ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

¸ÀA¥ÁzÀQÃAiÀÄ


ಅಧ್ಯಕ್ಷರ ನುಡಿ

ಆತ್ಮೀಯ ಲೇಖಕಿಯರೆ,
ಎಲ್ಲರಿಗೂ ಅಖಿಲ ಕರ್ನಾಟಕ 7ನೆಯ ಸಾಹಿತ್ಯ ಸಮ್ಮೇಳನಕ್ಕೆ ಪ್ರೀತಿಯ ಸ್ವಾಗತ. ಸಮ್ಮೇಳನಾಧ್ಯಕ್ಷರಾಗಿರುವ ನಾಡಿನ ಹಿರಿಯ ಸಾಹಿತಿ ನಾಡೋಜ ಸಾರಾ ಅಬೂಬಕರ್ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಕರೆಗೆ ಸ್ಪಂದಿಸಿ ದೂರದ ಒಡಿಶಾದಿಂದ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಲು ಆಗಮಿಸಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಪ್ರತಿಭಾರೇಯವರಿಗೆ ಕಲೇಸಂ ಆಭಾರಿಯಾಗಿದೆ. ಕಲೇಸಂನ ಮಾಜಿ ಅಧ್ಯಕ್ಷರಾದ ಉಷಾ ಪಿ. ರೈಯವರ ಅವಧಿಯಲ್ಲಿ ಜರುಗಿದ 5ನೇ ಸಮ್ಮೇಳನದ ನಂತರ ಬೆಂಗಳೂರಿನಲ್ಲಿ ಮತ್ತೆ ಸಮ್ಮೇಳನ ನಡೆಯುತ್ತಿರುವುದು ನಮಗೆಲ್ಲ ಸಂತೋಷದ ಸಂಗತಿ. ಈ ಸಮ್ಮೇಳನದಲ್ಲಿ ಹಿರಿಯ, ಕಿರಿಯ ಲೇಖಕಿಯರು ಒಗ್ಗೂಡಿ ವಿವಿಧ ವಿಚಾರಗಳ ಕುರಿತು ಡಾ. ನಿರುಪಮಾ ವೇದಿಕೆಯಲ್ಲಿ ಚಿಂತನ - ಮಂಥನ ನಡೆಸಲಿದ್ದಾರೆ. ಲೇಖಕಿಯರ ಬರವಣಿಗೆಗೆ ಮತ್ತು ಅವರ ದಿಕ್ಸೂಚಿಯನ್ನು ಈ ಸಮ್ಮೇಳನ ನೀಡಬಲ್ಲುದು. ಈ ಸಮ್ಮೇಳನದ ವೈಶಿಷ್ಟ್ಯವೆಂದರೆ ಕಲೇಸಂನ ಬಹುವರ್ಷಗಳ ಕನಸು ವೆಬ್ಸೈಟ್ ಉದ್ಘಾಟನೆಯಾಗುತ್ತಿರುವುದು. ಲೇಖಕಿಯರ ವಿವರಗಳನ್ನೊಳಗೊಂಡ `ಮಾಹಿತಿಕೋಶ' ಈ ಸಂದರ್ಭದಲ್ಲಿ ಲೋಕಾರ್ಪಣೆಯಾಗುತ್ತಿದೆ. ಮೂರ್ನಾಲ್ಕು ವರ್ಷಗಳಿಂದ ಸಂಪಾದಕ ಮಂಡಳಿ ಲೇಖಕಿಯರ ಮಾಹಿತಿಕೋಶಕ್ಕೆ ಮಾಹಿತಿ ಕಲೆ ಹಾಕುವಲ್ಲಿ ಶ್ರಮವಹಿಸಿದೆ. ಇಲ್ಲಿಯವರೆಗೂ ಯಾವ ವಿಶ್ವವಿದ್ಯಾಲಯವಾಗಲೀ, ಅಕಾಡೆಮಿಯಾಗಲೀ, ಪ್ರಾಧಿಕಾರವಾಗಲೀ ಲೇಖಕಿಯರ ಮಾಹಿತಿಕೋಶವನ್ನು ಪ್ರಕಟಿಸಿಲ್ಲ. ಇಂತಹದೊಂದು ಗುರುತರವಾದ ಜವಾಬ್ದಾರಿಯನ್ನು ಕಲೇಸಂನ ನಿಕಟಪೂರ್ವ ಅಧ್ಯಕ್ಷರಾದ ಡಾ. ಕೆ.ಆರ್. ಸಂಧ್ಯಾರೆಡ್ಡಿಯವರು ವಹಿಸಿಕೊಂಡು ಸಂಪೂರ್ಣಗೊಳಿಸಿದ್ದಾರೆ. ಅವರಿಗೂ ಕಲೇಸಂ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

1979ರಲ್ಲಿ ಹಿರಿಯ ಲೇಖಕಿಯರಿಂದ ಆರಂಭವಾದ ಕರ್ನಾಟಕ ಲೇಖಕಿಯರ ಸಂಘ ನಂತರದ ದಿನಗಳಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತ ಹೆಮ್ಮರವಾಗಿ ಬೆಳೆಯುತ್ತಿದೆ. ಪ್ರಸ್ತುತ ಸಾವಿರಕ್ಕೂ ಅಧಿಕ ಸದಸ್ಯೆಯರನ್ನು ಹೊಂದಿರುವ ಸಂಘ ಬೀದರ್, ತುಮಕೂರು, ಶಿವಮೊಗ್ಗ ಜಿಲ್ಲಾ ಶಾಖೆಗಳನ್ನು ಹೊಂದಿದೆ. ಲೇಖಕಿಯರ ಸರ್ವತೋಮುಖ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಲೇಸಂನ ಹಿಂದಿನ ಅಧ್ಯಕ್ಷರುಗಳೆಲ್ಲರೂ ಅವಿರತವಾಗಿ ಶ್ರಮಿಸಿ ಸಂಘದ ಉನ್ನತಿಗೆ ಕಾರಣಕರ್ತರಾಗಿದ್ದಾರೆ. ಡಾ. ಕೆ.ಆರ್. ಸಂಧ್ಯಾರೆಡ್ಡಿ ಅವರ ಅಧ್ಯಕ್ಷೀಯ ಅವಧಿಯಲ್ಲಿ 2007ರಲ್ಲಿ ಮಂಡ್ಯದಲ್ಲಿ ನಡೆದ ಸಮ್ಮೇಳನದ ನಂತರ 6 ವರ್ಷಗಳ ಬಳಿಕ 7ನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಿಂದೆ ಉಷಾ.ಪಿ. ರೈ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2003ರಲ್ಲಿ ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿಯೇ ಸಮ್ಮೇಳನ ನಡೆದಿತ್ತು. ಸಮ್ಮೇಳನದ ಆರ್ಥಿಕ ನೆರವಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಕೇಳಿದ್ದೆವು. ಕರ್ನಾಟಕ ಸರ್ಕಾರದ ಏಕೈಕ ಮಹಿಳಾ ಮಂತ್ರಿಯಾಗಿರುವ ಮಾನ್ಯ ಉಮಾಶ್ರೀಯವರು ಕಲೇಸಂಗೆ ಇಲಾಖೆಯಿಂದ ಧನ ಸಹಾಯ ನೀಡಲು ತುಂಬ ಮುತುವರ್ಜಿ ವಹಿಸಿದ್ದಾರೆ. ಅವರಿಗೆ ಕಲೇಸಂನ ಕೃತಜ್ಞತೆಗಳು.

ಕಲೇಸಂನ ಹಿಂದಿನ ಅಧ್ಯಕ್ಷರುಗಳಿಗೆ, ಹಿರಿಯ ಲೇಖಕಿಯರಿಗೆ ಈ ಸಮ್ಮೇಳನದಲ್ಲಿ ಸನ್ಮಾನಿಸಲಾಗುತ್ತಿದೆ. ಸಮ್ಮೇಳನದಲ್ಲಿ ನಿರ್ಣಯಗಳನ್ನು ಕೈಗೊಳ್ಳುವಾಗ ಕೆಲವು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಗುತ್ತದೆ. ಲೇಖಕಿಯರಿಗೆ ಮಾತ್ರವಲ್ಲದೇ ನಾಡಿನ ನೊಂದ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೂ ನ್ಯಾಯ ದೊರಕಿಸಿ ಕೊಡುವುದರಲ್ಲಿ ಕಲೇಸಂ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. `ವಿಶೇಷ ಲೇಖಕಿ' ಸ್ಮರಣ ಸಂಚಿಕೆಗೆ ಸಂದೇಶವನ್ನು ನೀಡಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಹೃತ್ಪೂರ್ವಕ ಧನ್ಯವಾದಗಳು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀಯರು, ಮೂಲಭೂತ ಸೌಕರ್ಯ, ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರಾದ ಸಂತೋಷಲಾಡ್ ರವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರುರವರು ಸಂದೇಶ ನೀಡಿ ಸಮ್ಮೇಳನದ ಯಶಸ್ಸಿಗೆ ಹಾರೈಸಿದ್ದಾರೆ. ವಿಶೇಷ ಸಂಚಿಕೆಗೆ ಲೇಖನ, ಕವಿತೆ, ಕಥೆ ಬರೆದುಕೊಟ್ಟ ಎಲ್ಲ ಲೇಖಕಿಯರಿಗೆ ಧನ್ಯವಾದಗಳು. ಹಾಗೆಯೇ ಸ್ಮರಣ ಸಂಚಿಕೆಗೆ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಕಲೇಸಂ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಸಮ್ಮೇಳನದ ತಯಾರಿಗೆ ಸದಾ ನನ್ನೊಂದಿಗೆ ಸಹಕರಿಸಿದ ಪದಾಧಿಕಾರಿಗಳಾದ ಆಶಾ ಹೆಗಡೆ, ವನಮಾಲಾ ಸಂಪನ್ನಕುಮಾರ್, ಎನ್. ಪ್ರಭಾ, ಡಾ. ಗೀತಾಕೃಷ್ಣಮೂರ್ತಿಯವರಿಗೆ ಧನ್ಯವಾದಗಳು. ಹಾಗೆಯೇ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರಿಗೂ ಕೃತಜ್ಞತೆಗಳು. ವೆಬ್ಸೈಟ್ ವಿನ್ಯಾಸ ಮಾಡುವಲ್ಲಿ ಅದರ ಸಂಪೂರ್ಣ ರೂಪುರೇಷೆ ಸಿದ್ಧಪಡಿಸುವಲ್ಲಿ ನೆರವಾದ ಜಿ.ವಿ. ನಿರ್ಮಲ, ಎಚ್.ಸಿ. ಭುವನೇಶ್ವರಿ, ಎಸ್.ಕ್ಷಮಾ, ಸವಿತ ಶ್ರೀನಿವಾಸ, ಸರ್ವಮಂಗಳರವರಿಗೆ ಹೃತ್ಪೂರ್ವಕ ವಂದನೆಗಳು. ಅತ್ಯಂತ ಕಡಿಮೆ ಅವಧಿಯಲ್ಲಿ `ವಿಶೇಷ ಲೇಖಕಿ' ಸ್ಮರಣ ಸಂಚಿಕೆಯನ್ನು ಮುದ್ರಿಸಿಕೊಟ್ಟ ಇಳಾ ಮುದ್ರಣದ ಬಿ. ಗುರುಮೂರ್ತಿಯವರಿಗೂ ಧನ್ಯವಾದಗಳು.

ಡಾ. ವಸುಂಧರಾ ಭೂಪತಿ