯಕಮ್ಮಟ, ಪತ್ರಿಕೋದ್ಯಮ, ಶಿಬಿರ, ನಾಟಕ ರಚನಾ ಶಿಬಿರ ಮೊದಲಾದವನ್ನು ನಡೆಸಿ ಗ್ರಾಮಾಂತರ ಜಿಲ್ಲೆಗಳ ಉದಯೋನ್ಮುಖ ಲೇಖಕಿಯರಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ.

ಆರನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ : -

ಲೇಖಕಿಯರ ಸಮ್ಮೇಳನ ಲೇಖಕಿಯರಿಗೆ ಮಾತ್ರ ಸೀಮಿತವಾಗದೆ ಎಲ್ಲ ವರ್ಗದ ಮಹಿಳೆಯರೂ ಭಾಗವಹಿಸಬೇಕು ಎಂಬ ಆಶಯದೊಂದಿಗೆ ಗ್ರಾಮಾಂತರ ಜಿಲ್ಲೆ ಮಂಡ್ಯದಲ್ಲಿ ಸಮ್ಮೇಳನ ನಡೆಸಿ (24, 25. ನವೆಂಬರ್ 2007) ಸಾಮಾಜಿಕ ಕಾರ್ಯಕರ್ತರು, ಸ್ತ್ರೀಶಕ್ತಿ ಸಂಘದವರು, ರೈತ ಹೋರಾಟಗಾರರು ಭಾಗವಹಿಸುವಂತೆ ಮಾಡಿ ಅವರ ಸೇವೆಗೆ ಗೌರವ ಮನ್ನಣೆ ಸಲ್ಲಿಸಿದೆ.

ದತ್ತಿ ನಿಧಿ ಬಹುಮಾನಗಳು ಹಾಗೂ ದತ್ತಿ ಕಾರ್ಯಕ್ರಮಗಳು :-

ಸಂಘದಲ್ಲಿ ಆರಂಭದಿಂದಲೂ ಅನೇಕ ದತ್ತಿಗಳಿವೆ. 2005 ರಿಂದ 2011 ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ದತ್ತಿಗಳ ಸೇರ್ಪಡೆಯಾಯಿತು. ಇದರಿಂದಾಗಿ ಸಂಘದ ಕಾರ್ಯಕ್ರಮಗಳ ವೈವಿಧ್ಯತೆ ಹೆಚ್ಚಾಯಿತು ಮತ್ತು ಸಾಹಿತ್ಯದ ಬಹುತೇಕ ಎಲ್ಲ ಪ್ರಕಾರಗಳಿಗೂ ದತ್ತಿ ನಿಧಿ ಬಹುಮಾನ ದೊರಕುವಂತಾಗಿ ಲೇಖಕಿಯರಿಗೆ ಹೆಚ್ಚಿನ ಪ್ರೋತ್ಸಾಹವಾಯಿತು.

2005 -11 ರವರೆಗಿನ ಅವಧಿಯಲ್ಲಿ ಸೇರ್ಪಡೆಯಾದ ದತ್ತಿಗಳು

ಕಾಕೋಳು ಸರೋಜಮ್ಮ ದತ್ತಿ (ಕಾದಂಬರಿ)

ಗುಣಸಾಗರಿ ನಾಗರಾಜ ದತ್ತಿ (ಮಕ್ಕಳ ಸಾಹಿತ್ಯ)

ನುಗ್ಗೆಹಳ್ಳಿ ಪಂಕಜಾ ದತ್ತಿ (ಹಾಸ್ಯ ಕೃತಿ)

ಸುಧಾಮೂರ್ತಿ ದತ್ತಿ (ತ್ರಿವೇಣಿ ಸಾಹಿತ್ಯ ಪುರಸ್ಕಾರ) (ಸಣ್ಣ ಕಥೆ ಹಾಗೂ ಕಾದಂಬರಿ- ಪರ್ಯಾಯವಾಗಿ)

ಕಮಲಾ ರಾಮಸ್ವಾಮಿ ದತ್ತಿ (ಪ್ರವಾಸ ಸಾಹಿತ್ಯ ಹಾಗೂ ವಿಚಾರ ಸಾಹಿತ್ಯ ಪರ್ಯಾಯವಾಗಿ)

ಡಾ. ಲೀಲಾವತಿ ದೇವದಾಸ್ ದತ್ತಿ - ಆರೋಗ್ಯ ಕುರಿತು ಉಪನ್ಯಾಸ ಕಾರ್ಯಕ್ರಮ

ಶ್ರೀಮತಿ ನೀಳಾದೇವಿ ದತ್ತಿ (ಜೀವನ ಚರಿತ್ರೆ)

ಡಾ. ಜಯಮ್ಮ ಕರಿಯಣ್ಣ ದತ್ತಿ (ಸಂಶೋಧನಾ ಪ್ರಕಾರ)

ಇಂದಿರಾವಾಣಿ ರಾವ್ ದತ್ತಿ (ನಾಟಕ ಸಾಹಿತ್ಯ)

ಲೇಖಕಿಯರೊಂದಿಗೆ ಸಂಪರ್ಕ :-

>

ಬೇರೆ ಬೇರೆ ಜಿಲ್ಲೆಗಳ ಹಾಗೂ ರಾಜ್ಯಗಳ ಲೇಖಕಿಯರೊಂದಿಗೆ ಸಂಪರ್ಕ ಕಲ್ಪಿಸುವಂಥ ಅನೇಕ ಕಾರ್ಯಕ್ರಮಗಳನ್ನು ಸಂಘವು ನಡೆಸಿದೆ. ಪಾಂಡಿಚೆರಿಯಲ್ಲಿ ನಡೆದ ಬಹುಭಾಷಾ ಲೇಖಕಿಯರ ಸಮಾವೇಶಕ್ಕೆ ಸಂಘವು ಸಹಯೋಗ ನೀಡಿ ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಿತು (5-4-2008). ಗುಲ್ಬರ್ಗಾದಲ್ಲಿ ನಡೆದ ಕಾವ್ಯ ಕಮ್ಮಟ, ತುಮಕೂರಿನ ಕಥಾ ಕಮ್ಮಟ, ಶಿವಮೊಗ್ಗದ ನಾಟಕ ರಚನಾ ಶಿಬಿರಗಳೂ ಸಹ ಈ ದಿಸೆಯಲ್ಲಿ ಗಮನಾರ್ಹ. ಗುಜರಾತಿನ ಲೇಖಕಿ ಉಷಾ ಉಪಾಧ್ಯಾಯ ಅವರು ಎರಡು ಮೂರು ಸಲ ಸಂಘಕ್ಕೆ ಭೇಟಿ ನೀಡಿ ವಿಚಾರ ವಿನಿಮಯ ಮಾಡಿಕೊಂಡರು. ದೇಶದ ಇನ್ನೆಲ್ಲಿಯೂ ಇಂತಹ ವ್ಯವಸ್ಥಿತವಾದ ಲೇಖಕಿಯರ ಸಂಘವಾಗಲಿ, ಇಷ್ಟು ಸಮರ್ಥವಾದ ಕಾರ್ಯ ಚಟುವಟಿಕೆಗಳಾಗಲೀ ನಡಯುತ್ತಿಲ್ಲವೆಂದು ಅಭಿಪ್ರಾಯ ಪಟ್ಟರು. ವಿದೇಶದಲ್ಲಿ ನೆಲೆಸಿದ ಕೆಲವು ಲೇಖಕಿಯರೂ ಸಹ ಇಲ್ಲಿಗೆ ಬಂದಾಗ ಸಂಘಕ್ಕೆ ಭೇಟಿ ನೀಡಿ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಇಲ್ಲಿಂದ ಮಾರ್ಗದರ್ಶನ ಪಡೆದುಕೊಂಡಿದ್ದಾರೆ.

ಲೇಖಕಿಯರ ಸಮಸ್ಯೆಗಳಿಗೆ ಸ್ಪಂದನ : -

ಪುಸ್ತಕ ಪ್ರಕಟಣೆ, ಮಾರಾಟಗಳ ವಿಷಯದಲ್ಲಿ ಲೇಖಕಿಯರು ಎದುರಿಸುವ ಸಮಸ್ಯೆಗಳಿಗೆ ಸ್ಪಂದಿಸುವ ಹಿನ್ನೆಲೆಯಲ್ಲಿ ಲೇಖಕಿಯರು ಮತ್ತು ಪುಸ್ತಕೋದ್ಯಮ ಕುರಿತ ಸಂವಾದ ಕಾರ್ಯಕ್ರಮ ನಡೆಸಲಾಯಿತು (19-09-2008). ಲೇಖಕಿಯರ ಕೃತಿಗಳ ಮಾರಾಟಕ್ಕೆ ನೆರವಾಗುವ ದಿಸೆಯಲ್ಲಿ ಪುಸ್ತಕ ಪ್ರಾಧಿಕಾರದ ಮಾರಾಟ ಮೇಳದಲ್ಲಿ ಭಾಗವಹಿಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಸಂಘದ ಪ್ರಕಟಣೆಗಳೂ ಸೇರಿದಂತೆ ಲೇಖಕಿಯರ ಕೃತಿಗಳು ಈ ಮೂಲಕ ಸಾಕಷ್ಟು ಮಾರಾಟ ಗಳಿಸಿದವು.

ಸಹಾಯ ಅಗತ್ಯವಿರುವ ಲೇಖಕಿಯರಿಗಾಗಿ ಅಥವಾ ಸಾಂಸ್ಕೃತಿಕ ಕ್ಷೇತ್ರದ ಮಹಿಳೆಯರಿಗಾಗಿ ಕಲೇಸಂ ಸಹಾಯ ನಿಧಿಯೋಜನೆ, ಪ್ರತಿ ವರ್ಷವೂ ಸಂಘದ ವಾರ್ಷಿಕೋತ್ಸವವನ್ನು ನಡೆಸಿ ಸಾಹಿತ್ಯದ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂಥ ಲೇಖಕಿಯರನ್ನು ಸನ್ಮಾನಿಸುವುದು, ಇವೇ ಮೊದಲಾದ ಸಂಪ್ರದಾಯಗಳನ್ನು ಈ ಅವಧಿಯಲ್ಲಿ ರೂಢಿಸಲಾಯಿತು. ಸಂಘದ ಕಾರ್ಯ ಚಟುವಟಿಕೆಗಳು, ಕಾರ್ಯತತ್ಪರತೆಗಳು ಸಾಕಷ್ಟು ವಿಶ್ವಾಸ ಅಭಿಮಾನಗಳನ್ನು ಮೂಡಿಸಿದವು. ಸಂಘವು ಹಮ್ಮಿಕೊಂಡ ಲೇಖಕಿಯರ ಭಾವಚಿತ್ರಗಳ ಯೋಜನೆ, ಲೇಖಕಿಯರಿಗೆ ಧನ ಸಹಾಯ ಯೋಜನೆ ಮುಂತಾದವುಗಳೆಲ್ಲ ಅಭಿಮಾನಿಗಳ ಹಾಗೂ ಸದಸ್ಯರ ವಿಶೇಷ ಕೊಡುಗೆಯಿಂದಲೇ ಕಾರ್ಯಗತವಾಗಿರುವುದು ಇದಕ್ಕೆ ನಿದರ್ಶನ. ಸಂಘದ ಬಹುಮಾನಗಳನ್ನು, ಪ್ರಶಸ್ತಿಗಳನ್ನು ಪಡೆಯುವುದು ನಿಜಕ್ಕೂ ಗೌರವದ ಸಂಗತಿ ಎಂಬ ಭಾವನೆ ನೆಲೆಯಾಯಿತು.

 

ಡಾ. ವಸುಂಧರಾ ಭೂಪತಿ

2011ರಿಂದ ಈವರೆವಿಗೆ...

ಅಕ್ಟೋಬರ್ 11, 2011ರಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 188 ಮತಗಳು ಚಲಾವಣೆಯಾಗಿದ್ದು, 148 ಮತಗಳನ್ನು ಪಡೆದ ಡಾ. ವಸುಂಧರಾ ಭೂಪತಿಯವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. 29-10-2011ರಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಸಭಾಂಗಣದಲ್ಲಿ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಡಾ. ವಸುಂಧರಾ ಭೂಪತಿಯವರಿಗೆ ಅಧ್ಯಕ್ಷೆಯಾಗಿ ಎರಡು ಅವಧಿಯನ್ನು ಪೂರೈಸಿದ ಡಾ. ಕೆ.ಆರ್. ಸಂಧ್ಯಾರೆಡ್ಡಿ ಅವರು ಪದವಿ ಹಸ್ತಾಂತರಿಸಿ ಶುಭ ಕೋರಿದರು.

ಹಿಂದಿನವರ ಹೆಜ್ಜೆಗಳನ್ನು ಮರೆಯದೆ, ಹೊಸ ಯೋಜನೆಗಳೊಂದಿಗೆ ಸಂಘವನ್ನು ಮುನ್ನಡೆಸುವ ಭರವಸೆ ನೀಡಿದ ವಸುಂಧರಾ ಭೂಪತಿಯವರು ಸಾಹಿತ್ಯದ ಪರಿಧಿಯಿಂದ ಹಿನ್ನೆಲೆಗೆ ಸರಿದಂತೆ ಭಾವಿಸಲಾಗುತ್ತಿದ್ದ ವಿಜ್ಞಾನ ಸಾಹಿತ್ಯದ ನಾನಾ ಶಾಖೆಗಳೆಡೆಗೂ ತಮ್ಮ ಗಮನ ಹರಿಸುವುದರೊಂದಿಗೆ `ಸಾಹಿತ್ಯ-ವಿಜ್ಞಾನ' ದ ಲೇಖಕರನ್ನು ಬೆಸೆಯುವೆಡೆ ಮಹತ್ವದ ಹೆಜ್ಜೆ ಇಟ್ಟರು. ಈ ಯುಗಕ್ಕೆ ಅತ್ಯವಶ್ಯವೆನಿಸುವ ಗಣಕದ ಅರಿವು ಲೇಖಕಿಯರಿಗೆ ಇರಬೇಕು ಎಂದು ಕಂಪ್ಯೂಟರ್ ಕಾರ್ಯಾಗಾರದ ಮುಖೇನ ಯಶಸ್ವೀ ಯೋಜನೆಗಳೆಡೆ ಸಾಗಿದರು. ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ' ಗಣಕಯಂತ್ರದ ಪ್ರಾಥಮಿಕ ವಿಚಾರಗಳು ಲೇಖಕಿಯರ ಪ್ರಮುಖ ಸಮಸ್ಯೆಗಳ ಬಗೆಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲಾಯಿತು. ಡಾ.ವಸುಂಧರಾ ಭೂಪತಿಯವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಶ್ರೀಮತಿ ಸರ್ವಮಂಗಳಾ, ಜಿ.ವಿ. ನಿರ್ಮಲ, ಎನ್. ಕ್ಷಮಾ, ಜಿ.ಎನ್. ನರಸಿಂಹ ಮೂರ್ತಿ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 25 ಜನ ಲೇಖಕಿಯರಿಗೆ ಲೇಖಕಿ ಸರ್ವಮಂಗಳಾ ಅವರ `ಸವಿಗನ್ನಡ ಸಂಸ್ಥೆ'ಯಲ್ಲಿ ಕಂಪ್ಯೂಟರ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಫೆಬ್ರವರಿ 19, 2012ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದ ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ನಲ್ಲಿ ಕಲೇಸಂನ 33ನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ಸ್ವತಃ ಲೇಖಕಿಯೂ ಆದ ಸುಧಾಮೂರ್ತಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಎಲ್.ವಿ. ಶಾಂತಕುಮಾರಿ, ಡಾ. ಎನ್.ಎಸ್. ಲೀಲಾ, ಪ್ರೊ. ಬಿ.ವೈ. ಲಲಿತಾಂಬ, ಟಿ. ಗಿರಿಜಾ ಹಾಗೂ ರಜಿಯಾ ಬಳಬಟ್ಟಿಯವರನ್ನು ವಿಶಿಷ್ಟ ಲೇಖಕಿಯರೆಂದು ಗುರುತಿಸಿ ಗೌರವಿಸಲಾಯಿತು. ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಎಚ್.ಎಸ್. ಪಾರ್ವತಿ ಅವರು ಸ್ಥಾಪಿಸಿರುವ `ಎಚ್.ಎಸ್. ಪಾರ್ವತಿ ದತ್ತಿನಿಧಿ' ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ಹೇಮಲತಾ ಮಹಿಷಿಯವರಿಗೆ ನೀಡಿ ಗೌರವಿಸಲಾಯಿತು.

ಕರ್ನಾಟಕ ಲೇಖಕಿಯರ ಸಂಘ ಹಾಗೂ `ಚಿಂತನ ಪುಸ್ತಕ'ವತಿಯಿಂದ 2012ನೇ ಮಾರ್ಚಿ 2ರಂದು `ಮಹಿಳಾ ದಿನ ಶತಮಾನೋತ್ಸವ ಮಾಲಿಕೆ'ಯಡಿಯಲ್ಲಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು `ಕನ್ನಡ ಸಾಹಿತ್ಯ ಪರಿಷತ್'ನಲ್ಲಿ ನೆರವೇರಿತು. ಮಹಿಳಾ ದಿನ ಶತಮಾನೋತ್ಸವ ಮಾಲಿಕೆಯ ಸಂಪಾದಕಿ ಕೆ.ಎಸ್. ವಿಮಲಾ ಡಾ. ವಸುಂಧರಾ ಭೂಪತಿ, ಡಾ. ಎನ್. ಗಾಯತ್ರಿ, ಡಾ. ಎಂ.ಎಸ್. ಆಶಾದೇವಿ, ಎಸ್. ಸತ್ಯ, ಡಾ. ಕೆ. ಷರೀಫಾ ಮೊದಲಾದವರು ಭಾಗವಹಿಸಿದ್ದರು.

ಕರ್ನಾಟಕ ಲೇಖಕಿಯರ ಸಂಘ, `ಮಾಧ್ಯಮ ಭಾರತಿ' ಹಾಗೂ `ಕಲಾ ಗಂಗೋತ್ರಿ' ಸಹಯೋಗದೊಂದಿಗೆ 8-3-2012ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ `ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ'ಯನ್ನು ಆಯೋಜಿಸಿತ್ತು. ಐ.ಎ.ಎಸ್. ಅಧಿಕಾರಿ ಡಾ. ಶಾಲಿನಿ ರಜನೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರ್ಗವಿ ನಾರಾಯಣ್, ಉಮಾಶ್ರೀ ಮುಂತಾದವರು ಆತ್ಮ ಕಥಾನಕಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪತ್ರಕರ್ತೆಯರಾದ ಕೆ.ಎಚ್. ಸಾವಿತ್ರಿ, ವಿಜಯಲಕ್ಷ್ಮಿ, ಆಕಾಶವಾಣಿಯ ಅಧಿಕಾರಿ ಸುಮಂಗಲಾ ಮುಮ್ಮಿಗಟ್ಟಿ, ಪಿ.ಜಿ. ಮಂಜುಳಾ ಮಾಧ್ಯಮದಲ್ಲಿ ಮಹಿಳೆಯ ಬಿಂಬ ಮಹಿಳೆಯ ಪಾತ್ರ ಕುರಿತು ಚರ್ಚಿಸಿದರು.

ನವೆಂಬರ್ 20, 2011ರಂದು ಲೇಖಕಿಯರಾದ ಡಾ. ಸುನಂದಾ ಕುಲಕರ್ಣಿ, ಸುಮಂಗಲಾ ಮುಮ್ಮಿಗಟ್ಟಿ, ಡಿಸೆಂಬರ್ 18ರಂದು ಶಾಂತಾದೇವಿ ಕಣವಿ, ಜನವರಿ 29, 2012ರಂದು ಡಾ. ಷರೀಫಾ, ಭಾರತಿ ಕಾಸರಗೋಡು ಇವರುಗಳೊಂದಿಗೆ `ಸಾಹಿತ್ಯ ವಿಹಾರ' ಕಾರ್ಯಕ್ರಮವನ್ನು ನಡೆಸಲಾಯಿತು.

ಧಾರವಾಡದಲ್ಲಿ `ಸಖೀಗೀತ ಕಾವ್ಯ, ನಮ್ಮ ಇಂದಿನ ದಾಂಪತ್ಯ' ಎನ್ನುವ ವಿಷಯದ ಮೇಲೆ ವಿಚಾರಗೋಷ್ಠಿಯನ್ನೇರ್ಪಡಿಸುವುದರ ಮೂಲಕ ಲಕ್ಷ್ಮೀಬಾಯಿ ದತ್ತಾತ್ರೇಯ ಬೇಂದ್ರೆ ಜನ್ಮದಿನವನ್ನು ಏಪ್ರಿಲ್ 15, 2012ರಂದು ಆಚರಿಸಲಾಯಿತು. ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ - ಧಾರವಾಡ, ಗೋಷ್ಠಿಯನ್ನು ಸಂಘಟಿಸಿತ್ತು. ಕರ್ನಾಟಕ ಲೇಖಕಿಯರ ಸಂಘಕ್ಕೆ ವಿಶೇಷ ಆಹ್ವಾನವಿದ್ದ ಕಾರಣ ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರನ್ನೊಳಗೊಂಡ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.

ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ನವಕರ್ನಾಟಕ ಪ್ರಕಾಶನವು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ 22-4-2012ರಂದು ಆಯೋಜಿಸಿದ್ದ ಸಮಾರಂಭದಲ್ಲಿ, `ವನಿತಾ ಚಿಂತನ ಮಾಲೆ'ಯಡಿ ನಾಗಮಣಿ ಎಸ್.ರಾವ್ ಅವರ `ಧೀಮತಿಯರು' ಹಾಗೂ `ಸ್ತ್ರೀಪಥ' ಮತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಕಮಲಾದೇವಿ ಚಟ್ಟೋಪಾಧ್ಯಾಯ (ಅನು: ಡಾ. ಗೀತಾ ಶೆಣೈ) ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

2012 ಜುಲೈ 22ರಂದು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಡಾ. ವಸುಂಧರಾ ಭೂಪತಿಯವರ `ಆರೋಗ್ಯ - ವೈವಿಧ್ಯ' ಹಾಗೂ `ಆಹಾರ ಮತ್ತು ಆರೋಗ್ಯ,' ಗುಣ ಸಾಗರಿ ನಾಗರಾಜ್ರವರ `ಮುಷ್ಟಿಯೊಳಗಿನ ಹೆಣ್ಣು,' `ಪರಿವರ್ತನೆ', ವಿಜಯಾ ವಿಷ್ಣುಭಟ್ರ `ವಿವಾಹ ಮತ್ತು ಮಹಿಳೆ' `ಪ್ರಬಂಧ ಪರಿಚಯ' ಕೃತಿಗಳ ಲೋಕಾರ್ಪಣೆಯಾಯಿತು.

ಆಗಸ್ಟ್ 5, 2012ರಂದು ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಕೊಡಗಿನ ಗೌರಮ್ಮನವರ ಕುರಿತ ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ವೈದೇಹಿ ಅವರು ಎಚ್. ನಾಗವೇಣಿ ಅವರ `ಕೊಡಗಿನ ಗೌರಮ್ಮ' ಕುರಿತ ಪುಸ್ತಕ ಬಿಡುಗಡೆಗೊಳಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ವಿಜಯಾ, ಹೆಚ್.ಎಲ್. ಪುಷ್ಪಾ, ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎನ್.ಸಿ. ಮಹೇಶ್ ಉಪಸ್ಥಿತರಿದ್ದರು. ವಿಚಾರಗೋಷ್ಠಿಗಳಲ್ಲಿ ಡಾ.ಬಿ.ಎನ್. ಸುಮಿತ್ರಾಬಾಯಿ, ಡಾ. ಎಂ.ಎಸ್. ಆಶಾದೇವಿ, ಬಿ.ಯು. ಸುಮಾ, ಕೆ.ಎಂ. ಮರುಳಸಿದ್ಧಪ್ಪ, ಶೈಲಜಾ ಹಿರೇಮಠ ಹಾಗೂ ತಾರಿಣಿ ಶುಭದಾಯಿನಿ ಪ್ರಬಂಧಕಾರರಾಗಿದ್ದರು. ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಬಿ.ಟಿ. ಲಲಿತಾ ನಾಯಕ್ ಹಾಗೂ ಕೃಷ್ಣಮೂರ್ತಿ ಹನೂರರು ಪಾಲ್ಗೊಂಡಿದ್ದರು.

23-9-2012ರಂದು ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯ ನಂತರ 24-9-2012ರಂದು ವಿಶೇಷ ಸರ್ವಸದಸ್ಯರ ಸಭೆ ಜರುಗಿತು. ಈ ವರೆಗೆ ಇದ್ದ ಬೈಲಾದಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಿ ಅನುಮೋದಿಸಲಾಯಿತು.

2013 ಜನವರಿ 5ರಂದು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಕೃಷ್ಣರಾಜ ಪರಿಷನ್ಮಂದಿರದಲ್ಲಿ `ಮಹಿಳಾ ಕಥಾ ಸಂಪದ' ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶ್ರೀಮತಿ ಆರ್. ಹಂಸಾ ಹಾಗೂ ಪುಂಡಲೀಕ ಕಲ್ಲಿಗನೂರ ಸಂಪಾದಿಸಿರುವ ಮೂರು ತಲೆಮಾರಿನ ಲೇಖಕಿಯರ 108 ಕಥೆಗಳು ಇದರಲ್ಲಿವೆ.

ಕರ್ನಾಟಕ ಲೇಖಕಿಯರ ಸಂಘ ಹಾಗೂ ಸಾಹಿತ್ಯ ಸಮುದಾಯದ ಸಂಯುಕ್ತ ಆಶ್ರಯದಲ್ಲಿ ಕಾವ್ಯ ಸಂಕ್ರಾಂತಿ ಕಾರ್ಯಕ್ರಮವು ಜನವರಿ 17-2013ರಂದು ನಡೆಯಿತು. ಸುಮಾರು 50 ಲೇಖಕಿಯರು ತಮ್ಮ ಕವನಗಳನ್ನು ಓದಿ ಸಂಭ್ರಮಿಸಿದರು. ಈ ಕವನಗಳು ದೂರದರ್ಶನದಲ್ಲಿ ಪ್ರಸಾರವಾಯಿತು.

ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ಕರ್ನಾಟಕ ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ನಾಟಕ ರಚನಾ ಶಿಬಿರವು 2013ನೇ ಫೆಬ್ರವರಿ 4,5 ಮತ್ತು 6ರಂದು ಕನ್ನಡ ಭವನದ ಚಾವಡಿಯಲ್ಲಿ ನಡೆಯಿತು. ನಾಟಕ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಸುಧೀರ್, ಕಲಾವಿದೆ ಯಮುನಾ ಮೂರ್ತಿ ಹಾಗೂ ಅನೇಕ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದ ಈ ಶಿಬಿರದಲ್ಲಿ ಹಲವಾರು ಆಸಕ್ತ ಲೇಖಕಿಯರು ಭಾಗವಹಿಸಿ ಲಾಭವನ್ನು ಪಡೆದುಕೊಂಡರು.

ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಮಾರಂಭ ಮತ್ತು ದತ್ತಿನಿಧಿ ಬಹುಮಾನಗಳ ವಿತರಣೆ ಕಾರ್ಯಕ್ರಮವನ್ನು 24ನೇ ಫೆಬ್ರವರಿ 2013ರಂದು ಕರ್ನಾಟಕ ಸಾಹಿತ್ಯ ಪರಿಷತ್ನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ನಾಡೋಜ ಕಮಲಾ ಹಂಪನಾ ಅವರು ಉದ್ಘಾಟಿಸಿದರು. ಕಲೇಸಂನ ಹಿಂದಿನ ಅಧ್ಯಕ್ಷೆ ನಾಗಮಣಿ ಎಸ್. ರಾವ್ರವರು ಮುಖ್ಯ ಅತಿಥಿಯಾಗಿದ್ದರು. ಇದೇ ಸಂದರ್ಭದಲ್ಲಿ ವಿವಿಧ ದತ್ತಿನಿಧಿ ಬಹುಮಾನಗಳನ್ನು ವಿತರಿಸುವುದರೊಂದಿಗೆ ಕೆ.ಎಸ್. ನಿರ್ಮಲಾದೇವಿ, ಬಿ.ಜಿ. ಕುಸುಮ, ಡಾ. ಸಮತಾ ದೇಶಮಾನೆ, ಡಾ. ಲೀಲಾವತಿ ದೇವದಾಸ್ರವರನ್ನು ವಿಶಿಷ್ಟ ಲೇಖಕಿಯರೆಂದು ಗುರುತಿಸಿ ಗೌರವಿಸಲಾಯಿತು.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘ' ಮತ್ತು `ನಮ್ಮ ಮಾನಸ' ಜಂಟಿಯಾಗಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ರಾಜಸ್ಥಾನದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಭಾಂವ್ರಿದೇವಿ ಭಾಗವಹಿಸಿದ್ದರು. ಡಾ. ವಿಜಯಾ, ಎನ್. ಗಾಯತ್ರಿ, ಡಾ. ವಸುಂಧರಾ ಭೂಪತಿ ಹಾಗೂ ಕೆ.ಎಸ್. ವಿಮಲಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಯನ ಸಭಾಂಗಣದಲ್ಲಿ 12-3-2013ರಂದು ಹಿರಿಯ ಲೇಖಕಿ ಎಚ್.ಎಸ್. ಪಾರ್ವತಿಯವರ `ಸ್ನೇಹ ಚಿಂತನ' ಕೃತಿಯನ್ನು ಪ್ರೊ. ಎಂ.ಎಚ್. ಕೃಷ್ಣಯ್ಯನವರು ಬಿಡುಗಡೆ ಮಾಡಿದರು. ಡಾ. ಗೀತಾಶೆಣೈ, ಡಾ. ವಸುಂಧರಾ ಭೂಪತಿ, ಎಚ್.ಎಸ್. ಪಾರ್ವತಿ, ಎಂ.ಎಸ್. ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.

ದಿನಾಂಕ 31-3-2013ರಂದು ಕಾಶಿಮಠದಲ್ಲಿ `ಅನುವಾದಿತ ಕೃತಿಗಳ ಬಿಡುಗಡೆ' ಕಾರ್ಯಕ್ರಮವಿತ್ತು. ಕೊಂಕಣಿ ಭಾಷಾ ಸಂಸ್ಕೃತಿ ಪ್ರತಿಷ್ಠಾನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ, ಲೇಖಕಿಯರ ಸಂಘದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಕೊಂಕಣಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಡಾ. ಗೀತಾಶೆಣೈ ಪ್ರಮುಖರಾಗಿದ್ದ ಕಾರ್ಯಕ್ರಮದಲ್ಲಿ ಡಾ. ವಸುಂಧರಾ ಭೂಪತಿ, ವಿವೇಕ, ಶಾನಭೋಗ, ದಯಾನಂದ ಪೈ ಮೊದಲಾದವರು ಉಪಸ್ಥಿತರಿದ್ದರು.

ಏಪ್ರಿಲ್ 8, 2012ರಂದು ನಾಗರತ್ನ ಚಂದ್ರಶೇಖರ್, ಪ್ರೊ. ಎನ್.ಎಸ್. ಲೀಲಾ, ಜನವರಿ 6, 2013ರಂದು ಉಷಾ ಪಿ ರೈ, ಫೆಬ್ರವರಿ, 3, 2013ರಂದು ಹೇಮಾ ಪಟ್ಟಣಶೆಟ್ಟಿಯವರೊಂದಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮ ನಡೆಸಲಾಯಿತು.

ಕರ್ನಾಟಕ ಲೇಖಕಿಯರ ಸಂಘ 12ನೇ ಏಪ್ರಿಲ್ 2013ರಂದು ಕನ್ನಡ ಭವನದ ಚಾವಡಿಯಲ್ಲಿ ಎಚ್.ಎಸ್. ಪಾರ್ವತಿ ದತ್ತಿನಿಧಿ ಕಾರ್ಯಕ್ರಮದಲ್ಲಿ ಉಪನ್ಯಾಸಕಿ, ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ``ಸ್ತ್ರೀವಾದಿ ಸಾಹಿತ್ಯ ಮೀಮಾಂಸೆ'' ಕುರಿತು ಉಪನ್ಯಾಸ ನೀಡಿದರು.

ಏಪ್ರಿಲ್ 14, 2013ರಂದು ಡಾ. ಇಂದಿರಾ ಹೆಗ್ಗಡೆಯವರ `ತುಳುವರ ಮೂಲತಾನ ಆದಿ ಆಲಡೆಃಪರಂಪರೆ ಮತ್ತು ಪರಿವರ್ತನೆ' ಕೃತಿ ಕುರಿತು ನಾಟಕ ಅಕಾಡೆಮಿಯ ಚಾವಡಿಯಲ್ಲಿ `ಸಂವಾದ' ಕಾರ್ಯಕ್ರಮ ಏರ್ಪಟ್ಟಿತ್ತು.

ಕರ್ನಾಟಕ ಪ್ರಕಾಶಕರ ಸಂಘ, ಕರ್ನಾಟಕ ಲೇಖಕಿಯರ ಸಂಘ `ಅವದಿ' ಅಂತರಜಾಲ ಪತ್ರಿಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 23, 2013ರಂದು `ವಿಶ್ವ ಪುಸ್ತಕ ದಿನಾಚರಣೆ' ಕಾರ್ಯಕ್ರಮವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು ಸಮಾರಂಭದಲ್ಲಿ 8 ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಮೇ 12, 2013ರಂದು ನಾಟಕ ಅಕಾಡೆಮಿಯ ಚಾವಡಿಯಲ್ಲಿ ಡಾ. ಲೀಲಾವತಿ ದೇವದಾಸ್ ದತ್ತಿ ಕಾರ್ಯಕ್ರಮ ನಡೆಯಿತು. ಡಾ. ಲೀಲಾವತಿ ದೇವದಾಸ್ ಹಾಗೂ ಡಾ. ಎಚ್.ಎಸ್. ಅನುಪಮಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಬಿಜಾಪುರ ವಿಶ್ವವಿದ್ಯಾನಿಲಯದಲ್ಲಿ ಮೇ 25, 2013ರಂದು ಬುದ್ಧ ಪೂರ್ಣಿಮೆ ಆಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಸಹಯೋಗದೊಂದಿಗೆ ಬುದ್ಧ ಮತ್ತು ಅಂಬೇಡ್ಕರ್ ಕುರಿತ ಉಪನ್ಯಾಸ ಹಾಗೂ ಕವಿಗೋಷ್ಠಿ ಏರ್ಪಾಡಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ವಸುಂಧರಾ ಭೂಪತಿಯವರೊಂದಿಗೆ ಸಂಘದ ಸದಸ್ಯೆಯರು ಭಾಗವಹಿಸಿದ್ದರು.

ಜೂನ್ 30, 2013ರಂದು ಶಿವಮೊಗ್ಗ ಜಿಲ್ಲಾ ಶಾಖೆ ಆರಂಭವಾಯಿತು. ಹಿರಿಯ ಲೇಖಕಿ ಪ್ರೇಮಾಭಟ್ರವರಿಂದ ಶಾಖೆಯ ಉದ್ಘಾಟನೆಯಾಯಿತು. ಡಾ. ವಸುಂಧರಾ ಭೂಪತಿಯವರು ಶಿವಮೊಗ್ಗ ಶಾಖೆಯ ಅಧ್ಯಕ್ಷೆ ಎಸ್.ವಿ. ಚಂದ್ರಕಲಾ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಈ ಎರಡು ವರ್ಷದ ಅವಧಿಯಲ್ಲಿ `ಸಾವಿತ್ರಮ್ಮ ದತ್ತಿನಿಧಿ'ಯಲ್ಲಿ ಆದ ಬದಲಾವಣೆಯೆಂದರೆ, ಪ್ರಶಸ್ತಿಯ ಮೊತ್ತ, ಈ ವರೆಗೂ ಇದ್ದ 7,000ಕ್ಕೆ ಬದಲಾಗಿ 25,000ಕ್ಕೆ ಹೆಚ್ಚಿರುವದು. ಸಾವಿತ್ರಮ್ಮನವರ ಪುತ್ರ ವಿ.

ರಾಮಸ್ವಾಮಿಯವರು 5 ಲಕ್ಷ ದೇಣಿಗೆ ನೀಡಿ ಅವರ ತಾಯಿಯ ಹೆಸರಿನಲ್ಲಿ ಲೇಖಕಿಯೊಬ್ಬರಿಗೆ ಪ್ರತೀವರ್ಷ 25,000 ರೂ. ನಗದು, ಸ್ಮರಣ ಫಲಕವನ್ನು ನೀಡಬೇಕೆಂದು ತಿಳಿಸಿರುತ್ತಾರೆ. ಈ ಸಂಬಂಧ ಉಮಾರಾವ್ ಅವರಿಗೆ ಪ್ರಪ್ರಥಮವಾಗಿ ಈ ಪ್ರಶಸ್ತಿ ದೊರಕಿದೆ. 14-9-2013ರಂದು ಇಡೀ ದಿನ ಕಾರ್ಯಕ್ರಮ ನಡೆಯಿತು. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕೀಲೆ ಹೇಮಲತಾ ಮಹಿಷಿ ಪ್ರಶಸ್ತಿ ಪ್ರದಾನ ಮಾಡಿದರು. ಸಾವಿತ್ರಮ್ಮನವರ ಸಣ್ಣ ಕಥೆಗಳು, ಕಾದಂಬರಿ ಮತ್ತು ಅನುವಾದಗಳು ಕುರಿತಾಗಿ ನಡೆದ ಗೋಷ್ಠಿಗಳಲ್ಲಿ ಡಾ. ಬಿ.ಎನ್. ಸುಮಿತ್ರಾಬಾಯಿ, ಡಾ. ಎಲ್.ಜಿ. ಮೀರಾ, ಡಾ. ಎನ್. ಗಾಯತ್ರಿ, ಬಾನು ಮುಷ್ತಾಕ್ ಡಾ. ವಿನಯಾ ಬಿಕ್ಕುಂದ, ಎಂ. ಉಷಾ, ಡಾ. ಎಚ್.ಎಸ್. ರಾಘವೇಂದ್ರರಾವ್ ಮೊದಲಾದವರು ಪಾಲ್ಗೊಂಡಿದ್ದರು.