ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

¨É¼ÀQ£ÉqÉUÉ ºÉeÉÓ

ಮುನ್ನಡೆಯ ಹಾದಿಯಲ್ಲಿ ಕಲೇಸಂ- ಒಂದು ಸ್ಥೂಲ ನೋಟ

ಸಂಘದ ಉದಯ:

ಕರ್ನಾಟಕ ಲೇಖಕಿಯರ ಸಂಘ ಜನ್ಮತಾಳಿದ್ದು 1979ರ ಜನವರಿ ತಿಂಗಳ 26ನೇ ತಾರೀಖಿನಂದು, ಇದೀಗ 34 ವರ್ಷಗಳ ಸಾರ್ಥಕ ಹಾಗೂ ಅಪೂರ್ವ ಸೇವೆಯನ್ನು ಪೂರೈಸಿ ಇನ್ನೆರಡು ತಿಂಗಳಲ್ಲಿ 35ನೇ ವಾರ್ಷಿಕೋತ್ಸವಕ್ಕೆ ಸಿದ್ಧವಾಗುತ್ತಿದೆ. ಕರ್ನಾಟಕ ಲೇಖಕಿಯರ ಸಂಘ, ದಿನದಿನಕ್ಕೂ, ವರ್ಷವರ್ಷಕ್ಕೂ ಪ್ರವರ್ಧಮಾನವಾಗಿ ಬೆಳೆದು ಬರುತ್ತಿರುವುದನ್ನು ಕಂಡಾಗ ಮನಸ್ಸು ಮುದಗೊಳ್ಳುತ್ತದೆ. ಸಂಘ ಅದೃಷ್ಟಶಾಲಿ. ಅಧಿಕಾರಕ್ಕೆ ಬಂದ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಒಬ್ಬರಿಗಿಂತ ಒಬ್ಬರು ದಕ್ಷರಾಗಿ ಸಂಘವನ್ನು ಮುನ್ನಡೆಸಿದ್ದಾರೆ. ಇಂತಹ ಒಂದು ವಿಶಿಷ್ಟ ಸಂಘದ ಆರಂಭ ಹಾಗೂ ನಡೆದು ಬಂದ ಹಾದಿಯನ್ನು ದಾಖಲಿಸುವ ದೃಷ್ಟಿಯಿಂದ ಒಂದಿಷ್ಟು ಮಾಹಿತಿ:

ಲೇಖಕಿಯರು ಸಾಕಷ್ಟು ಸಂಖ್ಯೆಯಲ್ಲಿ ಬರೆಯಲಾರಂಭಿಸಿ ಒಳ್ಳೆಯ ಕೃತಿಗಳು ರಚನೆಯಾಗುತ್ತಿದ್ದರೂ, ಅವರುಗಳಿಗೆ ಸಾಕಷ್ಟು ಪ್ರೋತ್ಸಾಹವಿರಲಿಲ್ಲ; ಲೇಖಕರಿಗಿದ್ದಷ್ಟು ಅವಕಾಶ ಲೇಖಕಿಯರಿಗೆ ಇರಲಿಲ್ಲ. ಈ ವೇಳೆಗೆ ಲೇಖಕಿಯರು ಕಥೆ, ಕವನ, ಕಾದಂಬರಿ, ಪ್ರಬಂಧ, ಹೀಗೆ ಎಲ್ಲ ಪ್ರಕಾರಗಳಲ್ಲೂ ಬರೆಯಲಾರಂಭಿಸಿದ್ದರು. ಅವರ ಕಾದಂಬರಿಗಳು, ಮಾಸಪತ್ರಿಕೆಗಳು ಮತ್ತು ವಾರಪತ್ರಿಕೆಗಳಲ್ಲಂತೂ ತುಂಬಾ ಪ್ರಸಿದ್ಧವಾಗಿದ್ದವು. ನಾನಾ ಅಭಿರುಚಿಯ ಓದುಗವಲಯಕ್ಕನುಗುಣವಾಗಿ ಬಹುತೆರನ ಬರವಣಿಗೆಗಳು ಪ್ರಸಿದ್ಧವಾಗಿದ್ದವು.

ಸಾಹಿತ್ಯಕ ಸಂಸ್ಥೆಗಳ ಸಭೆ ಸಮಾರಂಭಗಳಲ್ಲಿ ಲೇಖಕಿಯರು ಗೌಣ. ಏನೋ ಪ್ರಾತಿನಿಧಿಕವಾಗಿ ಒಬ್ಬಿಬ್ಬರಿಗೆ ಅವಕಾಶ ನೀಡಿದರೆ ಅದೇ ಹೆಚ್ಚು ಎನ್ನುವಂತೆ. ಲೇಖಕಿಯರು ಏನು ಬರೆಯುತ್ತಿದ್ದಾರೆ ಎಂದು ಓದುವವರೇ ಇರಲಿಲ್ಲ. ಅಡಿಗೆ ಮನೆ ಸಾಹಿತ್ಯ ಎಂಬ ಹಣೆಪಟ್ಟಿ ಬೇರೆ. ಇಂತಹ ಅಸಹನೀಯ ಪರಿಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ.ನಾರಾಯಣ ಅವರೊಂದಿಗೆ ಕೆಲವು ಲೇಖಕಿಯರು ಮಾತನಾಡಿ, ಪ್ರತಿಭಟನೆ ವ್ಯಕ್ತಪಡಿಸಿದರು.

ಶ್ರೀ ಜಿ.ನಾರಾಯಣ ಅವರು ದಿನಾಂಕ 30-11-1978ರಂದು ಕೆಲವು ಲೇಖಕಿಯರನ್ನು ತಮ್ಮ ಮನೆಗೆ ಆಹ್ವಾನಿಸಿ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಶ್ರೀಮತಿಯರಾದ ಟಿ.ಸುನಂದಮ್ಮ ಎಚ್.ಎಸ್. ಪಾರ್ವತಿ, ಚಿ.ನ.ಮಂಗಳಾ, ನಿರುಪಮಾ, ನಾಗಮಣಿ ಎಸ್.ರಾವ್, ಲೀಲಾದೇವಿ ಆರ್. ಪ್ರಸಾದ್, ಪದ್ಮಾ ಗುರುರಾಜ್, ಪ್ರಮೀಳಾ ನೇಸರ್ಗಿ, ಹೇಮಲತಾ ಮಹಿಷಿ, ಎ.ಪಂಕಜಾ, ಶಾಂತಾ ನಾಗರಾಜ್, ಉಷಾದೇವಿ, ಗೀತಾ ದೇಸಾಯಿ ಮುಂತಾದವರು ಸೇರಿದಂತೆ ಸುಮಾರು 30 ಲೇಖಕಿಯರು ಭಾಗವಹಿಸಿದ್ದರು. ಲೇಖಕಿಯರಿಗಾಗಿಯೇ ಪ್ರತ್ಯೇಕ ಸಂಘವೊಂದನ್ನು ಸ್ಥಾಪಿಸಿ ಕ಻ರ್ಯನ್ಮುಖರಾಗಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಇದರಿಂದ ಲೇಖಕಿಯರ ಸಂಘಟನೆ ಸಾಧ್ಯವಾಗಿ, ಒಟ್ಟಾರೆ ಚಿಂತನೆ ಮತ್ತು ಕಾರ್ಯಕ್ರಮಗಳಿಗೆ ಒಂದು ವೇದಿಕೆ ದೊರೆಯುವುದೆಂದು ಭಾವಿಸಲಾಯಿತು. ಈ ಸಂಘಕ್ಕೆ `ಕರ್ನಾಟಕ ಲೇಖಕಿಯರ ಸಂಘ' ಎಂದು ಹೆಸರಿಡಬೇಕೆಂದೂ ನಿರ್ಧರಿಸಲಾಯಿತು.

ಸಂಘದ ಮೊದಲ ಅಧ್ಯಕ್ಷರಾಗಿ ಶ್ರೀಮತಿ ಟಿ.ಸುನಂದಮ್ಮನವರನ್ನೂ, ಕಾರ್ಯದರ್ಶಿಯಾಗಿ ಶ್ರೀಮತಿ ಎಚ್.ಎಸ್. ಪಾರ್ವತಿಯವರನ್ನೂ ಆರಿಸಲಾಯಿತು. ಮೊದಲ ಉಪಾಧ್ಯಕ್ಷರುಗಳಾಗಿ ಲೀಲಾದೇವಿ ಆರ್. ಪ್ರಸಾದ್ ಮತ್ತು ಲಲಿತಾ ರಾಮಚಂದ್ರರಾವ್, ನಾಗಮಣಿ ಎಸ್.ರಾವ್ ಆಯ್ಕೆಯಾದರು. ಸಂಘಕ್ಕೆ ತನ್ನದೇ ಆದ ಸ್ಥಳ ದೊರಕುವವರೆಗೆ ಚಾಮರಾಜಪೇಟೆ, ಬಿಸಿಸಿ ಬ್ಯಾಂಕಿನಲ್ಲಿರುವ ಶ್ರೀ ಜಿ.ನಾರಾಯಣ ಅವರ `ವಿನೋದ' ಮುದ್ರಣಾಲಯದಲ್ಲಿಯೇ ಸಂಘದ ಕಾರ್ಯ ನಿರ್ವಹಿಸಿಕೊಳ್ಳಬಹುದೆಂದು ಅವರು ಅವಕಾಶ ಮಾಡಿಕೊಟ್ಟರು. ಅಷ್ಟೇ ಅಲ್ಲ, ಮೊದಲ ಖಜಾಂಚಿಯಾಗಿ ಆಯ್ಕೆಗೊಂಡಿದ್ದ ನಾಗಮಣಿ ಎಸ್.ರಾವ್ ಅವರ ಕೈಗೆ ಒಂದು ನೂರು ರೂಪಾಯಿಗಳನ್ನು ನೀಡಿ, ಆರಂಭಿಕ ಅಂಚೆ ವೆಚ್ಚಕ್ಕಾಗಿ ಬಳಸಿಕೊಳ್ಳಿ ಎಂದು ಉದಾರಭಾವದಿಂದ ತಿಳಿಸಿದರು. ಆಗಿನ ಸಂದರ್ಭದಲ್ಲಿ ಅದು ದೊಡ್ಡ ಮೊತ್ತವೇ. .

1979ನೇ ಜನವರಿ 26ರಂದು, ಭಾರತದ ಗಣರಾಜ್ಯೋತ್ಸವ ದಿನದಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಸಾಹಿತಿ ಡಾ. ವಿ.ಕೆ.ಗೋಕಾಕ್ ಅವರು ಕರ್ನಾಟಕ ಲೇಖಕಿಯರ ಸಂಘವನ್ನು ಉದ್ಘಾಟಿಸಿದರು. ಶ್ರೀ ಜಿ.ನಾರಾಯಣ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷರಾಗಿದ್ದ ಡಾ. ಹಂ.ಪ. ನಾಗರಾಜಯ್ಯನವರು ಮುಖ್ಯ ಅತಿಥಿಯಾಗಿದ್ದರು.

ಇನ್ನೂ ಸಂಘ ಕಣ್ಣು ಬಿಡುತ್ತಿರುವಾಗಲೇ ಪ್ರಸಿದ್ಧ ಹಾಸ್ಯ ಮಾತುಗಾರರಾದ ಶ್ರೀ ವೈ.ಎಂ.ಎನ್. ಮೂರ್ತಿಯವರು ತಾವು ಪ್ರತಿವರ್ಷ ಅಂಚೆ ವೆಚ್ಚದ ಖರ್ಚಿಗಾಗಿ ಒಂದು ನೂರು ರೂಪಾಯಿಗಳನ್ನು ನೀಡುವುದಾಗಿ ತಿಳಿಸಿ, ಹಲವಾರು ವರ್ಷಗಳ ಕಾಲ ಈ ನೆರವನ್ನು ಒದಗಿಸಿದರು. ಆರಂಭ ವರ್ಷಗಳಲ್ಲಿನ ಆ ನೆರವನ್ನು ಇಂದಿಗೂ ಲೇಖಕಿಯರ ಸಂಘ ಮರೆಯುವಂತಿಲ್ಲ. ಆಗಿನ ಕಾರ್ಯಕಾರಿ ಸಮಿತಿಯವರೆಲ್ಲ ತಲಾ ಒಂದು ನೂರು ರೂಪಾಯಿ ನೀಡಿ ಆಜೀವ ಸದಸ್ಯರಾಗಿದ್ದು ಸಂಘದ ಮೂಲ ಬಂಡವಾಳಕ್ಕೆ ಆಸ್ಪದವಾಯಿತು.

ಪ್ರತಿ ಬುಧವಾರ ಸಂಜೆ ಪದಾಧಿಕಾರಿಗಳು ಸಭೆ ಸೇರಿ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ನಿರ್ಧರಿಸಲಾಯಿತು. ಸಭೆಗಳಲ್ಲಿ ಯಾರಾದರೂ ಒಬ್ಬರು ಕಾಫಿ ಕೊಡಿಸುತ್ತಿದ್ದರು ಕಾರ್ಯಕಾರಿಣಿ ಸಭೆಗೆ ಬಂದು ಹೋಗುವ ಸದಸ್ಯರಿಗೆ ಸಾರಿಗೆ ಖರ್ಚು ಕೊಡುವುದು ಹಲವಾರು ವರ್ಷಗಳ ಕಾಲ ಸಾಧ್ಯವಾಗಿರಲಿಲ್ಲ. ಸ್ವತಂತ್ರ ಮುದ್ರಣಾಲಯದಲ್ಲೇ ಅಚ್ಚಾಗುತ್ತಿದ್ದ ಆಹ್ವಾನ ಪತ್ರಿಕೆಗಳ ಮೇಲೆ ಎಲ್ಲ ಸದಸ್ಯರ ಮತ್ತು ಆಹ್ವಾನಿತರ ಹೆಸರು, ವಿಳಾಸಗಳನ್ನು ಕಾರ್ಯಕಾರಿ ಸಮಿತಿಯ ಸದಸ್ಯರೇ ಬರೆಯುತ್ತಿದ್ದುದ್ದಲ್ಲದೆ ಸಾಧ್ಯವಾದಷ್ಟೂ ಅವುಗಳನ್ನು ತಲುಪಿಸುವ ಕಾರ್ಯವನ್ನೂ ನಿರ್ವಹಿಸುತ್ತಿದ್ದರು. ಸಂಘದ ಅಭಿಮಾನಿಯಾಗಿದ್ದ ಶ್ರೀ. ಆರ್.ಹೆಚ್.ರಾಜು ಅವರು ಓಡಾಟದ ಕೆಲಸದಲ್ಲಿ ಮತ್ತು ದುಂಡಗಿನ ಅಕ್ಷರದಲ್ಲಿ ಹಲವಾರು ಬರಹದ ಪ್ರತಿಗಳನ್ನು ತೆಗೆದುಕೊಡುವುದರಲ್ಲಿ ತುಂಬ ನೆರವಾಗುತ್ತಿದ್ದರು.

ಕರ್ನಾಟಕ ಲೇಖಕಿಯರ ಸಂಘ ತನ್ನ ನಡಾವಳಿಗಾಗಿ ಒಂದು ಅಂಗರಚನೆ ರೂಪಿಸಿಕೊಂಡಿತು. ಇದು ಕಾಲಾನುಕ್ರಮದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ಮಾರ್ಪಡುಗೊಂಡಿದೆ. ಯಾವುದೇ ರೀತಿಯ ಭೇದಭಾವವಿಲ್ಲದೆ, ಪ್ರತಿಭೆ, ಅರ್ಹತೆ, ದಕ್ಷತೆಗಳಿಗೆ ಮಾತ್ರ ಪ್ರಾಧಾನ್ಯ ನೀಡುವ ಸಂಘದ ಧೋರಣೆಯಿಂದಾಗಿ ಸಂಘದ ಅಡಿಪಾಯ ಭದ್ರವಾಗಿದ್ದು, ಈ ದೀರ್ಘಾವಧಿಯಲ್ಲಿ ಸಂಘ ಸುಸ್ಪಷ್ಟವಾಗಿ ಬೆಳೆದು ಬಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.

1979ರಿಂದ 1999ರ ವರೆಗಿನ ಮೊದಲ 20 ವರ್ಷಗಳ ಅವಧಿಯಲ್ಲಿ ಸಂಘದ ಸೂತ್ರ ಹಿಡಿದು ಮುನ್ನಡೆಸಿದವರು ಅಧ್ಯಕ್ಷರುಗಳಾದ ಟಿ.ಸುನಂದಮ್ಮ, ಎಚ್.ಎಸ್.ಪಾರ್ವತಿ, ಹೇಮಲತಾ ಮಹಿಷಿ ಮತ್ತು ನಾಗಮಣಿ ಎಸ್. ರಾವ್. ಇವರುಗಳೆಲ್ಲ ಸಂಘದ ಸ್ಥಾಪಕ ಸದಸ್ಯರೂ ಆಗಿದ್ದು, ಸಂಘದ ಧ್ಯೇಯ ಧೋರಣೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತಂದವರು. ಇವರ ಕಾಲದಲ್ಲಿ ಸಂಘ ದೃಢವಾದ ಹೆಜ್ಜೆಗಳನ್ನಿಡುತ್ತಾ ಸಾರಸ್ವತ ಲೋಕದಲ್ಲಿ ತನ್ನ ಛಾಪು ಮೂಡಿಸಿತು. ಆ ಭದ್ರ ಬುನಾದಿಯ ಆಧಾರದ ಮೇಲೆ ಇಂದಿಗೂ ಸಂಘ ಅಚ್ಚುಕಟ್ಟಾಗಿ ನಡೆದುಕೊಂಡು ಬಂದಿರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಲೇಖಕಿಯರ ಸಂಘಟನೆ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳಿಂದ, ಸಾಹಿತ್ಯ ವಲಯದ ಎಲ್ಲ ಜನರ ಗಮನ ಸೆಳೆಯಿತು. ಬೇರೆ ಯಾವುದೇ ಭಾಷೆಯ ಲೇಖಕಿಯರ ವಲಯದಲ್ಲೂ ಕಂಡು ಬರದಂತಹ ವಿಶಿಷ್ಟ, ವ್ಯವಸ್ಥಿತ ಸಂಘಟನೆಯಾಗಿ ಗುರುತಿಸಲ್ಪಟ್ಟಿತು. ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಸಂಘದ ಸದಸ್ಯರ ಸಂಖ್ಯೆ, ಈಗ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ರಾಜ್ಯದ ಹೊರಜಿಲ್ಲೆಗಳಿಂದ ಮಾತ್ರವಲ್ಲದೆ, ಮದ್ರಾಸ್, ಮುಂಬೈನಲ್ಲಿರುವ ಕೆಲವು ಲೇಖಕಿಯರೂ ಹೊರ ರಾಜ್ಯಗಳಿಂದ ಸಂಘದ ಸದಸ್ಯೆಯರಾಗಿದ್ದಾರೆ. ಸಂಘಕ್ಕೆ ಈಗ ತನ್ನದೇ ಆದ ಸ್ವಂತ ಕಟ್ಟಡವಿದೆ. ಹಲವಾರು ಪುಸ್ತಕ ಪ್ರಕಟಣೆಗಳೂ, ದತ್ತಿ ನಿಧಿ ಪ್ರಶಸ್ತಿ ನೀಡಿಕೆಯೂ ಸಾಧ್ಯವಾಗಿದೆ.

ಕಾರ್ಯಕ್ರಮಗಳು:

ಮೊದಲ ಕಾರ್ಯಕ್ರಮವೆಂದರೆ ಸಂಘದ ಉದ್ಘಾಟನೆ. ಈಗಾಗಲೇ ತಿಳಿಸಿರುವಂತೆ 1979ರ ಜನವರಿ 26ರಂದು ಗಣರಾಜ್ಯ ದಿನೋತ್ಸವದಂದು ನಡೆಯಿತು. ಅನಂತರ ದುಡ್ಡು ಕಾಸಿನ ಅಭಾವವಿದ್ದುದರಿಂದ ಬಡಾವಣೆ ಕಾರ್ಯಕ್ರಮ ರೂಪಿಸಿಕೊಂಡು ವಿವಿಧ ಬಡಾವಣೆಗಳಲ್ಲಿ ಅಲ್ಲಿನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಸದಸ್ಯರನ್ನು, ನೋಂದಾಯಿಸುವ ಪ್ರಯತ್ನಕ್ಕೆ ಒತ್ತು ಕೊಡಲಾಯಿತು. `ಕಥಾಲೋಕ' ಮತ್ತು `ಅರಳುವ ಮೊಗ್ಗು' ಎಂಬ ಎರಡು ಪುಸ್ತಕಗಳನ್ನು ಸಂಘ ಪ್ರಕಟಿಸಿತು.

ಸುನಂದಮ್ಮನವರ ಅಧ್ಯಕ್ಷತೆಯ ಎರಡು ವರ್ಷಗಳ ಅವಧಿ ಪೂರೈಸಿದ ನಂತರ ಎಚ್.ಎಸ್. ಪಾರ್ವತಿಯವರು ಸಂಘದ ಅಧ್ಯಕ್ಷರಾದರು. ಲೀಲಾದೇವಿ ಆರ್. ಪ್ರಸಾದ್ ಅವರೊಂದಿಗೆ ಹೇಮಲತಾ ಮಹಿಷಿಯವರು ಉಪಾಧ್ಯಕ್ಷೆಯಾದರು. ನಾಗಮಣಿ ಎಸ್.ರಾವ್ ಖಜಾಂಚಿ ಸ್ಥಾನದಲ್ಲಿ ಮುಂದುವರಿದರು. ಕಾರ್ಯಕಾರಿ ಸಮಿತಿ ಸದಸ್ಯರೂ ನೇಮಕಗೊಂಡರು. ಯಥಾಪ್ರಕಾರ ಸಂಘದ ಕಾರ್ಯಕಲಾಪಗಳು ವಿನೋದ ಕಾರ್ಯಾಲಯದಲ್ಲಿಯೇ ಮುಂದುವರಿದವು. ಈ ವೇಳೆಗೆ ಸಂಘ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದು ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಜನರನ್ನು ಆಕರ್ಷಿಸಬೇಕೆಂಬ ಹುರುಪು, ಆಸೆಯಿಂದ ಸಂಘ ಹೆಜ್ಜೆ ಇಟ್ಟಿತು.

ಮೊದಲ ಬಾರಿಗೆ, ಸಾಕಷ್ಟು ಪ್ರಯತ್ನಪಟ್ಟು 1982ರ ಫೆಬ್ರವರಿ 27 ಮತ್ತು 28ರಂದು ವಾರ್ಷಿಕೋತ್ಸವದ ಕಾರ್ಯಕ್ರಮಗಳು ನಡೆದವು. 27ರಂದು ಸಂಜೆ, ಅಂದಿನ ರಾಜ್ಯ ವಿಧಾನ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಬಸವರಾಜೇಶ್ವರಿ ಅವರು ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉದ್ಘಾಟಿಸಿದರು. ಶ್ರೀಮತಿ ಶಾಂತಾ ನಾಗರಾಜ್ ತುಂಬಾ ಶ್ರಮವಹಿಸಿ, ಲೇಖಕಿಯರ ಪುಸ್ತಕ ಸಂಗ್ರಹಿಸಿ ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆ ಗಳಿಸಿತು. ಹಿರಿಯ ಲೇಖಕಿಯರಾದ ಎಂ.ಕೆ. ಇಂದಿರಾ ಮತ್ತು ಟಿ.ಸುನಂದಮ್ಮನವರನ್ನು ಸನ್ಮಾನಿಸಲಾಯಿತು.

ಈ ವೇಳೆಗೆ ಸಂಘ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ರಾಜ್ಯದ ಇತರ ಸ್ಥಳಗಳಲ್ಲೂ ಕಾರ್ಯಕ್ರಮಗಳನ್ನು ನಡೆಸಲು ಆರಂಭಿಸಿದ್ದು ಒಂದು ವಿಶೇಷ ಹೆಜ್ಜೆಯಾಯಿತು. ಬೆಳಗಾವಿಯಲ್ಲಿ ಅಲ್ಲಿನ ಭಗಿನಿ ಮಂಡಲದ ಸಹಯೋಗದೊಂದಿಗೆ, ಶಿವಮೊಗ್ಗದಲ್ಲಿ ಅಲ್ಲಿನ ಪ್ರತಿಭಾ ರಂಗದ ನೆರವಿನೊಂದಿಗೆ, ಗುಡಿಬಂಡೆಯಲ್ಲಿ ಮೈತ್ರಿ ಸಂಗಮ ಸಂಸ್ಥೆಯೊಂದಿಗೆ ಕಲೇಸಂ (ಕರ್ನಾಟಕ ಲೇಖಕಿಯರ ಸಂಘದ ಸಂಕ್ಷಿಪ್ತ ರೂಪ) ಒಳ್ಳೆಯ ಸಾಹಿತ್ಯಕ ಮತ್ತು ಮಹಿಳಾ ಅಭಿವೃದ್ಧಿಪರ ವಿಷಯಗಳ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿತು.

ಈ ಅವಧಿಯ ಒಂದು ಮುಖ್ಯ ಕಾರ್ಯಕ್ರಮವೆಂದರೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಅಂದಿನ ದಿನಗಳಲ್ಲಿ ನಡೆಸುತ್ತಿದ್ದ `ಸಂಸ್ಕೃತಿ ಸುದಿನ' ಕಾರ್ಯಕ್ರಮದ ಪ್ರಯೋಜನವನ್ನು ಕರ್ನಾಟಕ ಲೇಖಕಿಯರ ಸಂಘ ಪಡೆದುಕೊಂಡಿದ್ದು!

ಕಲೇಸಂ `ಸಂಸ್ಕೃತಿ-ಸುದಿನ' ಕಾರ್ಯಕ್ರಮವನ್ನು ನಡೆಸಿಕೊಡಲು ಸಾಧ್ಯವೇ ಎಂದು ಕೇವಲ ಐದಾರು ದಿನಗಳಿರುವಾಗ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಂಘವನ್ನು ಕೇಳಿತು. ನಾನೂ ಪಾರ್ವತಿ - ಇಬ್ಬರೂ ಆಗ ಬೆಂಗಳೂರು ಆಕಾಶವಾಣಿಯ ಉದ್ಯೋಗಿಗಳಾಗಿದ್ದುರಿಂದ ಬಿಡುವಿನ ವೇಳೆಯನ್ನೆಲ್ಲ ಸಂಘದ ಓಡಾಟ, ಮಾತುಕತೆಯಲ್ಲೇ ಕಳೆಯುತ್ತಿದ್ದೆವು. ಅಂದು ಮಧ್ಯಾಹ್ನ ನಾವಿಬ್ಬರೂ ಚರ್ಚಿಸಿ, ಸಂಘಕ್ಕೆ ಸುಮಾರು ಎರಡು ಸಾವಿರ ರೂಪಾಯಿಗಳು ದೊರಕುವುದರಿಂದ ಈ ಕಾರ್ಯಕ್ರಮ ಒಪ್ಪಿಕೊಂಡು ಮಾಡಿಬಿಡುವುದು. ಹೇಗೂ ಇತರ ಎಲ್ಲ ವ್ಯವಸ್ಥೆಗಳ ಜವಾಬ್ದಾರಿಯನ್ನು ನಿರ್ದೇಶನಾಲಯ ನೋಡಿಕೊಳ್ಳುತ್ತದೆ ಎಂದು ಯೋಚಿಸಿ, ದಿಢೀರ್ ರಸಮಂಜರಿ ಕಾರ್ಯಕ್ರಮವೊಂದನ್ನು ರೂಪಿಸಿದೆವು. ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಮ್ಮ ಗುರುತಿನ ಕಲಾವಿದರನ್ನೇ ಆರಿಸಿ, ಅವರನ್ನು ಭೇಟಿ ಮಾಡಿ ಒಪ್ಪಿಸಿ ಯಶಸ್ವಿಯಾಗಿ ಒಂದು ವಿಶಿಷ್ಟ ಕಾರ್ಯಕ್ರಮ ನಿರ್ವಹಿಸಿಯೇ ಬಿಟ್ಟೆವು. ಮಹಿಳಾ ನಾಟಕ ಸಂಸ್ಥೆ ಸ್ಥಾಪಿಸಿ ವೀರ ಪುರುಷರ ಪಾತ್ರ ನಿರ್ವಹಣೆಗೆ ಹೆಸರಾಗಿದ್ದ ರಂಗ ಕಲಾವಿದೆ ಆರ್. ನಾಗರತ್ನಮ್ಮ ಕಂಸನ ಪಾತ್ರದಲ್ಲಿ ವಿಜೃಂಭಿಸಿದರೆ, ರಂಗ ಹಾಗೂ ಚಲನಚಿತ್ರ ಕಲಾವಿದೆಯಾಗಿ ಹೆಸರು ಮಾಡಿ, ಆ ವೇಳೆಗೆ ನಮ್ಮೊಡನೆ ಆಕಾಶವಾಣಿಯ ಕಲಾವಿದೆಯಾಗಿದ್ದ ಎಸ್.ಕೆ. ಪದ್ಮಾದೇವಿಯವರು, "ಇನ್ನು ಹುಬ್ಬಳಿಯಾವ ಯಾಕೆ ಬರಲಿಲ್ಲ?" ಎಂಬ ದ.ರಾ.ಬೇಂದ್ರೆಯವರ ಕವನದ ಹಿನ್ನೆಲೆಯಲ್ಲಿ ನರ್ತಿಸಿ ಸಭಿಕರನ್ನು ರಂಜಿಸಿದರು. ಜೊತೆಗೆ ಖ್ಯಾತ ಕಲಾವಿದರುಗಳು ಇತರ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸರ್ಕಾರಿ ವಲಯದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಘಕ್ಕೆ ಇದರಿಂದಾಗಿ ವಿಶೇಷ ಮಾನ್ಯತೆ ದೊರೆಯಿತು.''

ಎಂದು ಅಂದಿನ ನೆನಪು-ಸಾಧನೆಯ ಹಾದಿಯನ್ನು ಮೆಲುಕು ಹಾಕುತ್ತಾರೆ ನಾಗಮಣಿ ಎಸ್.ರಾವ್.ಅವರು

ಮುಂದುವರಿದ ಉತ್ಸಾಹ:

ಸಂಘದ ಐದನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೆಳವಣಿಗೆಯ ಇನ್ನೊಂದು ಹೆಜ್ಜೆಯಾಗಿ, ತುಮಕೂರಿನ ಸುಲೋಚನಾದೇವಿ ಆರಾಧ್ಯ ಅವರು ಸಿದ್ಧಪಡಿಸಿದ "ಸೋ ಎನ್ನಿರೇ ಸೋಬಾನೆ ಎನ್ನಿರೊ" ಎಂಬ ಕ್ಯಾಸೆಟ್ ಬಿಡುಗಡೆ ಮಾಡಲಾಯಿತು.

ಹಿರಿಯ ಲೇಖಕಿ ಜಯಲಕ್ಷ್ಮಿ ಶ್ರೀನಿವಾಸನ್, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಲೀಲಾದೇವಿ ಆರ್ ಪ್ರಸಾದ್ ಮತ್ತು ಬೆಂಗಳೂರು ನಗರ ಕಾರ್ಪೋರೇಷನ್ನಿನ ಉಪಮೇಯರ್ ಆಗಿ ಆಯ್ಕೆಗೊಂಡಿದ್ದ ಲಲಿತಾ ರಾಜ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಲೇಖಕಿಯರ ಸಂಘದ ಮುನ್ನಡೆಯಲ್ಲಿ 1985ನೇ ಸಾಲಿಗೆ ವಿಶೇಷ ಮಾನ್ಯತೆಯಿದೆ. ಮೊದಲ ಸಮ್ಮೇಳನ ನಡೆದದ್ದು, ಸಂಘ ಬಾಡಿಗೆಯನ್ನು ಕೊಟ್ಟು ಒಂದು ರೂಮಿನ ಪ್ರತ್ಯೇಕ ಕಛೇರಿ ಹೊಂದಲು ಸಾಧ್ಯವಾದದ್ದು, ಸಂಘದ ತ್ರೈಮಾಸಿಕ ಪತ್ರಿಕೆ "ಲೇಖಕಿ" ಶುರುವಾದದ್ದು ಮತ್ತು ಇಂದಿಗೂ ತುಂಬ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿರುವ ತುಮಕೂರಿನ ಸಂಘದ ಶಾಖೆ ಆರಂಭವಾದದ್ದು ಈ ವರ್ಷದಲ್ಲಿಯೇ.

1985ರ ಮಾರ್ಚಿ 11 ಮತ್ತು 12ರಂದು ಕರ್ನಾಟಕ ಲೇಖಕಿಯರ ಸಂಘದ ಮೊದಲ ರಾಜ್ಯಮಟ್ಟದ ಸಮ್ಮೇಳನ, ಖ್ಯಾತ ಲೇಖಕಿ ಮತ್ತು ಪಾರ್ಲಿಮೆಂಟ್ ಸದಸ್ಯೆ ಡಾ|| ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ ಸೊಗಸಾಗಿ ನಡೆಯಿತು. ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ರಾಜ್ಯ ಸರ್ಕಾರ ಸಮ್ಮೇಳನದ ಖರ್ಚಿಗಾಗಿ 20 ಸಾವಿರ ರೂಪಾಯಿಗಳನ್ನು ನೀಡಿದ್ದರಿಂದ ಹಣಕಾಸಿನ ತೊಂದರೆಯಾಗಲಿಲ್ಲ. ಹೊರ ಊರುಗಳಿಂದ ಬಂದಿದ್ದ ಪ್ರತಿನಿಧಿಗಳಿಗೆಲ್ಲ ವಸತಿ, ಊಟ ಉಪಚಾರದ ವ್ಯವಸ್ಥೆಯಾಗಿತ್ತು. ಾಗಿತ್ತು.

ಸಮ್ಮೇಳನದ ನಂತರ ಸರ್ಕಾರದ ನೆರವು, ಸ್ಮರಣ ಸಂಚಿಕೆಯ ಜಾಹೀರಾತು ಪ್ರತಿನಿಧಿ ಶುಲ್ಕ ಮುಂತಾದ ಮೂಲಗಳಿಂದ ಬಂದ ಹಣದಲ್ಲಿ ಸ್ವಲ್ಪ ಉಳಿತಾಯವೂ ಆಗಿತ್ತು. ತನ್ನದೇ ಗೂಡಿಗೆ...

ಸ್ವತಂತ್ರವಾದ ಒಂದು ಕಛೇರಿ ಜಾಗದ ಅವಶ್ಯಕತೆ ತೀವ್ರವಾಯಿತು. ಉಪಾಧ್ಯಕ್ಷೆ ಕೆ.ಟಿ. ಬನಶಂಕರಮ್ಮನವರ ಪ್ರಯತ್ನದ ಫಲವಾಗಿ ಚಾಮರಾಜಪೇಟೆ 2ನೇ ಅಡ್ಡರಸ್ತೆ, ಮೂರನೇ ಮುಖ್ಯರಸ್ತೆಯ ಮೂಲೆಯಲ್ಲಿದ್ದ ಶ್ರೀ ಕೃಷ್ಣಮೂರ್ತಿಯವರ ಮನೆಯ ಮೇಲಿದ್ದ ಒಂದು ಚಿಕ್ಕ ಕೊಠಡಿಯನ್ನು ಬಾಡಿಗೆಗೆ ಪಡೆದು, ಕ್ರಮೇಣ ಕುರ್ಚಿ, ಮೇಜು ಬೀರುಗಳನ್ನು ಕೊಂಡು ರೂಮಿನ ಮುಂದೆ ಒಂದು ನಾಮಫಲಕ ತಗುಲಿ ಹಾಕಿ ಸಂಭ್ರಮಿಸಲಾಯಿತು.

ಆರು ವರ್ಷಗಳ ಕಾಲ ಜಿ.ನಾರಾಯಣ ಅವರ ಔದಾರ್ಯದಲ್ಲಿ ಕಾರ್ಯ ನಿರ್ಹಿಸಿದ್ದ ಕಲೇಸಂ ತನ್ನದೇ ಆದ ಜಾಗಕ್ಕೆ ಬಂತು. ಇದುವರೆಗೂ ವಾರ್ಷಿಕ ಸರ್ವ ಸದಸ್ಯರ ಸಭೆಗಳೆಲ್ಲ ವಿನೋದ ಕಾರ್ಯಾಲಯಕ್ಕೆ ಹತ್ತಿರವಾಗಿದ್ದ ಶ್ರೀ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತಿತ್ತು. ಹೊಸ ಸ್ಥಳಕ್ಕೆ ಬಂದನಂತರ ಕೆ.ಟಿ. ಬನಶಂಕರಮ್ಮನವರು ಮುಖ್ಯಸ್ಥರಾಗಿದ್ದ ಅಶೋಕ ಶಿಶುವಿಹಾರದ ಸಭಾಂಗಣದಲ್ಲಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಹಲವಾರು ಸಾಧಾರಣ ಕಾರ್ಯಕ್ರಮಗಳು ನಡೆದವು.

ಸಂಘದ ಮುಖವಾಣಿಯಾಗಿ `ಲೇಖಕಿ' ಎಂಬ ಹೆಸರಿನ ತ್ರೈಮಾಸಿಕ ಪತ್ರಿಕೆ ಇದೇ ವರ್ಷ ಅಕ್ಟೋಬರ್ 23ರಂದು ಆರಂಭವಾಯಿತು. ಕನ್ನಡ ಸಂಸ್ಕೃತಿ ನಿರ್ದೇಶಶನಾಲಯದ ನಿರ್ದೇಶಕರಾಗಿದ್ದ ಶ್ರೀ ಅ.ರಾ. ಚಂದ್ರಹಾಸಗುಪ್ತ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಎಚ್.ಎಸ್. ಪಾರ್ವತಿ ಸಂಪಾದಕಿಯಾದರು. ಕವಯತ್ರಿ ಉಷಾದೇವಿ ಸಹಸಂಪಾದಕಿಯಾದರು..

ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಶಾಖೆ ಇದೇ ವರ್ಷ ಅಂದರೆ 1985ರ ಡಿಸೆಂಬರ್ 22 ರಂದು ಆರಂಭವಾಯಿತು. ಉತ್ಸಾಹಿ ಲೇಖಕಿ ಬಾ.ಹ. ರಮಾಕುಮಾರಿ ಶಾಖೆಯ ಮೊದಲ ಅಧ್ಯಕ್ಷರು. ಇಂದಿಗೂ ಈ ಶಾಖೆ ತುಂಬ ಚಟುವಟಿಕೆಯಿಂದ ಕಾರ್ಯಶೀಲವಾಗಿದೆ.

ಈ ಮಧ್ಯೆ ಅಮೇರಿಕಾದಿಂದ ಬಂದಿದ್ದ ಕನ್ನಡಾಭಿಮಾನಿ `ಅಮೆರಿಕನ್ನಡ' ಪತ್ರಿಕೆ ಸಂಪಾದಕ ಡಾ. ಹರಿಹರೇಶ್ವರ ಅವರು ಸಂಘಕ್ಕೆ ನೀಡಿದ ನೂರು ಡಾಲರ್ ವಿನಿಮಯವಾಗಿ ಬಂದ ಎರಡು ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ದತ್ತಿಯಾಗಿಟ್ಟು, ವಿದ್ಯಾಥರ್ಿಗಳ ಲೇಖನ ಸ್ಪರ್ಧೆ ವಿಜೇತರಿಗೆ ಒಂದು ಬಹುಮಾನ ನೀಡುವ ವ್ಯವಸ್ಥೆ ಮಾಡಲಾಯಿತು. ಬಹುಶಃ ಸಂಘದ ಪ್ರಥಮ ದತ್ತಿ ನಿಧಿ ಇದು.

ಸಂಘ ಇದೇ ವರ್ಷ ಫೆಬ್ರವರಿ 15ರಿಂದ ಸಾಹಿತ್ಯ ಶಿಬಿರವೊಂದನ್ನು ಒಂದು ವಾರ ಕಾಲ ಪ್ರಪ್ರಥಮವಾಗಿ ನಡೆಸಿತು. ಹಲವಾರು ಪ್ರಖ್ಯಾತರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಬೆಂಗಳೂರಿನ ಅಶೋಕ ಶಿಶುವಿಹಾರದಲ್ಲಿ ನಡೆದ ಈ ಶಿಬಿರಕ್ಕೆ ಪ್ರೊ. ಎಲ್.ಎಸ್. ಶೇಷಗಿರಿರಾವ್ ಮತ್ತು ಕೆ.ಎಸ್. ನಿರ್ಮಲಾದೇವಿಯವರು ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು.

ಹೀಗೆ ಸಂಘ ಎಲ್ಲ ರೀತಿಯಲ್ಲೂ ಸದೃಢವಾಗಿ ಬೆಳೆಯಲಾರಂಭಿಸಿತ್ತು. ಸಂಘದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತ್ತು. ಸರ್ಕಾರದಿಂದಲೂ ಪ್ರತಿವರ್ಷ ಸಹಾಯಧನ ದೊರಕುವಂತಾಯಿತು. ಕೆಲವು ಪುಸ್ತಕಗಳೂ ಪ್ರಕಟಣೆಯಾಗಿದ್ದವು. ಲೇಖಕಿಯರಿಗಾಗಿಯೇ ಒಂದು ಪ್ರತ್ಯೇಕ ಸಂಘದ ಅಗತ್ಯವಿದೆಯೇ ಎಂಬ ಸಂದೇಹವನ್ನು ಆರಂಭ ಕಾಲದಲ್ಲಿ ವ್ಯಕ್ತಪಡಿಸಿದ್ದ ಅನುಪಮಾ ನಿರಂಜನ, ಚಿ.ನಾ. ಮಂಗಳಾ ಮತ್ತಿತರ ಕೆಲವು ಹಿರಿಯ ಲೇಖಕಿಯರು ತಮ್ಮ ದ್ವಂದ್ವದಿಂದ ಹೊರಬಂದು, ಸಂಘದ ಪ್ರತ್ಯೇಕ ಅಸ್ತಿತ್ವವನ್ನು ಒಪ್ಪಿಕೊಂಡು ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ನೆರವಾಗುತ್ತಿದ್ದರು.

ಶ್ರೀಮತಿ ಹೇಮಲತಾ ಮಹಿಷಿಯವರು ಸಂಘದ ಅಧ್ಯಕ್ಷರಾಗುವ ವೇಳೆಗೆ, ಪ್ರಪಂಚದೆಲ್ಲೆಡೆ ಸ್ತ್ರೀವಾದಿ ಚಳವಳಿಯ ಬೀಸುಗಾಳಿ ಬಲವಾಗಿತ್ತು. ಲೇಖಕಿಯರ ಸಂಘಟನೆಯನ್ನು ಬಲಪಡಿಸುವುದರೊಂದಿಗೆ, ಲೇಖಕಿಯರ ಸಂಘಕ್ಕೆ ತನ್ನದೇ ಆದ ಅನನ್ಯತೆ ತಂದುಕೊಡುವತ್ತ ಅವರು ಗಮನ ನೀಡಿದರು. ಹಲವಾರು ಪ್ರಮುಖ ಲೇಖಕಿಯರೂ ಆ ವೇಳೆಗೆ ಸಂಘದ ಸದಸ್ಯರಾಗಿದ್ದು ಈ ಕಾರ್ಯದಲ್ಲಿ ಅವರಿಗೆ ಸಕ್ರಿಯ ನೆರವು ನೀಡಿದರು. ನಿರ್ಲಕ್ಷಿಸಲ್ಪಟ್ಟಿದ್ದ ಹಲವಾರು ಹಿರಿಯ ಲೇಖಕಿಯರ ಬಗ್ಗೆ ಸಂಶೋಧನೆ ನಡೆಸಿ ಪುಸ್ತಕಗಳನ್ನು ಪ್ರಕಟಿಸುವ ಸ್ತುತ್ಯಕಾರ್ಯ ಈ ಅವಧಿಯಲ್ಲಿ ನಡೆಯಿತು. ಬೆಳೆಗೆರೆ ಜಾನಕಮ್ಮ, ಆರ್. ಕಲ್ಯಾಣಮ್ಮ, ಶ್ಯಾಮಲಾದೇವಿ ಬೆಳಗಾಂವ್ಕರ್ ಅವರುಗಳ ಬದುಕು ಹಾಗೂ ಸಾಹಿತ್ಯ ಕುರಿತು ಮಹತ್ವದ ಪುಸ್ತಕಗಳು ಹೊರಬಂದವು. `ಸ್ತ್ರೀವಾದಿ ಪ್ರವೇಶಿಕೆ' ಸ್ತ್ರೀವಾದದ ಬಗ್ಗೆ, ಅದರ ತಾತ್ವಿಕ ನೆಲೆಗಳ ಬಗ್ಗೆ ಪರಿಚಯ ಮಾಡಿಕೊಡುವ ಸಂಘದ ಮಹತ್ವಪೂರ್ಣ ಪ್ರಕಟಣೆಯಾಗಿ ಹೊರಬಂದಿತು.

ಖ್ಯಾತ ಲೇಖಕಿ ಎಂ.ಕೆ. ಇಂದಿರಾ ಅವರಿಗೆ 75 ವರ್ಷ ಸಂದ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಕುರಿತಂತೆ `ಸುರಗಿ' ಎಂಬ ಹೆಸರಿನ ಅಭಿನಂದನಾ ಗ್ರಂಥ ಪ್ರಕಟಿಸಿ, 50 ಸಾವಿರ ರೂಪಾಯಿಗಳ ಹಮ್ಮಿಣಿಯೊಂದಿಗೆ ಸುಂದರ ಸಮಾರಂಭವೊಂದರಲ್ಲಿ ಕೊಡಮಾಡಲಾಯಿತು. 1993ರ ನವಂಬರ್ 22ರಂದು ಹಿರಿಯ ಸಾಹಿತಿ ಟಿ. ಸುನಂದಮ್ಮನವರಿಗೆ 76ರ ಅಭಿನಂದನಾ ಸಮಾರಂಭವೇರ್ಪಡಿಸಿ ಹರಿಹರದ ಆಶಾ ಪಬ್ಲಿಕೇಷನ್ ಪ್ರಕಟಿಸಿದ್ದ ಟಿ.ಸುನಂದಮ್ಮನವರ ಸಮಗ್ರ ಹಾಸ್ಯ ಸಾಹಿತ್ಯದ ಬೃಹತ್ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.

ರಾಜ್ಯದ ವಿವಿಧ ಸ್ಥಳಗಳಲ್ಲಿ ಹಲವಾರು ಕಾರ್ಯಕ್ರಮಗಳು ನಡೆದುದಷ್ಟೇ ಅಲ್ಲ, ಮಧ್ಯಪ್ರದೇಶದ ಇಂದೂರಿನ ದೇವಿ ಅಹಲ್ಯಾಬಾಯಿ ವಿಶ್ವವಿದ್ಯಾನಿಲಯದ ಉದ್ಯೋಗಿಯಾಗಿದ್ದ ಸಂಘದ ಸದಸ್ಯೆ ಬಿ.ವೈ. ಲಲಿತಾಂಬ ಅವರ ಶ್ರಮದಿಂದ 1995ರ ಫೆಬ್ರವರಿ 26ರಂದು ಕರ್ನಾಟಕ ಲೇಖಕಿಯರ ಸಂಘ ಹಾಗೂ ಇಂದೂರಿನ ಕನ್ನಡ ಸಂಘದ ಸಹಯೋಗದಿಂದ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಸಂಘದ ಲೇಖಕಿಯರು ಭಾಗವಹಿಸಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಟ್ಟರು.

ಕರ್ನಾಟಕ ಲೇಖಕಿಯರ ಸಂಘದ ಎರಡು ಪ್ರಮುಖ ದತ್ತಿ ನಿಧಿಗಳು ಸ್ಥಾಪನೆಗೊಂಡದ್ದೂ ಈ ಅವಧಿಯಲ್ಲಿಯೇ. ಮೊದಮೊದಲು ದೂರವೇ ಇದ್ದ ಡಾ. ಅನುಪಮಾ ನಿರಂಜನ ಅವರು ಹತ್ತಿರವಾಗಿ ಉತ್ಸಾಹದಿಂದ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಅಷ್ಟೇ ಅಲ್ಲ, ಅವರು ನಿಧನ ಹೊಂದಿದಾಗ ಅವರಿಚ್ಛೆಯಂತೆ 50 ಸಾವಿರ ರೂಪಾಯಿಗಳ ನಿಧಿಯನ್ನು ಅವರ ಮಕ್ಕಳು ಸಂಘಕ್ಕೆ ನೀಡಿದರು. ಅವರ ಅಭಿಮಾನಿ ದಾನಿಗಳಿಂದ ಮತ್ತಷ್ಟು ಹಣಕೂಡಿಸಿ ಒಂದು ಲಕ್ಷ ರೂಪಾಯಿಗಳ ದತ್ತಿ ನಿಧಿಯೊಂದನ್ನು ಸ್ಥಾಪಿಸಲಾಯಿತು.

1992ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು 10 ಸಾವಿರ ರೂಪಾಯಿಗಳನ್ನು ಹಿರಿಯ ಲೇಖಕಿ ಎಚ್.ವಿ.ಸಾವಿತ್ರಮ್ಮನವರಿಗೆ ನೀಡಿದಾಗ, ಅವರು ಅದರ ಜೊತೆಗೆ ಮತ್ತೆ ಹತ್ತು ಸಾವಿರ ರೂಪಾಯಿ ಸೇರಿಸಿ ತಮ್ಮ ಹೆಸರಿನ ದತ್ತಿ ನಿಧಿಯಾಗಿ ಸಂಘಕ್ಕೆ ನೀಡಿದರು. ಈಗ ಅವರ ಮಕ್ಕಳ ಕೊಡುಗೆಯಿಂದಾಗಿ ಈ ದತ್ತಿ ನಿಧಿ ದೊಡ್ಡದಾಗಿ ಬೆಳೆದಿದೆ. ಸಂಘದ ಮೊದಲ ವರ್ಷಗಳಲ್ಲಿ ಕಾರ್ಯದರ್ಶಿಯಾಗಿದ್ದ ಲೇಖಕಿ ಗೀತಾ ದೇಸಾಯಿ ಅವರ ಹೆಸರಿನಲ್ಲಿ ಅವರ ಮನೆಯವರೂ ದತ್ತಿ ನಿಧಿಯೊಂದನ್ನು ಈ ಅವಧಿಯಲ್ಲೇ ಕೊಡಮಾಡಿದರು.

ಸಂಘ ಸತ್ವಶಾಲಿಯಾಗಿ ಬೆಳೆಯತೊಡಗಿತು. ಸದಸ್ಯರ ಸಂಖ್ಯೆಯು ಐದುನೂರು ದಾಟಿತ್ತು.

ಸಂಖ್ಯೆ ದೊಡ್ಡದಾದಂತೆ ಹಲವಾರು ರೀತಿಯ ಸಮಸ್ಯೆಗಳೂ ಏಳುತ್ತಿದ್ದವು. ಇವುಗಳನ್ನೆಲ್ಲ ಪರಿಹರಿಸಿಕೊಳ್ಳುತ್ತಾ ಸಂಘ ತನ್ನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ, ಮುನ್ನಡೆಯುತ್ತಿದ್ದುದು ಸಂತಸದ ಸಮಾಧಾನದ ಸಂಗತಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಮೊದಲ ಚುನಾವಣೆ:

1995ರ ಆಗಸ್ಟ್ನಲ್ಲಿ ನಡೆದ ಸಂಘದ ಸರ್ವಸದಸ್ಯರ ಸಭೆಯಲ್ಲಿ ಬಹುಮತದಿಂದ ನಾಗಮಣಿ ಎಸ್.ರಾವ್ ಅಧ್ಯಕ್ಷರಾಗಿ ಆಯ್ಕೆಯಾದರು. ಆರಂಭದ ವರ್ಷಗಳಲ್ಲಿ ಚುನಾವಣೆಯ ಜಂಜಾಟ ಬೇಡ ಅಧ್ಯಕ್ಷರು ಸರ್ವಾನುಮತದಿಂದ ಆಯ್ಕೆಯಾಗಲಿ ಎಂಬ ಅಭಿಪ್ರಾಯವಿದ್ದುದರಿಂದ ಇದುವರೆಗಿನ ಮೂರೂ ಅಧ್ಯಕ್ಷರನ್ನು ಒಮ್ಮತದಿಂದ ಸಂಘ ಆರಿಸಿತ್ತು. ಆದರೆ ಈ ವರ್ಷ ಆಯ್ಕೆ ಇನ್ನೇನು ಅವಿರೋಧವಾಗಿ ಆಯಿತು ಎಂದು ಭಾವಿಸುವಷ್ಟರಲ್ಲಿ ಹಿರಿಯ ಲೇಖಕಿ ಎ. ಪಂಕಜಾ ಅವರ ಹೆಸರೂ ಸೂಚಿಸಲ್ಪಟ್ಟಿತು. ಎಂದಾದರೂ ಒಂದು ದಿನ ಈ ಸಂದರ್ಭ ಎದುರಿಸಬೇಕು. ಇಂದಿನಿಂದಲೇ ಮತದಾನದ ಆಯ್ಕೆ ನಡೆದೇ ಬಿಡಲಿ ಎಂದು ಸಭೆ ಅಭಿಪ್ರಾಯಪಟ್ಟಿತು. ಚುನಾವಣಾಧಿಕಾರಿಯಾಗಿದ್ದ ಹೇಮಲತಾ ಮಹಿಷಿ ತುಂಬ ಶಿಸ್ತಿನಿಂದ ಈ ಅನೌಪಚಾರಿಕ ಚುನಾವಣೆ ನಡೆಸಿದರು.

ಇದು ಸಂಘಕ್ಕೊಂದು ಪಾಠವಾಯಿತು. ಸಂಘ ಸರಿದಾರಿಯಲ್ಲಿ ಮುನ್ನಡೆಯುತ್ತಿದ್ದು ಹದಿನಾರು ವರ್ಷಗಳ ಸಾರ್ಥಕ ಅಸ್ತಿತ್ವ ಪೂರೈಸಿ ಬೆಳೆಯುತ್ತಿರುವ ಈ ಸಂಸ್ಥೆಯ ಹೊಸ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಘದ ಅಂಗ ರಚನೆಯನ್ನು ತಿದ್ದುಪಡಿ ಮಾಡಬೇಕಾಗಿದೆ ಎಂದರಿತ ನಾಗಮಣಿ ಎಸ್ ರಾವ್ ಅವರ ಆದ್ಯತೆ ಅದಕ್ಕೆ ಬದ್ಧವಾಗಿತ್ತು. ಆ ಕೆಲಸವನ್ನು ಕ್ರಮಬದ್ಧವಾಗಿ ಮಾಡಲಾಯಿತು. ತಿದ್ದುಪಡಿಗಳಲ್ಲಿ ಮುಖ್ಯವಾದುವೆಂದರೆ ಸಂಘದ ಅಧ್ಯಕ್ಷರ ಅಧಿಕಾರಾವಧಿಯನ್ನು 2 ವರ್ಷದಿಂದ 3 ವರ್ಷಕ್ಕೆ ಹೆಚ್ಚಿಸಿ, ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಯತಕ್ಕದ್ದು; ಎರಡು ಅವಧಿಗಿಂತ ಹೆಚ್ಚಾಗಿ ಸತತವಾಗಿ ಒಬ್ಬರೇ ಅಧ್ಯಕ್ಷರಾಗುವಂತಿಲ್ಲ ಮುಂತಾದ ಅಂಶಗಳನ್ನು ನಿರ್ದಿಷ್ಟಗೊಳಿಸಲಾಯಿತು.

ಸಂಘದಲ್ಲಿ ವಿವಿಧ ಸ್ತರದ ಲೇಖಕಿಯರಿದ್ದರು. ಕೆಲವರನ್ನು ಬೆಳೆಸಬೇಕಾದ ಅಗತ್ಯವಿದ್ದರೆ, ಕೆಲವು ಹಿರಿಯ ಲೇಖಕಿಯರ ಅನುಭವವನ್ನು ಎಲ್ಲರೂ ಅರಿಯಬೇಕಾಗಿತ್ತು. ಪರಸ್ಪರ ಸಮಾಲೋಚನೆಗೆ ವೇದಿಕೆ ಕಲ್ಪಿಸಬೇಕಿತ್ತು. ಈ ಎಲ್ಲ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿತ್ತು.

ಇವುಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ಪ್ರಸ್ತಾಪಿಸುವುದಾದರೆ-

`ಲೇಖ-ಲೋಕ' ಎಂಬ ಹೆಸರಿನಲ್ಲಿ ಇಂದು ಸಾಹಿತ್ಯ ವಲಯದಲ್ಲಿ ಪ್ರಸಿದ್ಧನಾಗಿರುವ ಪುಸ್ತಕಗಳ ಬಗ್ಗೆ ಯೋಜನೆ. ಮಹಿಳಾ ಸಾಹಿತ್ಯ ಚರಿತ್ರೆ ರಚನೆಯಾಗಬೇಕು; ಮಹಿಳೆಯರ ಸಾಹಿತ್ಯ ಕಾಣಿಕೆ ಸೂಕ್ತವಾಗಿ ದಾಖಲಾಗಬೇಕು ಎಂಬುದು ಸಂಘದ ಬಹುದೊಡ್ಡ ಆಸೆ. ಈ ದೃಷ್ಟಿಯಿಂದ ಹಿಂದಿನ ತಲೆಮಾರಿನ ಕೆಲವು ಪ್ರಮುಖ ಬರಹಗಾರ್ತಿಯರ ಬಗ್ಗೆ ಸಾಕಷ್ಟು ಪರಿಶ್ರಮ ವಹಿಸಿ ಸಂಘ ಕೆಲವು ಪುಸ್ತಕಗಳನ್ನು ಪ್ರಕಟಿಸಿತು.

ಇದರ ಜೊತೆಗೆ,
ಪ್ರಸ್ತುತ ನಮ್ಮೊಡನಿರುವ ಹಿರಿಯ ಪ್ರಬುದ್ಧ ಲೇಖಕಿಯರಿಂದ ಅವರ ಬದುಕು, ಸಾಹಿತ್ಯ ಪ್ರೇರಣೆ, ಎದುರಿಸಿದ ಅಡ್ಡಿ ಆತಂಕಗಳು, ಇತಿಮಿತಿಗಳು ಮುಂತಾದ ಅಂಶಗಳ ಬಗ್ಗೆ ಅವರಿಂದಲೇ ನೇರವಾಗಿ ಕೇಳಿ ದಾಖಲಿಸುವ ಕಾರ್ಯಕ್ರಮವೊಂದನ್ನು ರೂಪಿಸಿ ಕಾರ್ಯಗತ ಮಾಡಲಾಯಿತು. ಮಹಿಳೆಯರು ಯಾವುದೇ ಹಿಂಜರಿಕೆಯಿಲ್ಲದೆ ಮುಕ್ತ ವಾತಾವರಣದಲ್ಲಿ ಮಾತನಾಡಲಿ ಎಂಬ ಉದ್ದೇಶದಿಂದ ಮಹಿಳೆಯರಿಗೆ ಮಾತ್ರ ಅವಕಾಶವಿದ್ದ ಒಳಾವರಣ ಕಾರ್ಯಕ್ರಮವಾಗಿ ಇದನ್ನು ನಡೆಸಲಾಯಿತು. ಅವರ ಮಾತುಗಳನ್ನು ಧ್ವನಿ ಮುದ್ರಿಸಿಕೊಂಡು, ನಂತರ ಅದನ್ನು ಬರಹ ರೂಪಕ್ಕಿಳಿಸಿ ಲೇಖ-ಲೋಕ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು.

ಸಾರಸ್ವತ ಲೋಕದಿಂದ ಈ ಕಾರ್ಯಕ್ರಮಗಳು ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಹೆಸರಿನ ಮಾಲೆಯಲ್ಲಿ ಸಂಘ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿ 30ಕ್ಕೂ ಹೆಚ್ಚು ಹಿರಿಯ ಲೇಖಕಿಯರ ಪರಿಚಯ ಮಾಡಿಕೊಟ್ಟಿದೆ.

ಕಲೇಸಂ ಆಶ್ರಯದಲ್ಲಿ ನಾಲ್ಕನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ಮಂಗಳೂರಿನಲ್ಲಿ 1996ರ ನವಂಬರ್ ತಿಂಗಳಲ್ಲಿ ಎಚ್.ಎಸ್. ಪಾರ್ವತಿಯರ ಸಮ್ಮೇಳನಾಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಲೇಖಕಿಯರು ಪಕ್ವತೆಯತ್ತ ಸಾಗಿದ್ದಾರೆ ಎಂದು ಬಹುಪಾಲು ಎಲ್ಲ ಪತ್ರಿಕೆಗಳೂ ಮೆಚ್ಚಿ ಬರೆದವು. ಪ್ರತಿಭಾವಂತ ಮಹಿಳೆಯರ ಸಾಲು ಸಾಲೇ ವೇದಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಭಾಂಗಣದಲ್ಲಿ ವಿಜೃಂಭಿಸಿದುವು.

ಈ ಅವಧಿಯ ಇನ್ನೊಂದು ಬಹುಮುಖ್ಯ ಕಾರ್ಯಕ್ರಮವೆಂದರೆ `ಸುವರ್ಣೋತ್ಸವ ಕಾಳಜಿ'. ಈ ವರ್ಷವಿಡೀ ಕಲೇಸಂ ಯಾವುದೇ ಕಾರ್ಯಕ್ರಮ ಮಾಡಿದರೂ, ಸಮೀಪದಲ್ಲಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನೂ ಕರೆದು ಅಥವಾ ಅವರಿದ್ದಲ್ಲಿಗೆ ತೆರಳಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕ್ರಾಂತಿ ಸ್ಮರಣೆ - ಗೌರವಾರ್ಪಣೆ ಎಂದು 24.8.97 ರಂದು ಆರಂಭವಾದ ಕಾರ್ಯಕ್ರಮದಲ್ಲಿ ಗಾಂಧೀವಾದಿ ಜಿ. ನಾರಾಯಣ, ಹಿರಿಯ ಲೇಖಕಿ ಮಲ್ಲಿಕಾ ಕಡಿದಾಳ್ ಮಂಜಪ್ಪ ಅವರಿಗೆ ಗೌರವಾರ್ಪಣೆ, ಹಂಪೆ ಉತ್ಸವದ ಅಂಗವಾಗಿ, ಅಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಚಳುವಳಿ ವಿಚಾರಗೋಷ್ಠಿಯಲ್ಲಿ ಶ್ರೀಮತಿ ಕುಸುಮಾಪತಿ ಶಂಕರರಾವ್ ದೇಶಪಾಂಡೆ ಮತ್ತು ಶಂಕರರಾವ್ ದೇಶಪಾಂಡೆ ಅವರಿಗೆ ಚಿತ್ರದುರ್ಗದಲ್ಲಿ 23.3.98ರಂದು 90ರ ವಯೋವೃದ್ಧೆ ಸ್ವಾತಂತ್ರ್ಯ ಹೋರಾಟಗಾರ್ತಿ ಮಂಗಮ್ಮ ರಾಮರೆಡ್ಡಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಮತ್ತಷ್ಟು ದತ್ತಿನಿಧಿಗಳು:

ಸಂಘದ ಮೊದಲ ಅನುಪಮಾ ಪ್ರಶಸ್ತಿ ಪಡೆದಿದ್ದ ಎಚ್.ವಿ. ಸಾವಿತ್ರಮ್ಮನವರ ಪತಿ, ಎಚ್.ವಿ. ನಾರಾಯಣರಾವ್ ಅವರು 1996 ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದು ಈಗಾಗಲೇ ಆರಂಭವಾಗಿದ್ದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿಗೆ ಮತ್ತೆ 20 ಸಾವಿರ ರೂಪಾಯಿಗಳ ದೇಣಿಗೆ ನೀಡಿದರು. ಶಾಂತಾದೇವಿ ಮಾಳವಾಡ ಅವರು ಉಪನ್ಯಾಸ ದತ್ತಿ ನಿಧಿ ಆರಂಭಿಸಲು ಐದು ಸಾವಿರ ರೂಪಾಯಿ ದೇಣಿಗೆ ನೀಡಿದರು. ಇನ್ನೂ ಕೆಲವು ದತ್ತಿ ನಿಧಿಗಳೂ ಈ ಕಾಲದಲ್ಲಿ ಆರಂಭವಾದವು. ಉದಯೋನ್ಮುಖ ಕವಯತ್ರಿಯರಿಗೆ ಬಹುಮಾನ ನೀಡಲು ಗುಡಿಬಂಡೆ ಪೂರ್ಣಿಮಾ ಅವರು ಪ್ರತಿವರ್ಷ ಒಂದು ಸಾವಿರ ರೂಪಾಯಿಗಳ ಕೊಡುಗೆ ಪ್ರಕಟಿಸಿದರು (ಈಗ ಅದನ್ನು ಅವರು ಹೆಚ್ಚಿಸಿದ್ದಾರೆ). ಸಂಘದ ಸದಸ್ಯೆ ರತ್ನ ರಂಗನಾಥ್ ಅವರು ತಮ್ಮ ತಂದೆ ಕರ್ನಾಟಕದ ಸುಪ್ರಸಿದ್ಧ ಗಮಕ ವಿದ್ವಾಂಸರಾದ ದಿವಂಗದ ಕೃಷ್ಣಗಿರಿ ಕೃಷ್ಣರಾಯರ ಹೆಸರಿನಲ್ಲಿ ಗಮಕ ಕಾರ್ಯಕ್ರಮಕ್ಕಾಗಿ ಐದು ಸಾವಿರ ರೂಪಾಯಿಗಳ ದತ್ತಿ ನಿಧಿಯನ್ನೂ, ಸಂಘದ ಹಿರಿಯ ಸದಸ್ಯೆ ಶ್ರೀಮತಿ ಲಕ್ಷ್ಮೀದೇವಿಯವರು ಪ್ರತಿ ವರ್ಷ ಉಪನ್ಯಾಸ ಕಾರ್ಯಕ್ರಮವೊಂದನ್ನು ನಡೆಸಲು 3 ಸಾವಿರ ರೂಪಾಯಿಗಳ ದತ್ತಿ ನಿಧಿಯನ್ನು ನೀಡಿದರು. ಈ ಎರಡೂ ದತ್ತಿ ನಿಧಿಗಳ ಸಂಯುಕ್ತ ಕಾರ್ಯಕ್ರಮ ಮೊಟ್ಟ ಮೊದಲ ಬಾರಿಗೆ "ಕಾವ್ಯ ವಿಹಾರ - ಗಮಕ ಸುಧಾ" ಎಂಬ ಹೆಸರಿನಡಿ 1999ರ ಮೇ 2 ರಂದು ನಡೆಯಿತು.

ಸಂಘಕ್ಕೆ ಸ್ವಂತ ಕಟ್ಟಡ

ಸಾಧನೆಯೇ ಸರಿ . . .
ಸಂಘಕ್ಕಾಗಿ ಒಂದು ಸ್ವಂತ ಕಟ್ಟಡ ಪಡೆದುಕೊಂಡದ್ದು ಈ ಅವಧಿಯ, ಅಷ್ಟೇಕೆ, ಕರ್ನಾಟಕ ಲೇಖಕಿಯರ ಸಂಘದ ಇತಿಹಾಸದಲ್ಲೇ ಒಂದು ಬಹುಮುಖ್ಯವಾದ ಸಾಧನೆ ಎನ್ನಬಹುದು. ಸಂಘಕ್ಕಾಗಿ ಒಂದು ಸ್ವಂತ ಕಟ್ಟಡ ಹೊಂದಬೇಕೆಂಬ ಆಶಯ ಬಹುಕಾಲದಿಂದ ನಮ್ಮೆಲ್ಲರಲ್ಲೂ ಇದ್ದರೂ ಅದು ಕಾರ್ಯಗತವಾಗಿರಲಿಲ್ಲ. ಈ ಕನಸನ್ನು ನನಸಾಗಿಸಲು ಶತ ಪ್ರಯತ್ನಪಟ್ಟರೂ ಏನೂ ಪ್ರಯೋಜನವಾಗಲಿಲ್ಲ. ಆದರೂ ಪ್ರಯತ್ನ ಬಿಡಲಿಲ್ಲ. ಖಾಸಗಿ ನಿವೇಶನ ಹಾಗೂ ಕಟ್ಟಡವೇನಾದರೂ ಸಂಘದ ಇತಿಮಿತಿಯಲ್ಲಿ ದೊರಕಬಹುದೇ ಎಂಬ ಪ್ರಯತ್ನ ಆರಂಭಿಸಿ, ಮುಂಗಡ ನೀಡಲಾದರೂ ಸ್ವಲ್ಪ ಹಣವಿರಬೇಕೆಂದು ಕಟ್ಟಡ ನಿಧಿಯೊಂದನ್ನು ಆರಂಭಿಸಿದೆವು. ಕೊಡುಗೆ ಸಂಘದ ಸದಸ್ಯರಿಂದಲೇ ಆರಂಭವಾಗಲಿ ಎಂಬ ಇಚ್ಛೆಯಿಂದ ಸದಸ್ಯೆಯರೆಲ್ಲರೂ ಒಂದು ಸಾವಿರ ರೂಪಾಯಿಗಳನ್ನು ಈ ನಿಧಿಗೆ ನೀಡಬೇಕೆಂದು ಮನವಿ ಮಾಡಿದೆ. ಸಂಘದ ಸದಸ್ಯೆಯರು ಉದಾರ ಮನಸ್ಸಿನಿಂದ ನೆರವಾದರು. ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಓಡಾಡಿ ಸಂಘ ಸಂಸ್ಥೆಗಳು, ದಾನಿಗಳು ಮತ್ತು ಸರ್ಕಾರದಿಂದ ಒಂದಿಷ್ಟು ಹಣ ಸಂಗ್ರಹಿಸಿದರು.

ಅಂತೂ ಕೊನೆಗೆ ಚಾಮರಾಜಪೇಟೆಯ 2ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆಯ ಕೆನರಾ ಬ್ಯಾಂಕಿನ ಕಟ್ಟಡದ ಎರಡನೇ ಮಹಡಿಯ ಮೇಲಿರುವ ಇಂದಿನ ಸಂಘದ ಕಛೇರಿ ಕಟ್ಟಡವನ್ನು ಖರೀದಿಸುವುದು ಸಾಧ್ಯವಾಯಿತು. ಉದ್ಘಾಟನಾ ಸಮಾರಂಭ 8.8.1999ರಂದು ಸಂಘದ ಸದಸ್ಯೆಯರ ಸಡಗರ, ಸಂಭ್ರಮ, ಸಂತೋಷದ ಜೊತೆಗೆ ನಾಡಿನ ಹಿರಿಯರೆಲ್ಲ ಬಂದು ಶುಭ ಹಾರೈಸಿದರು. ಸಂಘದ ಈ ಕಛೇರಿ ತುಂಬ ಉಪಯುಕ್ತವಾಗಿದ್ದು, ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ಮುಂದೆಯೂ ಸಂಘ ಯಶೋಪಥದಲ್ಲಿ ಸಾಗಿ, ಲವಲವಿಕೆಯಿಂದ ಕಾರ್ಯನಿರ್ವಹಿಸಲು ದಕ್ಷ, ಪ್ರತಿಭಾವಂತ ಲೇಖಕಿಯರು ಕರ್ನಾಟಕ ಲೇಖಕಿಯರ ಸಂಘದತ್ತ ಬರುತ್ತಿದ್ದಾರೆ.

ಅಡುಗೆಮನೆ ಸಾಹಿತ್ಯ ಎಂದು ಮೂಗುಮುರಿದವರಿಗೆ ಅಡುಗೆಮನೆಯೇ ವಿಶ್ವದರ್ಶನದ ಕಿಟಕಿ ಎಂದು ಮನದಟ್ಟು ಮಾಡಿಸಿದೆ ಕಲೇಸಂ.

ಬೆರಳೆಣಿಕೆಯ ಲೇಖಕಿಯರಿಂದ ಆರಂಭವಾದ ಸಂಘ ಆರಂಭಿಕ ಅಡೆತಡೆಗಳನ್ನು ದಾಟಿ ತನ್ನ ಗುರಿಯತ್ತ ಮುನ್ನಡೆದಿರುವುದು ಸಂತೋಷದ ಸಂಗತಿ. ಆಗೊಮ್ಮೆ ಈಗೊಮ್ಮೆ ನಡಿಗೆ ನಿಧಾನವಾಯಿತು ಎಂದೆನ್ನಿಸಿದರೂ ಮರು ಹೆಜ್ಜೆಗೆ ಸುಧಾರಿಸಿಕೊಂಡು ಮನ್ನಡೆ ಸಾಧಿಸುವತ್ತ ದೃಷ್ಟಿ ನೆಟ್ಟು ನಡೆಯುತ್ತಿರುವುದು ಮಹಿಳಾಕುಲಕ್ಕೇ ಒಂದು ಹೆಮ್ಮೆ.

ಸಂಘವು ಇಷ್ಟು ವರ್ಷಕಾಲ ಜೀವಂತವಾಗಿದ್ದುಕೊಂಡು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿರುವುದು ಪ್ರತಿಯೊಬ್ಬರೂ ಹೆಮ್ಮೆ ಪಡಬೇಕಾದ ಸಂಗತಿ.

ಈ ವರ್ಷಗಳಲ್ಲಿ ಸಂಘವು ಮಾಡಿರುವ ಸಾಧನೆಗಳು ಯಾವುದೇ ವಿಶ್ವವಿದ್ಯಾಲಯ ಅಥವಾ ಅಕಾಡೆಮಿಗಳ ಕೆಲಸಕ್ಕೆ ಸರಿಮಿಗಿಲಾಗಿವೆ ಎಂದರೆ ಉತ್ಪ್ರೇಕ್ಷೆಯಲ್ಲ. ಅನುದಾನವೇ ನಿಂತು ಹೋಗಿದ್ದ ಕಾಲದಲ್ಲೂ ಸಂಘವು ತನ್ನ ಕಾರ್ಯಕ್ರಮಗಳ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದಲೇ ಅನೇಕ ಉತ್ತಮ ಕೆಲಸಗಳನ್ನು ಮಾಡಿದೆ. ಮನಸ್ಸು ಮಾಡಿದರೆ, ಮೂಲ ಆಶಯಗಳಿಗೆ ಬದ್ಧವಾಗಿದ್ದರೆ, ಟೀಕೆಗಳಿಗೆ ಎದೆಗುಂದದಿದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದನ್ನು ಸಂಘದ ಈವರೆಗಿನ ಸಾಧನೆಗಳು ನಿಚ್ಚಳವಾಗಿ ತೋರಿಸಿವೆ.

ಪ್ರತಿಯೊಬ್ಬ ಅಧ್ಯಕ್ಷರೂ ತಮ್ಮ ತಮ್ಮ ಅವಧಿಯಲ್ಲಿ ಸಂಘದ ಆಯಾ ಕಾಲದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಘದ ಬೆಳವಣಿಗೆಗಾಗಿ ನಿಸ್ಪೃಹವಾಗಿ ಶ್ರಮಿಸಿದ್ದಾರೆ. ಪ್ರತಿಯೊಬ್ಬರ ಅವಧಿಯಲ್ಲಿಯೂ ಕೆಲವಾದರೂ ಹೊಸ ಹೊಸ ಕಾರ್ಯಕ್ರಮಗಳು ಕೂಡಿಕೊಳ್ಳುತ್ತಾ ಬಂದಿವೆ. ಸಂಘವು ಮೂಲ ಅಶಯಗಳಿಂದ ದೂರವಾಗಬಾರದು ಮತ್ತು ಸಂಘದ ಸ್ಥಾಪನೆಗೆ ಪ್ರೇರಕರೂ ಕಾರಣಕರ್ತರೂ ಆದ ಜಿ.ನಾರಾಯಣ ಅವರ ಆಶಯದಂತೆ ಲೇಖಕಿಯರು ಕೇವಲ ಕಥೆ ಕಾದಂಬರಿ ಸಾಹಿತ್ಯ ರಚನೆಗೆ ಸೀಮಿತವಾಗದೆ ಗ್ರಾಮಾಂತರ ಮಹಿಳೆಯರ ನೋವು ನಲಿವುಗಳಿಗೆ ಸ್ಪಂದಿಸಿ ಅವರ ಶ್ರೇಯೋಭಿವೃದ್ಧಿಯ ದಿಸೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕು, ಗ್ರಾಮೀಣ ಪ್ರದೇಶಗಳ ಲೇಖಕಿಯರಿಗೆ ಹೆಚ್ಚಿನ ಅದ್ಯತೆ ನೀಡಬೇಕು ಮತ್ತು ಲೇಖಕಿಯರು ಸಮಕಾಲೀನ ವಿದ್ಯಮಾನಗಳಿಗೆ ಅನುಗುಣವಾಗಿ ತಮ್ಮ ಬರವಣಿಗೆಯನ್ನು ಬೆಳೆಸಿಕೊಳ್ಳಬೇಕು ಇವೇ ಮೊದಲಾದ ಗುರಿಗಳೊಂದಿಗೆ ಸಂಘ ಅಂದಿನಿಂದ ಇಂದಿನವರೆವಿಗೂ ನಡೆದು ಬಂದಿದೆ. ಅದಕ್ಕೆ ಪೂರಕವಾಗಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮಗಿರುವ ಸಮಯ, ಹಣದ ಮಿತಿಯಲ್ಲೇ ಮಹತ್ತನ್ನು ಹಂತಹಂತವಾಗಿ ಸಾಧಿಸುವ ನಿಟ್ಟಿನಲ್ಲಿ ನಡೆದಿದೆ.